ರಾಯಚೂರು: ವಿಶ್ವದಲ್ಲಿ ಸಾಹಿತ್ಯ ಇನ್ನೂ ಆರಂಭಿಕ ಹಂತದಲ್ಲಿರುವಾಗ ಕನ್ನಡ ನೆಲದ ಸಾಹಿತ್ಯ ಪ್ರೌಢಾವಸ್ಥೆಗೆ ತಲುಪಿದ್ದನ್ನು ನಮ್ಮ ಇತಿಹಾಸದ ದಾಖಲೆಗಳು ಸಾರಿ ಹೇಳುತ್ತವೆ ಎಂದು ಸರ್ಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ದಸ್ತಗೀರ್‌ಸಾಬ್ ದಿನ್ನಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾತೃ ಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಪ್ರಾಚೀನ ಕವಿತೆಗಳಲ್ಲಿ ಕನ್ನಡ ನುಡಿ-ನೆಲದ ಬಗ್ಗೆ ಹೊಗಳಿಕೆ ಹಾಗೂ ಹಿರಿಮೆ ಮಾತುಗಳಿವೆ ಎಂದರೆ ಕನ್ನಡ ಸಾಹಿತ್ಯದ ಮಹತ್ವ ಎಂಥದ್ದು ಎಂದು ತಿಳಿಯುತ್ತದೆ. ನಮ್ಮ ನೆಲದ ಭಾಷೆ ಹಾಗೂ ಹಿರಿಮೆ ಅರಿಯಲು, ಮುಂದಿನ ಜನಾಂಗಕ್ಕೆ ತಲುಪಿಸಲು ಭಾಷಾ ದಿವಸ್ ಆಚರಣೆ ಸಹಕಾರಿ. ಇಂತಹ ಕಾರ್ಯಕ್ರಮ ಆಚರಣೆಗೆ ಮುಂದಾದ ಕೇಂದ್ರ ಸರ್ಕಾರದ ನಡೆ ಪ್ರಶಂಸಾರ್ಹ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ| ಯಂಕಣ್ಣ ಮಾತನಾಡಿ, ಕನ್ನಡ ನುಡಿ ಬಹಳ ಸರಳ. ಅದನ್ನು ಸುಲಿದ ಬಾಳೆಹಣ್ಣು ಎಂದು ಕವಿಗಳು ಕರೆದಿದ್ದಾರೆ. ಅಗಾಧ ಜ್ಞಾನ ಹಾಗೂ ಸದಭಿರುಚಿ ಸಾಹಿತ್ಯ ಹೊಂದಿರುವ ಕನ್ನಡ ಭಾಷಾ ಸಾಹಿತ್ಯ ಯಾವ ಪಾಶ್ಚಾತ್ಯ ಸಾಹಿತ್ಯಕ್ಕೂ ಕಡಿಮೆ ಏನಿಲ್ಲ. ಹಾಗೆ ನೋಡಿದರೆ ಹಿರಿಯಣ್ಣ ಸ್ಥಾನದಲ್ಲಿ ಕನ್ನಡ ನಿಲ್ಲುತ್ತದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕ ಹಾಗೂ ಕನ್ನಡ ಉಪನ್ಯಾಸಕ ಮಹಾದೇವಪ್ಪ, ಸಮಾಜಶಾಸ್ತ್ರ ವಿಭಾಗದ ಡಾ| ಜೆ.ಎಲ್. ಈರಣ್ಣ, ಐಕ್ಯುಎಸಿ ಸಂಚಾಲಕ ಮಹಾಂತೇಶ ಅಂಗಡಿ, ಸಹ ಸಂಚಾಲಕಿ ಇಶ್ರತ್ ಬೇಗಂ, ಸೈಯದ್ ಮಿನಾಜ್, ಉಪನ್ಯಾಸಕರಾದ ಆಯೇಷಾ ಸುಲ್ತಾನಾ, ಸುಜಾತಾ ಮಾಕಲ್, ಚಂದ್ರಶೇಖರ ಸಜ್ಜನ, ರಾಜಶೇಖರ್, ರವಿ ಸೇರಿದಂತೆ ಇತರರಿದ್ದರು. ಆ ಪ್ರಯುಕ್ತ ಕಾಲೇಜಿನಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು