ಕನ್ನಡ ನಾಡು, ನುಡಿ ನಿಸಾರ್ ಅಹಮದ್ ಕವಿತೆಯನ್ನು ನಮ್ಮ ಜನತೆ ಅರ್ಥಮಾಡಿಕೊಳ್ಳಬೇಕು. ನಾಡು, ನುಡಿ ಎಂದಾಕ್ಷಣ ಅದು ಕೇವಲ ಭೂಪಟದ ನಕಾಶೆಯಲ್ಲ. ನಿಸಾರ್ ಅಹಮದ್ ಕವಿತೆಯಲ್ಲಿ ಹೇಳಿದ್ದಂತೆ, “ಕನ್ನಡ ಎಂದರೇ ಬರಿ ನುಡಿಯಲ್ಲ’, ಹಿರಿದಿದೆ ಎಂದರ್ಥ, “ಜಲವೆಂದರೇ ಕೇವಲ ನೀರಲ್ಲ’, ಪಾವನ ತೀರ್ಥ, ಕನ್ನಡ ತಿಂಗಳ ನಡೆಸುವ ಕಾಮನ ಬಿಲ್ಲು; ಕಲಿ ಶಶಿ ತಾರೆಯ ನಿತ್ಯೋತ್ಸವವೋ ಸರಸ್ವತಿ ವೀಣೆಯ ಸೊಲ್ಲು.’ ಪದ ಪ್ರಯೋಗವನ್ನು ಗಮನಿಸಿದರೆ, ಕನ್ನಡ ನಾಡಿನ ಜನತೆಗೆ ಕೇವಲ ಮೆದುಳಿನಲ್ಲಿ, ಬುದ್ಧಿಯಲ್ಲಿ ಕನ್ನಡ ಕನ್ನಡ ಎಂದರೇ ಸಾಲದು. ಹೃದಯದಲ್ಲಿ ಕನ್ನಡ ಎನ್ನುವುದು ಕನ್ನಡಿಯಾಗಿ, ಚೆನ್ನುಡಿಯಾಗಿ, ಮುನ್ನುಡಿಯಾಗಿ, ಬೆನ್ನುಡಿಯಾಗಿ, ತನ್ನುಡಿಯಾಗಿ ಶೋಭಿಸುತ್ತದೆ.
ನಿತ್ಯೋತ್ಸವದಲ್ಲಿ ಕೇವಲ ಉತ್ಸವ ಮಾಡುವುದಕ್ಕೆ ಮಾತ್ರ ಸೀಮಿತವಾಗಬಾರದು. ಕನ್ನಡ ಜನರ ನಡೆ-ನುಡಿಗಳಲ್ಲಿ ಹಾಸುಹೊಕ್ಕಾಗಬೇಕು. ಕೇವಲ ನಾವು ಅಬ್ಬರದ ಉತ್ಸವಗಳನ್ನು ಮಾಡಿದರೆ ಅದಕ್ಕೆ ಅರ್ಥವಿಲ್ಲ. ನೀರ ಮೇಲಿನ ಗುಳ್ಳೆಯಂತೆ. ಕರ್ನಾಟಕ ಎಂದ ಕೂಡಲೇ ರಾಜರಾಜೇಶ್ವರಿ ಚಿತ್ರ ನಮ್ಮ ಕಣ್ಣ ಮುಂದೆ ಬರಬೇಕು. ಇಡೀ ಕನ್ನಡ ನಾಡಿನ ಜನ ಜೀವನ, ಪರಂಪರೆ ನಮ್ಮ ಹೃದಯದಲ್ಲಿ ವೈದ್ಯವಾಗಬೇಕು.
