Advertisement

ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ತಾಕೀತು

12:48 PM Jun 16, 2018 | Team Udayavani |

ಮೈಸೂರು: ಅನ್ಯ ಭಾಷೆ ಕಲಿಯುವುದರೊಳಗೆ ಕನ್ನಡ ಮರೆಯುವುದು ಬೇಡ, ಆಡಳಿತ ವ್ಯವಸ್ಥೆಗೆ ಅಡಿಪಾಯದಂತಿರುವ ಆಡಳಿತ ತರಬೇತಿ ಸಂಸ್ಥೆ(ಎಟಿಐ) ಯಿಂದಲೇ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯ ಅನುಷ್ಠಾನವಾಗುವಂತಾಗಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಆಡಳಿತ ತರಬೇತಿ ಸಂಸ್ಥೆ(ಎಟಿಐ)ಗೆ ಬೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಸದಸ್ಯರು ಎಟಿಐನಲ್ಲಿ ಕನ್ನಡ ಭಾಷೆ ಬಳಕೆ, ಅನುಷ್ಠಾನ ಕುರಿತು ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದ ಆಡಳಿತ ವ್ಯವಸ್ಥೆಗೆ ಎಟಿಐ ಕೇಂದ್ರೀಕೃತ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ.

ಹೀಗಾಗಿ ಅಧಿಕಾರಿಗಳು ಹಾಗೂ ನೌಕರರಿಗೆ ಸೂಕ್ತ ತರಬೇತಿ ನೀಡಿದರೆ ಸಮರ್ಥರಾಗಿ ಕೆಲಸ ಮಾಡಲಿದ್ದು, ಈ ನಿಟ್ಟಿನಲ್ಲಿ ಆಡಲಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನ ಇಲ್ಲಿಂದಲೇ ಆಗಬೇಕಿದೆ. ತರಬೇತಿ ಅವಧಿಯಲ್ಲಿ ಕನ್ನಡ ಭಾಷೆಯ ಅನುಷ್ಠಾನ ಸರಿಯಾಗಿ ಬೇರೂರದಿದ್ದರೆ, ಹೊರಗೆ ಅನುಷ್ಠಾನ ಮಾಡುವುದು ಕಷ್ಟವಾಗಲಿದೆ. ಆದ್ದರಿಂದ ಎಲ್ಲಾ ಶ್ರೇಣಿಯ ಅಧಿಕಾರಿಗಳು ಮತ್ತು ನೌಕರರ ಇಲ್ಲಿಗೆ ಬಂದು ತರಬೇತಿ ಪಡೆಯಬೇಕಿದೆ ಎಂದರು. 

ಕನ್ನಡ ಭಾಷೆ ಎಲ್ಲಿದೆ: ಆಡಳಿತ ತರಬೇತಿ ಸಂಸ್ಥೆಯ ಅಂತರ್ಜಾಲದ ಮುಖಪುಟ ಮತ್ತು ಆಯ್ಕೆಯ ಭಾಷೆಯಲ್ಲೂ ಕನ್ನಡ ಇಲ್ಲದಿರುವುದರ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಸಂಸ್ಥೆಯ ಅಂತರ್ಜಾಲದ ಮುಖಪುಟ ಸಂಪೂರ್ಣ ಆಂಗ್ಲಮಯವಾಗಿದ್ದು, ಇದರಲ್ಲಿ ಆಯ್ಕೆಯ ಭಾಷೆಯೂ ಕನ್ನಡ ಭಾಷೆ ಇಲ್ಲದಿರುವುದು ದೊಡ್ಡ ವೈಫ‌ಲ್ಯವಾಗಿದೆ.

ಇದಕ್ಕೆ ಉತ್ತರಿಸಿದ ಎಟಿಐ ನಿರ್ದೇಶಕ(ಪ್ರಭಾರ) ಡಾ.ಸಂದೀಪ್‌ ದವೆ, ಸಂಸ್ಥೆಯ ಅಂತರ್ಜಾಲ ಪುಟವು ಹಳೆಯದಾಗಿದ್ದು, ಹೊಸ ಅಂತರ್ಜಾಲ ಮುಖಪುಟವನ್ನು ರೂಪಿಸಲು ಈಗಾಗಲೇ ಕ್ರಮವಹಿಸಲಾಗಿದ್ದು, ಮುಂದಿನ 20 ದಿನದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆ ಹೊಂದಿರುವ ಅಂತರ್ಜಾಲ ಮುಖಪುಟ ಹೊರತರುವುದಾಗಿ ತಿಳಿಸಿದರು. 

