Advertisement
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಮುಗುಳಿ ಗ್ರಾಮದ ಮಂಜುನಾಥ್ ಬದ್ರಿಶೆಟ್ಟಿ ಎಂಬವರು ರಾಜ್ಯದ ಗಡಿ ಪ್ರದೇಶವಾದ ಕಾಂಚನಪಲ್ಲಿಯಿಂದ ಮಹಾರಾಷ್ಟ್ರದ ನಿಪ್ಪಾಣಿ ಗಡಿವರೆಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ. ನೆರೆಯ ಮಹಾರಾಷ್ಟ್ರದ ಗಡಿಯಲ್ಲಿರುವ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಟಾಳಿಕೆ ನಿಲ್ಲಿಸಬೇಕು, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಬೇಕು,ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ತಾಲೂಕು ಕೇಂದ್ರಗಳಲ್ಲಿ ಶ್ರೀಭುವನೇಶ್ವರಿ ತಾಯಿಯ ಮಂದಿರ ನಿರ್ಮಿಸುವ ಉದ್ದೇಶದೊಂದಿಗೆ ಕನ್ನಡ ಧ್ವಜ, ವಸ್ತ್ರಗಳನ್ನು ಧರಿಸಿ ಪಾದಯಾತ್ರೆ ಆರಂಭಿಸಿದ್ದಾರೆ.
Related Articles
Advertisement
ಘೋಷಣೆಗಳು: ಕನ್ನಡ ವಿಶ್ವ ಲಿಪಿಗಳ ರಾಣಿ. ಕನ್ನಡಿಗರು ಕನ್ನಡಕ್ಕಾಗಿ ದಿಲ್ಲಿಯವರೆಗೆ ಅಲ್ಲ, ಗಲ್ಲಿಗೆ ಹೋಗಲೂ ಸಿದ್ಧರು. ಕನ್ನಡಿಗರು ನಾಡು ನುಡಿ ಸಾಹಿತ್ಯ, ಸಂಸ್ಕೃತಿಗಾಗಿ ತಮ್ಮ ರಕ್ತವನ್ನೇ ಹರಿಸಲು ಸಿದ್ಧರೆಂದರೆ ತಾಯಿ ಮತ್ತು ತಾಯ್ನಾಡು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರೆಂದು ಜಗತ್ತಿಗೆ ಸಾರಲು ಹೊರಟಿದ್ದೇನೆ’ ಎಂಬ ಘೋಷಣೆಗಳೊಂದಿಗೆ ಕನ್ನಡ ಫಲಕಗಳನ್ನು ಹಿಡಿದು ಪಾದಯಾತ್ರೆ ಮಾಡುತ್ತಿದ್ದಾರೆ.
ಮಂದಿರ, ಶಾಲೆಯಲ್ಲಿ ವಿಶ್ರಾಂತಿ : ಪಾದಯಾತ್ರೆ ಆರಂಭಿಸಿ ಸಂಜೆ ವೇಳೆಗೆ ಯಾವುದಾದರು ಒಂದು ಹಳ್ಳಿ ಅಥವಾ ನಗರ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಲು ಗುಡಿ ಮತ್ತು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಪಾದಯಾತ್ರೆಯ ಅನುಭವಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿರುವ ಮಂಜುನಾಥ್ ಬದ್ರಿಶೆಟ್ಟಿ, ಈಗಾಗಲೇ ಜಿಲ್ಲೆಯ ಗೌರಿಬಿದನೂರಿನಲ್ಲಿ ನಾಗರಿಕರು 2,500 ರೂ. ಸಹಾಯ ಮಾಡಿದ್ದಾರೆ. ನನ್ನ ಪಾದಯಾತ್ರೆ ಸಂದರ್ಭದಲ್ಲಿ ನಾಗರಿಕರು ನೀಡುವ ದೇಣಿಗೆಯನ್ನು ಕೊನೆಯಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದರು.
ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲಿನ ಅಭಿಮಾನದಿಂದ ಪಾದಯಾತ್ರೆ ಆರಂಭಿಸಿದ್ದೇನೆ. ಈಗಾಗಲೇ ಒಂದು ಬಾರಿ ಕನ್ನಡಿಗರಿಗೆ ನ್ಯಾಯ ಒದಗಿಸಲು ರಕ್ತದಿಂದ ಪತ್ರ ಬರೆದಿದ್ದೇನೆ. ಕನ್ನಡಕ್ಕಾಗಿ ಪ್ರಾಣ ತ್ಯಾಗ ಮಾಡಲೂ ಸಿದ್ಧನಿದ್ದೇನೆ. ಈಗಾಗಲೇ “ಅನುಭವದ ಅಲೆಗಳು’ ಎಂಬ 52 ಪುಟಗಳ ಕೃತಿಯನ್ನು ರಕ್ತದಲ್ಲಿ ಬರೆದಿದ್ದು ಕಸಾಪ ಅಧ್ಯಕ್ಷರಿಗೆ ಹಸ್ತಾಂತರ ಮಾಡುತ್ತೇನೆ. –ಮಂಜುನಾಥ್ ಬದ್ರಿಶೆಟ್ಟಿ, ಪಾದಯಾತ್ರೆ ಕೈಗೊಂಡವರು
–ಎಂ.ಎ.ತಮೀಮ್‌ಪಾಷ