Advertisement

ಕನ್ನಡದಲ್ಲೇ ನ್ಯಾಯ? ಪ್ರಾದೇಶಿಕ ಭಾಷೆ ಬಳಕೆಗೆ ಸಮಿತಿ ಸಲಹೆ

03:45 AM Feb 20, 2017 | Team Udayavani |

ನವದೆಹಲಿ: ರಾಜ್ಯದ ಹೈಕೋರ್ಟ್‌ನಲ್ಲಿ ಕನ್ನಡದಲ್ಲೇ ವಾದ ಮಂಡಿಸುವಂತಾದರೆ…!

Advertisement

ಇಂಥದ್ದೊಂದು ಮಹದಾಸೆ ಮತ್ತೂಮ್ಮೆ ಹುಟ್ಟಿಕೊಂಡಿದೆ. ಸಿಬ್ಬಂದಿ, ಕಾನೂನು ಮತ್ತು ನ್ಯಾಯಕ್ಕೆ ಕುರಿತಾದ ಸಂಸದೀಯ ಸಮಿತಿ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಆಯಾ ಭಾಷೆಗಳಲ್ಲೇ ಕಲಾಪ ನಡೆಸಬಹುದು ಎಂಬ ಸಲಹೆ ನೀಡಿದ್ದು, ಇಂಥ ಆಸೆ ಚಿಗುರಲು ಕಾರಣವಾಗಿದೆ.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಆನಂದ್‌ ಶರ್ಮಾ ಅವರ ನೇತೃತ್ವದ ಈ ಸಮಿತಿಯು ಕೇಂದ್ರ ಸರ್ಕಾರವೇ ಹೈಕೋರ್ಟ್‌ಗಳಲ್ಲಿ ಆಯಾ ಭಾಷೆಗಳಲ್ಲೇ ಕಲಾಪ ನಡೆಸಲು ಒಪ್ಪಿಗೆ ನೀಡಬಹುದು. ಇದಕ್ಕೆ ನ್ಯಾಯಾಂಗದ ಒಪ್ಪಿಗೆ ಬೇಕಾಗಿಲ್ಲ ಎಂದು ಹೇಳಿದೆ. ಒಂದು ವೇಳೆ ಈ ಸಮಿತಿಯ ಸಲಹೆಗಳನ್ನು ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತಂದಲ್ಲಿ, ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲಗು…, ಹೀಗೆ ಆಯಾ ಸ್ಥಳೀಯ ಭಾಷೆಗಳಲ್ಲೇ ಕೋರ್ಟ್‌ ಕಲಾಪ ನಡೆಸಬಹುದಾಗಿದೆ.

ಆದರೆ, 2012ರ ಅ. 11ರಂದು ಸುಪ್ರೀಂಕೋರ್ಟ್‌ನ ಪೂರ್ಣಪೀಠ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದಿ ಮತ್ತು ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಆಯಾ ಭಾಷೆಗಳನ್ನು ಬಳಕೆ ಮಾಡಲು ಒಪ್ಪಿಗೆ ನೀಡಲು ಸಾಧ್ಯವೇ ಇಲ್ಲ ಎಂದಿತ್ತು. ಅಲ್ಲದೆ ಈ ಬಗ್ಗೆ ಆಗ ಭಾರಿ ಚರ್ಚೆಯಾಗಿ ಸಂವಿಧಾನದ ಪರಿಚ್ಛೇದ 348(2) ದಂತೆ ರಾಷ್ಟ್ರಪತಿ ಅವರೇ ಹಿಂದಿ ಮತ್ತು ಇತರೆ ಪ್ರಾದೇಶಿಕ ಭಾಷೆಗಳ ಬಳಕೆಗೆ ಅನುವು ಮಾಡಿಕೊಡಬಹುದು ಎಂಬ ವಾದ ವಿವಾದಗಳೂ ನಡೆದಿದ್ದವು. ಆದರೆ ಇವೆಲ್ಲವನ್ನೂ ತಿರಸ್ಕರಿಸಿದ್ದ ಕೋರ್ಟ್‌ 1997 ಮತ್ತು 1999ರ ತೀರ್ಪುಗಳನ್ನು ಉಲ್ಲೇಖೀಸಿತ್ತು.

