Advertisement

ಸಿಬಿಸಿಎಸ್‌ ಪದ್ಧತಿಯಲ್ಲಿ ಕನ್ನಡ ಕಡೆಗಣನೆ

12:50 PM Jul 03, 2018 | |

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾರಿಗೊಳಿಸುತ್ತಿರುವ ಆಯ್ಕೆ ಆಧಾರಿತ ಗುಣಾಂಕ ಪದ್ಧತಿ(ಸಿಬಿಸಿಎಸ್‌)ಯಲ್ಲಿ ಕನ್ನಡ ಭಾಷೆ ಕಡೆಗಣಿಸಿರುವುದನ್ನು ಖಂಡಿಸಿ ಹಾಗೂ ಹೊಸ ಪದ್ಧತಿಯಲ್ಲಿನ ಲೋಪ ಸರಿಪಡಿಸುವಂತೆ ಆಗ್ರಹಿಸಿ ಮೈಸೂರು ವಿವಿ ಪದವಿ ಕನ್ನಡ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.  

Advertisement

ನಗರದ ಮೈಸೂರು ವಿವಿಯ ಕ್ರಾಫ‌ರ್ಡ್‌ ಭವನದ ಎದುರು ಜಮಾಯಿಸಿದ ಸಂಘದ ಸದಸ್ಯರು, ಹಿರಿಯ ಸಾಹಿತಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಚಿಂತಕರು ಮೈಸೂರು ವಿವಿಯು ಪ್ರಸಕ್ತ ಸಾಲಿನಿಂದ ಜಾರಿಗೊಳಿಸುತ್ತಿರುವ ಸಿಬಿಸಿಎಸ್‌ ಪದ್ಧತಿಯಲ್ಲಿ ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿ, ವಿವಿಧ ಘೋಷಣೆಗಳನ್ನು ಕೂಗಿದರು.

ಆತಂಕ: ವಿಶ್ವವಿದ್ಯಾಲಯದ ಪದವಿ ವ್ಯಾಸಂಗದ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಭಾಷೆಯ ವ್ಯಾಸಂಗ ಕಡ್ಡಾಯವಾಗಿದೆ. ಆದರೆ ನೂತನ ಸಿಬಿಸಿಎಸ್‌ ಪದ್ಧತಿಯಿಂದ ಕೇವಲ ಎರಡು ಸೆಮಿಸ್ಟರ್‌ಗಳಲ್ಲಿ ಮಾತ್ರ ಕನ್ನಡ  ಅಧ್ಯಯನ ಮಾಡಲು ಸಾಧ್ಯವಾಗಲಿದ್ದು, ನಂತರ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಸೇರಿಸಲಾಗಿದೆ. ಇಂತಹ ಹಲವು ಲೋಪಗಳು ಸಿಬಿಸಿಎಸ್‌ ಪದ್ಧತಿಯಲ್ಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕನ್ನಡ ಅಧ್ಯಯನವನ್ನೇ ತೆಗೆದು ಹಾಕುವ ಆತಂಕ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಪ್ರತಿಭಟನಾಕಾರರ ಆಕ್ರೋಶ: ವಿವಿಯ ಪದ್ಧತಿಯಲ್ಲಿ ಆಯಾ ವಿಷಯಗಳಿಗೆ ಅನುಗುಣವಾಗಿ ಕನ್ನಡ ಭಾಷೆ ಪಠ್ಯಕ್ರಮ ರಚಿಸಬೇಕು ಹಾಗೂ ಬೋಧನೆ ಮಾಡಬೇಕಿದೆ. ಪದವಿ ಅಧ್ಯಯನದಲ್ಲಿ ಗಣಿತ, ವಿಜ್ಞಾನ, ವಾಣಿಜ್ಯ ಮತ್ತು ವ್ಯವಹಾರ ಶಾಸ್ತ್ರಗಳ ವಿಷಯದ ಜತೆಗೆ ಕನ್ನಡ ಪಠ್ಯವನ್ನು ಅಳವಡಿಸುವುದರಿಂದ ಕನ್ನಡ ಉಳಿಯಲಿದೆ. ಆದರೆ ಯುಜಿಸಿ ಪದವಿ ಪಠ್ಯದಲ್ಲಿ ತಮಿಳು, ತೆಲುಗು ಸೇರಿದಂತೆ ಇನ್ನಿತರ ಭಾಷೆಗೆ ನೀಡಿರುವ ಸ್ಥಾನಮಾನವನ್ನು ಕನ್ನಡಕ್ಕೆ ನೀಡಿಲ್ಲ, ಇದಕ್ಕೆ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯದ ನಿರ್ಲಕ್ಷ್ಯ ಧೋರಣೆಯೇ ಕಾರಣ.

