ಅಪ್ಪಟ ಕನ್ನಡದ ನಟಿ ಹರಿಪ್ರಿಯಾ, ದಿಢೀರನೆ ತಮ್ಮ ಕನ್ನಡ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ. ಅದರಲ್ಲೂ ಹರಿಪ್ರಿಯಾ ಸ್ವತಃ ಕನ್ನಡದಲ್ಲೇ ಅಂದವಾಗಿ ಬರೆದಿರುವ ಪತ್ರ ಎಂಬುದು ವಿಶೇಷ. ಅಷ್ಟಕ್ಕೂ ಹರಿಪ್ರಿಯಾ ಹಾಗೆ, ಕನ್ನಡದಲ್ಲಿ ಪತ್ರ ಬರೆಯೋಕೆ ಕಾರಣ ಏನು? ಸಹಜವಾಗಿಯೇ ಇಂಥದ್ದೊಂದು ಪ್ರಶ್ನೆ ಎಲ್ಲರಿಗೂ ಎದುರಾಗುತ್ತದೆ. ವಿಷಯವಿಷ್ಟೇ, ಇತ್ತೀಚೆಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ತಮಿಳು ಸಂದರ್ಶನವೊಂದರಲ್ಲಿ ತಮಿಳು ಭಾಷೆಯಲ್ಲೇ ಉತ್ತರಕೊಡುತ್ತ, ತಮಗೆ ಕನ್ನಡ ಬರಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಸಾಮಾಜಿಕ ತಾಣಗಳಲ್ಲಿ ರಶ್ಮಿಕಾ ಮಂದಣ್ಣ ಕುರಿತು ಸಾಕಷ್ಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ಅದಾದ ಬಳಿಕ ಕರ್ನಾಟಕದವರಾಗಿ ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್‌ಪಟ್ಟ ಅಲಂಕರಿಸಿರುವ ಅನುಷ್ಕಾ ಶೆಟ್ಟಿ ಕೂಡ ಅವರ ತಾಯಿ ಹುಟ್ಟು ಹಬ್ಬಕ್ಕೆ ಕನ್ನಡದಲ್ಲೇ ಬರೆದು ಪೋಸ್ಟ್ ಮಾಡಿದ್ದರು. ಅದು ಸಹ ಕನ್ನಡಿಗರಲ್ಲಿ ಸಂತಸ ಹೆಚ್ಚಿತ್ತು. ಹರಿಪ್ರಿಯಾ ಕೂಡ ತೆಲುಗು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದವರು. ಅವರೆಂದೂ, ಕನ್ನಡ ಭಾಷೆ ಬಗ್ಗೆ ಕೇವಲವಾಗಿ ಮಾತಾಡಿದವರಲ್ಲ. ಎಲ್ಲೇ ಹೋದರೂ, ಕನ್ನಡಾಭಿಮಾನ ತೋರುತ್ತಿದ್ದ ಹರಿಪ್ರಿಯಾ, ಈಗ ಕನ್ನಡಿಗರಿಗೊಂದು ಬರೆದಿರುವ ಪತ್ರದಲ್ಲಿ ಹೀಗೆ ಬರೆದಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ನನಗೆ ಕನ್ನಡ ಓದಲು, ಬರೆಯಲು, ಮಾತನಾಡಲು ತುಂಬಾ ಚೆನ್ನಾಗಿ ಬರುತ್ತದೆ. ಇದು ನನ್ನ ಬರಹ. ಕೆಲ ಅಭಿಮಾನಿಗಳು ನಾನು ಟ್ವಿಟ್ಟರ್‌ನಲ್ಲಿ ಮಾಡುವ ಪೋಸ್ಟ್‍ಗೆ ಕಾಮೆಂಟ್ ಮಾಡುವಾಗ, ಕನ್ನಡದಲ್ಲಿ ಬರೆಯಿರಿ ಎಂದು ಹೇಳುತ್ತಾರೆ. ನನಗೆ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಹಾಗಾಗಿ ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣಕ್ಕೆ ಬರೆಯುತ್ತಿದ್ದೆ. ಕೆಲವೊಮ್ಮೆ ಕನ್ನಡ ಬರೆಯುವಾಗ, ತಪ್ಪುಗಳಾಗುತ್ತವೆ. ಇನ್ನು, ಚಿತ್ರೀಕರಣ ವೇಳೆ ದೀರ್ಘವಾಗಿ ಟೈಪ್ ಮಾಡಲು ಸಮಯ ಕೂಡ ಸಿಗುವುದಿಲ್ಲ. ಈ ಕಾರಣಗಳಿಂದಾಗಿಯೇ ಕನ್ನಡದಲ್ಲಿ ಪೋಸ್ಟ್ ಮಾಡುವುದಿಲ್ಲ. ಯಾರೂ ತಪ್ಪು ತಿಳಿಯಬೇಡಿ’ ಎಂದು ಕನ್ನಡಾಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ ಹರಿಪ್ರಿಯಾ.
ಅದೇನೆ ಇರಲಿ, ಹರಿಪ್ರಿಯಾ, ಅಪ್ಪಟ ಕನ್ನಡತಿ. ಸ್ಪಷ್ಟವಾಗಿ ಕನ್ನಡ ಮಾತಾಡುತ್ತಾರೆ. ಮುದ್ದಾಗಿಯೇ ಕನ್ನಡ ಬರೆಯುತ್ತಾರೆ ಎಂಬುದಕ್ಕೆ ಅವರು ಬರೆದ ಕನ್ನಡ ಪತ್ರವೇ ಸಾಕ್ಷಿ. ಕನ್ನಡದ ಅನೇಕ ನಟಿಯರು ಕನ್ನಡ ಗೊತ್ತಿದ್ದರೂ, ಕನ್ನಡ ಮಾತನಾಡಲು ಹಿಂಜರಿಯುವಾಗ, ಹರಿಪ್ರಿಯಾ, ಇರುವ ವಿಷಯವನ್ನು ನೇರವಾಗಿ ಸ್ಪಷ್ಟಪಡಿಸಿರುವುದು ಅವರ ಅಭಿಮಾನಿಗಳಿಗೆ ತುಸು ಖುಷಿಯನ್ನು ಹೆಚ್ಚಿಸಿದೆ.