Advertisement
ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿಯ ಮರಾಠಿ ಭಾಷಾ ಭವನದಲ್ಲಿ ಕವಿವರ್ಯ ಕುಸುಮಾಗ್ರಜದಲ್ಲಿ ಸೆ. 8ರಂದು ಪೂರ್ವಾಹ್ನ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಕೃತಿಗಳ ಬಿಡುಗಡೆ ಮತ್ತು ಅಭಿನಂದನ ಕಾರ್ಯಕ್ರಮ, ರಾಷ್ಟ್ರಕವಿ ಕುವೆಂಪು ದತ್ತಿ ಉಪನ್ಯಾಸ ಮಾಲಿಕೆ ನೆರವೇರಿಸಿತು. ಖ್ಯಾತ ಕವಿ, ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡ ರಂಗೇಗೌಡ, ಖ್ಯಾತ ವಾಗ್ಮಿ ವೈ.ವಿ. ಗುಂಡೂರಾವ್, ಪ್ರಾಧ್ಯಾಪಕಿ ಗೀತಾ ವಸಂತ್, ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಡಾ| ಆರ್.ಕೆ.ಶೆಟ್ಟಿ, ಮಿತ್ರವೃಂದ ಮುಲುಂಡ್ ಇದರ ಮುಖ್ಯಸ್ಥರುಗಳಾದ ಎಸ್.ಕೆ ಸುಂದರ್ ಮತ್ತು ಎ.ನರಸಿಂಹ ಇವರ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಡಾ| ಜಿ.ಎನ್. ಉಪಾಧ್ಯ ಅವರ “ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಮಹತ್ವ’ ಕೃತಿಯನ್ನು ಅನು ಬೆಳ್ಳೆ ಬಿಡುಗಡೆಗೊಳಿಸಿ ಮಾತನಾಡಿದರು. ಮಧ್ಯಾಂತರದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಸಲಾಗಿದ್ದು, ಮುಂಬಯಿ ವಿವಿ ಕನ್ನಡ ವಿಭಾಗದಿಂದ ಪಿಎಚ್‌ಡಿ ಪದವಿ ಪಡೆದ ಸುರೇಖಾ ನಾಯಕ್ (ರಾಧಾಕೃಷ್ಣ ನಾಯಕ್ ಅವರನ್ನೊಳಗೊಂಡು) ಮತ್ತು ಎಂ.ಫಿಲ್ ಪದವಿ ಪಡೆದ ರೂಪಾ ಸಂಗೊಳ್ಳಿ ಅವರಿಗೆ ಗೀತಾ ವಸಂತ್ ಅವರು ಶಾಲು ಹೊದೆಸಿ ಸ್ವರ್ಣಪದಕದೊಂದಿಗೆ ಗೌರವಿಸಿದರು.
Related Articles
Advertisement
ಡಾ| ಆರ್.ಕೆ.ಶೆಟ್ಟಿ ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 45 ದೇಶಗಳನ್ನು ಸುತ್ತಿ ಬಂದವನು ನಾನು. ಎಲ್ಲಿ ಹೋದರೂ ನಮ್ಮ ಭಾರತ ದೇಶಕ್ಕೆ ಸಿಗುವ ಮರ್ಯಾದೆ ಗೌರವ ಅದು ನಮ್ಮ ಸಾಹಿತ್ಯ ಸಂಸ್ಕೃತಿಯಿಂದ, ನಮ್ಮ ಆಚಾರ ವಿಚಾರಗಳಿಂದ. ಡಾ| ದೊಡ್ಡರಂಗೇಗೌಡರ ಹಾಗೂ ಇತರ ನನ್ನ ಮೆಚ್ಚಿನ ಹಾಡುಗಳನ್ನು ಮತ್ತೆ ಮೆಲುಕುಹಾಕುವಂತಾಯಿತು. ನನ್ನ ಬಿಡುವಿಲ್ಲದ ಕೆಲಸಗಳ ಮೇಲೆ ಇದನ್ನೆಲ್ಲ ಎಲ್ಲೋ ಮರೆಯುತ್ತಿದ್ದೇನೆಯೋ ಎಂಬ ನೋವು ಕೂಡಾ ಕಾಡಿತು. ಈ ಸಾಹಿತ್ಯ ಸಂಸರ್ಗದಿಂದ ಆನಂದತುಂದಿಲನಾಗಿದ್ದೇನೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು.
ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳು ಸಹೋದರತ್ವವುಳ್ಳವು. ಮಹಾರಾಷ್ಟ್ರದ ಇತಿಹಾಸ ಚಿಕ್ಕದು ಎಂದೆನಿಸಿದರೂ ಅದರ ಭೌಗೋಳಿಕ ವಿಸ್ತಾರ ಬಹಳ ದೊಡ್ಡದು. ಉಭಯ ರಾಜ್ಯಗಳಲ್ಲಿ ಕನ್ನಡದ ಸಾವಿರಾರು ಶಾಸನಗಳಿವೆ. ಪ್ರಸಕ್ತ ಜನರಲ್ಲಿ ಇತಿಹಾಸದಲ್ಲಿ ತೀವ್ರ ಅವಜ್ಞ ತರವಲ್ಲ. ಕಾರಣ ವರ್ತಮಾನದಲ್ಲಿ ಇತಿಹಾಸಗಳೇ ಬದುಕನ್ನು ಬಿಂಬಿಸುತ್ತವೆ. ಆದುದರಿಂದ ಇತಿಹಾಸದ ಬಗ್ಗೆ ಆಸಕ್ತಿ, ಅಭಿಮಾನ ಪಡಬೇಕು. ಭಾಷೆ ಭಾಷೆಗಳಲ್ಲಿ ಸಂಬಂಧ ಬೆಳೆದಾಗ ಇತಿಹಾಸ ಪೂರಕವಾಗುತ್ತದೆ. ಇದನ್ನೆಲ್ಲಾ ಮೈಗೂಡಿಸಬಲ್ಲ ಕನ್ನಡಿಗರು ಹೊಸ ತಲೆಮಾರಿನ ವಾರಿಸದಾರರು ಆಗಬಹುದು ಎನ್ನುತ್ತಾ ಡಾ| ಜಿ.ಎನ್ ಉಪಾಧ್ಯ ಕೃತಿಯ ಹಿನ್ನಲೆ ತಿಳಿಸಿದರು.ಕು| ಶ್ರಾವ್ಯಾ ಶೆಟ್ಟಿ ಕಾವ್ಯ ವಾಚನಗೈದರು. ಡಾ| ಜಿ.ಎನ್ ಉಪಾಧ್ಯ ಗಣ್ಯರಿಗೆಲ್ಲರಿಗೂ ಶಾಲು ಹೊದಿಸಿ ಗ್ರಂಥ ಗೌರವ ನೀಡಿ ಗೌರವಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ| ಗುರುಸಿದ್ಧಯ್ಯ ಸ್ವಾಮಿ ಅಕ್ಕಲಕೋಟೆ ಕೃತಿ ವಿಮರ್ಶೆಗೈದರು. ನಳಿನಾ ಪ್ರಸಾದ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ವಂದಿಸಿದರು. ಆಕಾಶವಾಣಿ ಮುಂಬಯಿ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಸುಶೀಲಾ ಎಸ್. ದೇವಾಡಿಗ ಇವರ ಮುಂದಾಳತ್ವದಲ್ಲಿ ಇದೇ ಮೊದಲಿಗೆ ಕನ್ನಡ ಕಾರ್ಯ ಕ್ರಮವನ್ನು ಆಕಾಶವಾಣಿಗಾಗಿ ಧ್ವನಿ ಮುದ್ರಣ ಮಾಡಲಾಯಿತು. ಚಿತ್ರ-ವರದಿ: ರೋನ್ಸ್ ಬಂಟ್ವಾಳ್