ಸದ್ಯ  ಸುಪ್ರೀಂ ಕೋರ್ಟ್‌ ಹಾಗೂ ದೇಶದ 24 ಹೈ ಕೋರ್ಟ್‌ಗಳಲ್ಲಿ ಇಂಗ್ಲಿಷ್‌ನಲ್ಲಿಯೇ ಕಲಾಪಗಳು ನಡೆಯುತ್ತಿದ್ದು, ಆದೇಶವನ್ನು ನೀಡಲಾಗುತ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿಯೇ ಕಲಾಪ ಹಾಗೂ ಆದೇಶಕ್ಕೆ ಅವಕಾಶ ನೀಡಬೇಕೆಂದು ಕೋರಿ ಕರ್ನಾಟಕದ ಜೊತೆಗೆ ಕಲ್ಕತ್ತಾ, ಮದ್ರಾಸ್‌, ಗುಜರಾತ್‌ ಹಾಗೂ ಛತ್ತೀಸಗಡ ಹೈಕೋರ್ಟುಗಳು ಪ್ರಸ್ತಾವನೆ ಸಲ್ಲಿಸಿದ್ದವು.

Advertisement

ಕಷ್ಟದ ಮಾತು?
ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ಬಳಕೆ ಮಾಡುವುದು ಕಷ್ಟದ ವಿಚಾರ ಎಂದು ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರು ಹೇಳಿದ್ದಾರೆ. ಕನ್ನಡ ಅಥವಾ ಬೇರಾವುದೇ ಪ್ರಾದೇಶಿಕ ಭಾಷೆಯಲ್ಲಿ ತೀರ್ಪು ಇರಲಿ, ಜತೆಗೆ ಇಂಗ್ಲಿಷಿನಲ್ಲೂ ಇರಲಿ ಎಂದು ಅವರು ಹೇಳಿದ್ದಾರೆ. ಅಲ್ಲದೆ ಹೈಕೋರ್ಟ್‌ಗಳಲ್ಲಿ ಬೇರೆ ರಾಜ್ಯಗಳ ಮೂರರಿಂದ ನಾಲ್ಕು ನ್ಯಾಯಮೂರ್ತಿಗಳಿರುತ್ತಾರೆ. ಅವರ ಮುಂದೆ ಕನ್ನಡದಲ್ಲಿ ವಾದ ಮಾಡುವುದು ಸಾಧ್ಯವೇ ಎಂದೂ ಅವರು ಪ್ರಶ್ನಿಸಿದ್ದಾರೆ. ಆದರೆ ಸುಪ್ರೀಂ ಮತ್ತು ಹೈಕೋರ್ಟ್‌ ಹೊರತುಪಡಿಸಿ ಕೆಳಹಂತದ ನ್ಯಾಯಾಲಯಗಳಲ್ಲಿ ಕನ್ನಡ ಅಥವಾ ಆಯಾ ರಾಜ್ಯದ ಸ್ಥಳೀಯ ಭಾಷೆ ಬಳಕೆ ಮಾಡಬಹುದು ಎಂದು ಹೇಳುತ್ತಾರೆ.

ಮತ್ತೂಮ್ಮೆ ಕರ್ನಾಟಕದ ಮನವಿ
2012ರಲ್ಲೇ ಸುಪ್ರೀಂಕೋರ್ಟ್‌ನ ಪೂರ್ಣಪೀಠ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಟ್‌ ಕಲಾಪ ನ‚ಡೆಸಲು ಒಪ್ಪಿಗೆ ನೀಡುವುದಿಲ್ಲವೆಂದಿದ್ದರೂ, ಕರ್ನಾಟಕ, ತಮಿಳುನಾಡು ಸರ್ಕಾರಗಳು 2014ರ ಅಕ್ಟೋಬರ್‌ 10 ರಂದು ಮತ್ತೆ ಪ್ರಸ್ತಾವನೆ ಸಲ್ಲಿಸಿದ್ದವು. ಈ ಸಂಬಂಧ ಕೇಂದ್ರ ಸರ್ಕಾರ 2014ರ ಜು. 4 ರಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಈ ಮನವಿಗಳನ್ನು ಅಂಗೀಕರಿಸುವಂತೆ ಹೇಳಿತ್ತು. ಇದಕ್ಕೆ ಸುಪ್ರೀಂಕೋರ್ಟ್‌ ಧನಾತ್ಮಕವಾಗಿಯೇ ಸ್ಪಂದಿಸಿ, ಮತ್ತೂಮ್ಮೆ ಪೂರ್ಣ ಪೀಠದಲ್ಲೇ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿತ್ತು.

ಅಸಾಧ್ಯ ಎಂದಿದ್ದ ರಿಜಿಜು
2016ರ ಮೇ 10 ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಕಿರಣ್‌ ರಿಜಿಜು, ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಹಿಂದಿ ಮತ್ತು ಆಯಾ ಪ್ರಾದೇಶಿಕ ಭಾಷೆಗಳ ಬಳಕೆ ಕಷ್ಟ ಎಂದಿದ್ದರು. ಹಿಂದಿ ಮತ್ತು ಇತರೆ ಪ್ರಾದೇಶಿಕ ಭಾಷೆಗಳ ಬಳಕೆ ಬಗ್ಗೆ ಸಿಜೆಐ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ಇದನ್ನು ಅನುಷ್ಠಾನಕ್ಕೆ ತರಲು ಕಷ್ಟವಾಗುತ್ತಿದೆ ಎಂದು ಹೇಳಿದ್ದರು. ಆದರೆ, ಸಂವಿಧಾನದಲ್ಲಿ ಹೇಳಿರುವಂತೆ ಆಯಾ ರಾಜ್ಯಗಳು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಒಪ್ಪಿಗೆ ಮೇರೆಗೆ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಟ್‌ ಕಲಾಪಕ್ಕೆ ಅನುವು ಮಾಡಿಕೊಡಬಹುದು ಎಂಬ ಸಲಹೆಯನ್ನೂ ನೀಡಿದ್ದರು.

ಸಂವಿಧಾನದಲ್ಲಿ ಹೇಳಿರುವುದೇನು?
ಸಂವಿಧಾನದ ಪರಿಚ್ಚೇದ 348(1)ರಲ್ಲಿ  ಸುಪ್ರೀಂಕೋರ್ಟ್‌ ಮತ್ತು ಎಲ್ಲ 24 ಹೈಕೋರ್ಟ್‌ಗಳಲ್ಲಿ ಕೋರ್ಟ್‌ ಕಲಾಪಗಳು ಇಂಗ್ಲಿಷ್‌ನಲ್ಲೇ ಇರಬೇಕು ಎಂದು ಉಲ್ಲೇಖೀಸಲಾಗಿದೆ. ಆದರೆ ಪರಿಚ್ಚೇದ 348(2)ರಲ್ಲಿ ರಾಜ್ಯಗಳು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಒಪ್ಪಿಗೆ ಮೇರೆಗೆ ಆಯಾ ಪ್ರಾದೇಶಿಕ ಭಾಷೆ ಬಳಸಿಕೊಳ್ಳಬಹುದು ಎಂದು ಹೇಳಿದೆ. ಇದನ್ನೇ ಕಿರಣ್‌ ರಿಜಿಜು ಅವರು ಪ್ರಸ್ತಾಪಿಸಿದ್ದರು.

ಇಂಗ್ಲಿಷ್‌ ಜತೆಗೆ ಪ್ರಾದೇಶಿಕ ಭಾಷೆಯಲ್ಲೂ ಇರಲಿ
ನ್ಯಾ. ಎ.ಜೆ. ಸದಾಶಿವ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯಾಲಯದ ಕಲಾಪಗಳು ನಡೆಯಬೇಕು ಹಾಗೂ ತೀರ್ಪುಗಳು ಪ್ರಕಟವಾಗಬೇಕು ಅನ್ನುವುದು ಒಳ್ಳೆಯ ವಿಷಯ. ಆದರೆ, ಪ್ರಾಯೋಗಿಕವಾಗಿ ಅದು ಅನುಷ್ಠಾನಕ್ಕೆ ಬರುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ, ಹಿಂದಿಯ ಜತೆಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ತೀರ್ಪುಗಳು ಪ್ರಕಟಗೊಂಡಾಗ, ಇನ್ನೊಂದು ಪ್ರಾದೇಶಿಕ ಭಾಷಿಕರಿಗೆ ಆ ತೀರ್ಪು ಅರ್ಥ ಆಗಬೇಕಲ್ಲ? ಒಂದು ರಾಜ್ಯದ ಹೈಕೋರ್ಟ್‌ನ ಒಳ್ಳೆಯ ತೀರ್ಪನ್ನು ಇನ್ನೊಂದು ರಾಜ್ಯದ ಹೈಕೋರ್ಟ್‌ ಉಲ್ಲೇಖ ಮಾಡುತ್ತದೆ. ಮದ್ರಾಸ್‌ ಹೈಕೋರ್ಟ್‌ ತಮಿಳು ಭಾಷೆಯಲ್ಲಿ ತೀರ್ಪು ಕೊಟ್ಟರೆ, ಕನ್ನಡಿಗ ವಕೀಲರು ಮತ್ತು ಕಕ್ಷಿದಾರರಿಗೆ ಅದು ಅರ್ಥ ಆಗುವುದಿಲ್ಲ. ಇಂಗ್ಲಿಷ್‌ ಭಾಷೆಯ ಜತೆಗೆ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ತೀರ್ಪುಗಳು ಇದ್ದರೆ ಉತ್ತಮ.

