Advertisement

ಕನ್ನಡ ವಿಭಾಗ ಮುಂಬಯಿ ವಿವಿ, ಮೈಸೂರು ಅ.ದತ್ತಿ ಉಪನ್ಯಾಸ

04:52 PM Mar 09, 2018 | |

ಮುಂಬಯಿ: ಇಡೀ ಮಹಾಭಾರತದಲ್ಲಿ ಕರ್ಣನ ಪಾತ್ರ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಕರ್ಣನದು ಸಂಕೀರ್ಣವಾದ ಪಾತ್ರ. ತ್ಯಾಗ, ವೀರ, ನಿಷ್ಠೆಗೆ ಹೆಸರಾದ ಕರ್ಣ ಒಬ್ಬ ದುರಂತ ಜೀವಿ. ಹೀಗಾಗಿ ಮಹಾಕವಿ ಪಂಪ ಕರ್ಣರಸಾಯನ ಮಲೆ¤ ಭಾರತ ಎಂದು ಉದ್ಗಾರವೆತ್ತಿದ್ದಾನೆ ಎಂಬುದಾಗಿ ಖ್ಯಾತ ಗಮಕಿ ಹಾಗೂ ವಿದ್ವಾಂಸ ಡಾ| ಜಯರಾಮರಾವ್‌ ಅವರು ಅಭಿಪ್ರಾಯಪಟ್ಟರು.

Advertisement

ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್‌ ಜಂಟಿಯಾಗಿ ಆಯೋಜಿಸಿದ್ದ ಮೈಸೂರು ಅಸೋಸಿಯೇಶನ್‌ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ- 2018 ರಲ್ಲಿ  ಮಹಾಭಾರತದ ಕರ್ಣ ಎಂಬ ವಿಷಯದ ಕುರಿತು ಮಾತನಾಡಿ, ವೀರಾಗ್ರಣಿ, ಮಹಾತ್ಯಾಗಿ ಎಂಬ ನಿಲುವು ಪಂಪನದು. ಆತ ಕರ್ಣನ ಕರುಣ ಕಥೆಗೆ ಮರುಗಿದ್ದಾನೆ. ಕರ್ಣನ ನನ್ನಿ, ತ್ಯಾಗ, ಅಣ್ಮುಗಳನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾನೆ. ಪಂಪನ ದೃಷ್ಟಿಯಲ್ಲಿ ಕರ್ಣನ ದುರಂತ ಕಥೆಯೇ ಭಾರತ.  ಕರ್ಣಂಗೊಡಿತ್ತು ದಲ್‌ ಭಾರತಂ ಎಂದು ಅರ್ಜುನನ ಬಾಯಿಂದ ಹೇಳಿಸಿದ್ದಾನೆ. ಕರ್ಣ-ದುರ್ಯೋಧನರು ಆಪ್ತ ಸ್ನೇಹಿತರು. ದುರ್ಯೋಧನನ ಸ್ನೇಹ ಸ್ವಾರ್ಥ ಕಲುತ. ