ಒಬ್ಬ ಶ್ರೀಮಂತ ಯುವ ಉದ್ಯಮಿ ತಾನು ಪ್ರೀತಿಸಿ ಮದುವೆಯಾದ ಹುಡುಗಿಯ ಜೊತೆಗೆ ಬೆಂಗಳೂರಿನಿಂದ ನೂರಾರು ಕಿ. ಮೀ ದೂರದಲ್ಲಿರುವ ತನ್ನ ಎಸ್ಟೇಟ್‌ಗೆ
ಹನಿಮೂನ್ ಟ್ರಿಪ್‌ಗಾಗಿ ಕಾರಿನಲ್ಲಿ ಹೊರಡುತ್ತಾನೆ. ಬೆಂಗಳೂರಿನಿಂದ ಹೊರಟ ಕಾರು ಹೈವೆಗೆ ಬಂದು ಅಲ್ಲಿಂದ “ಬೈಪಾಸ್ ರೋಡ್’ನತ್ತ ತಿರುವು ಪಡೆದುಕೊಳ್ಳುತ್ತದೆ. ಹೀಗೆ ತಿರುವು ಪಡೆದುಕೊಂಡು ಕಾಡಿನ ಮಾರ್ಗದಲ್ಲಿ ನವ ಜೋಡಿ ಸಂಚರಿಸುವ ಕಾರಿಗೆ ಒಂದಷ್ಟು ಅಪರಿಚಿತರು ಜೊತೆಯಾಗುತ್ತಾರೆ. ಅಲ್ಲಿಂದ ಈ ಎಲ್ಲರ ಪ್ರಯಾಣ ಹೇಗೆ ಸಾಗುತ್ತದೆ? ಅಂತಿಮವಾಗಿ ಹನಿಮೂ®ಗೆಂದು ಹೊರಟ ದಂಪತಿ ತಾವು ಸೇರಬೇಕಾದ ಜಾಗ ಸೇರುತ್ತಾರಾ? ಇಲ್ಲವಾ? ಅನ್ನೋದೆ ಈ ವಾರ ತೆರೆಗೆ ಬಂದಿರುವ “ಬೈಪಾಸ್ ರೋಡ್’ ಸಿನಿಮಾದ ಕಥಾಹಂದರ.
ಒಂದು ಟ್ರಾವೆಲ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡು ಅದರಲ್ಲಿ ಒಂದಷ್ಟು ಸಸ್ಪೆನ್ಸ್, ಥ್ರಿಲ್ಲಿಂಗ್ ಮತ್ತು ಕ್ರೈಂ ಅಂಶಗಳನ್ನು ಇಟ್ಟುಕೊಂಡು “ಬೈಪಾಸ್ ರೋಡ್’ ಸಿನಿಮಾದ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ಹೇಳಿದ್ದಾರೆ ನಿರ್ದೇಶಕ ಶ್ರೀನಿವಾಸ್.
ಆರಂಭದಲ್ಲಿ ಮಾಮೂಲಿ ಜರ್ನಿಯಂತೆ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುವ ಸಿನಿಮಾದ ಕಥೆ, ನಂತರ ನಿಧಾನವಾಗಿ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗಿ ಮಧ್ಯಂತರದ ವೇಳೆಗೆ ಒಂದಷ್ಟು ಕುತೂಹಲವನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸುತ್ತದೆ. ಅಂತಿಮವಾಗಿ, ಈ ಎಲ್ಲ ಕುತೂಹಲಕ್ಕೂ ಕ್ಲೈಮ್ಯಾಕ್ಸ್‌ನಲ್ಲಿ ಉತ್ತರ ಸಿಗುತ್ತದೆ. ಸಿನಿಮಾದ ಕಥಾಹಂದರ ಚೆನ್ನಾಗಿದ್ದರೂ, ಚಿತ್ರಕಥೆ ಮತ್ತು ನಿರೂಪಣೆಗೆ ಕೊಂಚ ವೇಗ ಸಿಕ್ಕು, ಸಂಭಾಷಣೆ ಮೊನಚಾಗಿದ್ದರೆ, “ಬೈಪಾಸ್ ರೋಡ್’ ಜರ್ನಿ ಇನ್ನಷ್ಟು ಸ್ಪೀಡಾಗಿ, ರೋಚಕವಾಗಿ ಮುಗಿಯುವ ಸಾಧ್ಯತೆಗಳಿದ್ದವು.
ಇನ್ನು ನವನಟ ಭರತ್ ಕುಮಾರ್, ತಿಲಕ್, ನೇಹಾ ಸಕ್ಸೇನಾ, ನೀತೂ ಗೌಡ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉದಯ್, ಉಗ್ರಂ ಮಂಜು ಇರುವಷ್ಟು ಹೊತ್ತು ತೆರೆಮೇಲೆ ಗಮನ ಸೆಳೆಯುತ್ತಾರೆ. ಉಳಿದಂತೆ ಚಿಕ್ಕಣ್ಣ, ತಬಲನಾಣಿ ಪಾತ್ರಗಳು ನಿರೀಕ್ಷಿಸುವ ಮಟ್ಟಿಗೆ ಮನರಂಜನೆ ನೀಡಲಾರವು. ಇನ್ನಿತರ ಪಾತ್ರಗಳಿಗೆ ಚಿತ್ರದಲ್ಲಿ ಹೆಚ್ಚಿನ ಪ್ರಾದಾನ್ಯತೆ ಇಲ್ಲದಿರುವುದ ರಿಂದ, ಅವುಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ ದೃಶ್ಯಗಳನ್ನು ತೆರೆಮೇಲೆ ಅಂದವಾಗಿ ಕಾಣುವಂತೆ ಮಾಡಿದ್ದು, ಒಂದೆರಡು ಹಾಡುಗಳು ಗುನುಗು ವಂತಿದೆ. ವಾರಾಂತ್ಯದಲ್ಲಿ ಒಮ್ಮೆ “ಬೈಪಾಸ್ ರೋಡ್’ ಜರ್ನಿ ನೋಡಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್