ಬೆಂಗಳೂರು: ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಬೆಳಗಾವಿ ಅಧಿವೇಶನದಲ್ಲಿ ಒಪ್ಪಿಗೆ ಪಡೆದು ಜ.1ರಿಂದ ಅನುಷ್ಠಾನಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕನ್ನಡಿಗರಿಗೆ ಇಂತಿಷ್ಟು ಪ್ರಮಾಣದ ಉದ್ಯೋಗ ಕಡ್ಡಾಯ, ಉದ್ದಿಮೆ ಸ್ಥಾಪಿಸುವ ಹಂತದಲ್ಲೇ ಷರತ್ತು, ಉಲ್ಲಂಘನೆ ಮಾಡುವವರಿಗೆ ಸಬ್ಸಿಡಿ ಕಡಿತ ಎಲ್ಲ ಅಂಶಗಳನ್ನೂ ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
ವಿಧೇಯಕ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಸೇರಿ ಹಲವು ಸಂಘ-ಸಂಸ್ಥೆ, ಸಾಹಿತಿ-ಲೇಖಕರು, ತಜ್ಞರು, ಭಾಷಾ ವಿದ್ವಾಂಸರಿಂದ ಹಲವಾರು ಸಲಹೆ-ಸೂಚನೆ ಸಹ ಬಂದಿದ್ದು ಎಲ್ಲವನ್ನೂ ಪರಿಶೀಲಿಸಿ ಉತ್ತಮ ಸಲಹೆ ಸ್ವೀಕಾರ ಮಾಡಿ ಅಂತಿಮವಾಗಿ ವಿಧೇಯಕಕ್ಕೆ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದರು.
ಕನ್ನಡ ಸಂಸ್ಕೃತಿ ಮೂಲ ಸಂಸ್ಕೃತಿ: ನಶಿಸಿಹೋಗುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಡಿ.6 ರಿಂದ ಎರಡು ತಿಂಗಳು “ಕನ್ನಡ ಸಂಸ್ಕೃತಿ ಮೂಲ ಸಂಸ್ಕೃತಿ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಲಂಬಾಣಿ ನೃತ್ಯ, ದಲಿತ ಸಾಂಸ್ಕೃತಿಕ ಆಚರಣೆ, ಲಾವಣಿ ಪದ ಹೀಗೆ ಮೂಲ ಸಂಸ್ಕೃತಿಯ ಕುರಿತು ಶಿಬಿರ, ಪ್ರದರ್ಶನ ನಡೆಯಲಿದೆ. ಹೊಸ ಕಲಾತಂಡಗಳಿಗೆ ಇದಕ್ಕೆ ಅವಕಾಶ ಮಾಡಿಕೊಡಲಾಗುವುದು. ಮೂಲ ಸಂಸ್ಕೃತಿ ಆಧುನಿಕತೆಯ ಜತೆ ಬೆರೆಯುತ್ತಿಲ್ಲ. ಹೀಗಾಗಿ, ಇಂತದ್ದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಡಿ.28 ರಂದು ಶಿರಸಿಯಿಂದ ಭುವನೇಶ್ವರಿ ರಥ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಜ.5 ಕ್ಕೆ ಹಾವೇರಿ ತಲುಪಲಿದೆ.
-ವಿ.ಸುನಿಲ್‌ಕುಮಾರ್, ಸಚಿವ