Advertisement

ದೂರುಗಳು ಬಂದಿವೆ: ಎಟಿಐ ಸಂಸ್ಥೆಯಲ್ಲಿ ಎಲ್ಲಾ ತರಬೇತಿಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ನೀಡಲಾಗುತ್ತಿದೆ ಎಂಬ ಬಗ್ಗೆ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಏಕೆ ಬಂದಿವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಂಸ್ಥೆಯ ಜಂಟಿ ನಿರ್ದೇಶಕಿ ಭಾಗ್ಯಲಕ್ಷ್ಮಿ, ಹೊರ ರಾಜ್ಯದ ಅಧಿಕಾರಿಗಳು, ನೌಕರರು ಬಂದಾಗ ಆಂಗ್ಲ ಭಾಷೆಯಲ್ಲಿ ತರಬೇತಿ ನೀಡಲಾಗುತ್ತದೆ.

ಕೆಲವು ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಇಂಗ್ಲಿಷ್‌ನಲ್ಲಿ ತರಬೇತಿ ನೀಡಲಾಗುತ್ತಿದ್ದು, ಉಳಿದಂತೆ ಸರ್ಕಾರದ ಎಲ್ಲಾ ತರಬೇತಿ ಕನ್ನಡದಲ್ಲೇ ಇರುತ್ತದೆ. ಕೆಲವು ಸಂಪನ್ಮೂಲ ವ್ಯಕ್ತಿಗಳು ತಮ್ಮ ಪಿಪಿಟಿಗಳನ್ನು ಇಂಗ್ಲಿಷ್‌ನಲ್ಲಿದ್ದರೂ, ಕನ್ನಡದಲ್ಲೇ ತರಬೇತಿ ನೀಡುತ್ತಾರೆ. ಸಂಸ್ಥೆಯಲ್ಲಿ ಸೂಕ್ತ ಸಂಪನ್ಮೂಲ ವ್ಯಕ್ತಿಗಳ ಕೊರತೆಯ ಕಾರಣದಿಂದ ಇಂಗ್ಲಿಷ್‌ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು. 

ಸಮಿತಿ ರಚಿಸಬೇಕು: ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸಬೇಕಿದ್ದರೂ, ಎಟಿಐನಲ್ಲಿ ಈವರೆಗೂ ಸಮಿತಿ ರಚನೆ ಮಾಡಿಲ್ಲ. ಹೀಗಾಗಿ ಶೀಘ್ರವೇ ಸಮಿತಿಯನ್ನು ರಚಿಸಿ, ಕನ್ನಡದ ಅನುಷ್ಠಾನದ ಕುರಿತು ಪ್ರಾಧಿಕಾರಕ್ಕೆ ಪ್ರತಿ ತಿಂಗಳು ವರದಿಯನ್ನು ನೀಡಬೇಕು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ತ ರೀತಿಯಲ್ಲಿ ಪರಿಶೀಲಿಸುವಂತೆ ಸೂಚಿಸಿದ ಅವರು, ಸಭೆಯ ನಡಾವಳಿಯೂ ಕನ್ನಡದಲ್ಲಿರಬೇಕೆಂದು ಸೂಚಿಸಿದರು. 

ಕಡತಗಳ ಪರಿಶೀಲನೆ: ಉಳಿದಂತೆ ಎಟಿಐನಲ್ಲಿ ಕನ್ನಡ ಭಾಷೆಯ ಅನುಷ್ಠಾನ ಕುರಿತಂತೆ ಸುತ್ತೋಲೆಗಳು, ಕಡತಗಳು, ಅಧಿಸೂಚನೆಗಳು, ಸಿಬ್ಬಂದಿಯ ಹಾಜರಾತಿ, ಜಾಹಿರಾತುಗಳು, ಟೆಂಡರ್‌ಗಳು ಇನ್ನಿತರ ವಿಷಯದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರುಳಿಧರ್‌, ಸದಸ್ಯರಾದ ಡಾ.ವೀರಶೆಟ್ಟಿ, ಪ್ರಭಾಕರ್‌ ಪಾಟೀಲ್‌, ಎಂ.ಚಂದ್ರಶೇಖರ್‌, ರಾಜಶೇಖರ ಕದಂಬ, ಎಂ.ಬಿ. ವಿಶ್ವನಾಥ್‌, ಕನ್ನಡ ಗಣಕ ಪರಿಷತ್‌ನ ಜಿ.ಎನ್‌.ನರಸಿಂಹಮೂರ್ತಿ ಇತರರು ಇದ್ದರು.

ವಿವಿಧೆಡೆ ಪರಿಶೀಲನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಸದಸ್ಯರು ವಿವಿಧ ಇಲಾಖೆ ಕಚೇರಿಗಳಿಗೆ ಬೇಟಿ ನೀಡಿ ಕನ್ನಡ ಭಾಷೆ ಬಳಕೆ, ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದರು. ಅದರಂತೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಕಾರ್ಯನಿರ್ವಾಹಣಾಧಿಕಾರಿಗಳ ಕಚೇರಿ, ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ ಆಯುಕ್ತರ ಕಚೇರಿಗೆ ಬೇಟಿ ನೀಡಿದ ಅಧ್ಯಕ್ಷ ಡಾ.ಸಿದ್ದರಾಮಯ್ಯ ಪ್ರಗತಿ ಪರಿಶೀಲನೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next