ಇಂತಹ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಕರ್ನಾಟಕ ಯಾವುದೇ ವಿವಿಗಳಲ್ಲಿ ಓದುವ ವಿದ್ಯಾರ್ಥಿಗಳು ಕನ್ನಡ ವ್ಯಾಸಂಗ ಮಾಡದೆಯೇ ತಮ್ಮ ಪದವಿ ಮುಗಿಸಬಹುದಾದ ದುಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Advertisement

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌, ಡಾ.ಮಳಲಿ ವಸಂತಕುಮಾರ್‌, ಜನಪದ ತಜ್ಞ ಪ್ರೊ.ಹಿ.ಶಿ. ರಾಮಚಂದ್ರಗೌಡ, ಚಿಂತಕರಾದ ಪ್ರೊ.ಜಿ.ಎಚ್‌.ನಾಯಕ್‌, ಚ. ಸರ್ವಮಂಗಳಾ, ಹೋರಾಟಗಾರರ ಪ.ಮಲ್ಲೇಶ್‌, ಲೇಖಕ ಬನ್ನೂರು ಕೆ.ರಾಜು, ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ಪ್ರೊ.ಜಿ.ಬಿ.ವೀರಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಚಂದ್ರಶೇಖರ್‌, ಮಡ್ಡಿಕೆರೆ ಗೋಪಾಲ್‌, ಪದವಿ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಎಚ್‌.ಆರ್‌.ತಿಮ್ಮೇಗೌಡ, ಸಂಚಾಲಕ ಡಾ.ಮ.ರಾಮಕೃಷ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. 

ಬೋಧನಾ ಅವಧಿ ಕಡಿತ: ಒಂದೆಡೆ ಕನ್ನಡ ಭಾಷೆಗೆ ಆದ್ಯತೆ ನೀಡದೆ ನಿರ್ಲಕ್ಷ್ಯ ತೋರಿರುವ ಜತೆಗೆ ಕನ್ನಡಕ್ಕೆ ನೀಡುತ್ತಿದ್ದ ಬೋಧನಾ ಅವಧಿ 4 ಗಂಟೆ ಬದಲು 3 ಗಂಟೆಗೆ ಕಡಿತಗೊಳಿಸಲಾಗಿದೆ. ಕನ್ನಡವನ್ನು ಕೇವಲ ಭಾಷೆಯನ್ನಾಗಿ ಕಲಿಸುವುದು ಮಾತ್ರವಲ್ಲದೆ, ಬದುಕಿನ ಮೌಲ್ಯವನ್ನಾಗಿ ಅಥೆಸುವ, ಮನದಟ್ಟು ಮಾಡಿಸಿ ವ್ಯಕ್ತಿತ್ವ ರೂಪಿಸುವ ಪ್ರಕ್ರಿಯೆ ಇದಾಗಿದೆ.

ಇದಕ್ಕಾಗಿ 3 ಗಂಟೆ ಅವಧಿ ನೀಡಿರುವುದು ಅತ್ಯಂತ ಕಡಿಮೆಯಾಗಿದ್ದು, ಹೀಗಾಗಿ ಈ ಹಿಂದಿನಂತೆ 4 ಗಂಟೆಗಳ ಬೋಧನಾ ಅವಧಿ ನೀಡಬೇಕೆಂದು ಪ್ರಾಧ್ಯಾಪಕರು ಒತ್ತಾಯಿಸಿದರು. ಇದೇ ವೇಳೆ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್‌ ಅವರನ್ನು ಭೇಟಿಯಾದ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next