ಇಂದಿನ ಜಾಗತಿಕರಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಅಪಾಯವೇನೂ ಇಲ್ಲ. ಉಪಾಯವಿದೆ, ಕೇವಲ ಕುಳಿತ ಕಡೆಗಳಲ್ಲಿ ಕನ್ನಡದ ಬಗ್ಗೆ ಮಾತುಕತೆಗಳಲ್ಲಿ ನಾವು ಮಂತ್ರ ವಾಚನ ಮಾಡಿದಂತೆ ಮಾಡುವುದಕ್ಕಿಂತಲೂ ಯಂತ್ರ ಪೆಟ್ಟಿಗೆಗಳ ಸೌಲಭ್ಯ (ಇಂಟರ್‌ನೆಟ್) ಕುಳಿತಲ್ಲೇ ಲಕ್ಷಾಂತರ ಜನ ಕೋಟ್ಯಂತರ ಜನರ ಹೃದಯ ಮುಟ್ಟುವ ಹಾಗೆ, ಕಿವಿಗೆ ಹೇಳುವ ಹಾಗೂ ನಾಲಿಗೆ ನುಡಿಯುವ ಹಾಗೇ ತಿಳಿಸುವುದಕ್ಕೆ ಸಹಕಾರಿಯಾಗಿದೆ. ಅನಾವಶ್ಯಕವಾಗಿ ದುಂದು ವೆಚ್ಚಗಳಿಂದ ಸಭೆ-ಸಮಾರಂಭ ಏರ್ಪಡಿಸಿ ಹೆಚ್ಚು ವೇಳೆ ವ್ಯಯಿಸುವುದಕ್ಕಿಂತ ಶಾಲಾ-ಕಾಲೇಜುಗಳಲ್ಲಿ ಯಂತ್ರ
ಪೆಟ್ಟಿಗೆಗಳ ಮೂಲಕ ಕನ್ನಡದ ನಾಡು, ನುಡಿಯ ಸಮಗ್ರ ಇತಿಹಾಸ, ಪರಂಪರೆಯನ್ನು, ಕವಿ-ಕಾವ್ಯ ವಿಚಾರಗಳನ್ನು, ಸಾಧು-ಸಂತರನ್ನು ದೇಶ ಮತ್ತು ನಾಡು-ನುಡಿಗಾಗಿ ಶ್ರಮಿಸುತ್ತಿರುವ ಜ್ಞಾನಿಗಳು ಮತ್ತು ವಿಜ್ಞಾನಿಗಳನ್ನು ಪರಿಚಯಿಸುವ ಮಾಲಿಕೆ ಆರಂಭವಾದರೆ, ಬಸವಣ್ಣನವರ ಮಾತಿನಂತೆ ಅಂಗೈಯಲ್ಲೇ ಲಿಂಗವನ್ನು ಕಾಣಬಹುದು ಎನ್ನುವಂತೆ ಕನ್ನಡದ ಜತೆಗೆ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷದ ಈ ಸುದಿನದಲ್ಲಿ ಕನ್ನಡದ ಋಣ ತೀರಿಸಿದಂತಾಗುತ್ತದೆ.
ಪ್ರತಿಯೊಬ್ಬರ ನಾಲಿಗೆಯಲ್ಲಿ ಕನ್ನಡ ಪುಟಿಯಬೇಕು. ಕನ್ನಡ ಪರಿಚಯಿಸುವ ಕೆಲಸ ಸಾಕ್ಷರರು ಮಾಡಬೇಕು. ಗ್ರಾಮಾಂತರ ಪ್ರದೇಶಗಳಲ್ಲೂ ಇಂದು ಕನ್ನಡ ಭಾಷೆ ಮರೆಯಾಗುತ್ತಿದೆ. ಇದಕ್ಕೆ ಕಾರಣ ಜೀವನ ನಿರ್ವಹಣೆಗೆ ಕನ್ನಡವೊಂದೇ ನಂಬಿಕೊಂಡರೆ ಬದುಕಿಗೆ ಭವಿಷ್ಯವಿಲ್ಲ ಎನ್ನುವಂತಹ ಗುಮ್ಮವನ್ನು ನಾವು ಹಬ್ಬಿಸುತ್ತಿದ್ದೇವೆ. ನಾಯಿ ಕೊಡೆಗಳಂತೆ ಅನ್ಯಭಾಷಿಯ ಶಾಲೆಗಳು ತಲೆ ಎತ್ತುತ್ತಿವೆ. ಇದು ಅಪಾಯಕಾರಿಯಾಗಿದ್ದು, ಮಕ್ಕಳಿಗೆ ಮನೆಯಲ್ಲೂ ಕನ್ನಡವಿಲ್ಲ. ಶಾಲೆಯಲ್ಲೂ ಕನ್ನಡವಿಲ್ಲ, ಸಮಾಜದಲ್ಲೂ ಕನ್ನಡವಿಲ್ಲದಂತಾಗಿದೆ. ಉದ್ಯೋಗಕ್ಕಾಗಿ ವಿದ್ಯೆ ಎಂಬ ಮನೋಭಾವನೆ ಭಾಷೆಯನ್ನು ದೂರ ಮಾಡುತ್ತಿರುವುದು ದುರಂತವಾಗಿದೆ. ಅದಕ್ಕಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಯಂತ್ರದ ಮೂಲಕ (ಮೊಬೈಲ್) ನಾಡು, ನುಡಿಯ ಸಮಗ್ರ ಪರಿಚಯವನ್ನು ಪ್ರತಿಯೊಬ್ಬ ಪೋಷಕರು ತಮ್ಮ ಕುಟುಂಬಕ್ಕೆ ಸಾಹಿತ್ಯವನ್ನು ಓದಿ ತಿಳಿಸುವ ಕೆಲಸ ಮಾಡಬೇಕು. ಮಕ್ಕಳಿಗೆ ನಮ್ಮ ಇತಿಹಾಸ, ಭಾಷೆ, ಕವಿಗಳ ಕುರಿತ ಸ್ಥಳಗಳಿಗೆ ಕರೆದೊಯ್ದು ಭಾಷೆಯ ಬಗ್ಗೆ ಪರಿಚಯಿಸುವ ಕೆಲಸ ಮಾಡಬೇಕು. ಈ ಕೆಲಸವನ್ನು ನಾವು, ನೀವೆಲ್ಲರೂ ಮಾಡಬೇಕು.
-ಹಿರೇಮಗಳೂರು ಕಣ್ಣನ್, ಕನ್ನಡದ ಪೂಜಾರಿ, ಖ್ಯಾತ ವಾಗ್ಮಿ