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಕಲಾಪಗಳು ನಡೆಯಬೇಕು ಮತ್ತು ತೀರ್ಪುಗಳು ಹೊರಬೀಳಬೇಕು ಅನ್ನುವುದು ಮೇಲ್ನೋಟಕ್ಕೆ ಒಳ್ಳೆಯ ತೀರ್ಮಾನವಾಗಿರಬಹುದು. ಆದರೆ, ವಾಸ್ತವದಲ್ಲಿ ಇದು ತುಂಬ ಕಷ್ಟದ ಮತ್ತು ಪ್ರಾಯೋಗಿಕವಲ್ಲದ ಮಾತು. ಅಧೀನ ನ್ಯಾಯಲಯಗಳಲ್ಲಿ ಬೇಕಿದ್ದರೆ ಆಯಾ ಪ್ರಾದೇಶಿಕ ಭಾಷೆಗಳೇ ಬಳಕೆ ಆಗಲಿ. ಆದರೆ, ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ಮಟ್ಟದಲ್ಲಿ ಇಂಗ್ಲಿಷ್‌ ಭಾಷೆ ಬಿಟ್ಟರೆ ಬೇರೆ ವಿಧಿಯಿಲ್ಲ.
– ವೈ.ಆರ್‌. ಸದಾಶಿವರೆಡ್ಡಿ, ಭಾರತೀಯ ವಕೀಲರ ಪರಿಷತ್‌ ಸದಸ್ಯ.

ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಹಿಂದಿ ಮತ್ತು ಆಯಾ ರಾಜ್ಯದ ಪ್ರಾದೇಶಿಕ ಭಾಷೆಗಳಷ್ಟೇ ಬಳಕೆ ಮಾಡಬೇಕು ಅನ್ನುವುದು ಸರಿಯಲ್ಲ. ಈಗಾಗಲೇ ಹೈಕೋರ್ಟ್‌ ಮಟ್ಟದಲ್ಲಿ “ಅನುವಾದ ಸೂತ್ರ’ದಡಿ ಕಲಾಪಗಳು ನಡೆಯುತ್ತಿವೆ. ಹೈಕೋರ್ಟ್‌ಗಳಲ್ಲಿ ಮುಖ್ಯನ್ಯಾಯಮೂರ್ತಿ ಹಾಗೂ ಮೂರ್‍ನಾಲ್ಕು ಮಂದಿ ನ್ಯಾಯಮೂರ್ತಿಗಳು ಹೊರ ರಾಜ್ಯದವರಿರುತ್ತಾರೆ. ಅವರ ಮುಂದೆ ಅವರದಲ್ಲದ ಭಾಷೆಯಲ್ಲಿ ವಾದ ಮಂಡಿಸುವುದು ಹೇಗೆ? ಅವರಿಗೆ ಗೊತ್ತಿಲ್ಲದ ಭಾಷೆಯಲ್ಲಿ ಆ ನ್ಯಾಯಮೂರ್ತಿಗಳು ತೀರ್ಪು ಕೊಡುವುದಾದರೂ ಹೇಗೆ? ಅಧೀನ ನ್ಯಾಯಾಲಗಳಲ್ಲಿ ಪ್ರಾದೇಶಿಕ ಭಾಷೆಗೆ ಒತ್ತು ಕೊಡಬೇಕು. ಆದರೆ, ಅದನ್ನೇ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಆಗಬೇಕು ಎಂದರೆ ಕಷ್ಟಸಾಧ್ಯ.
– ಅಶೋಕ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next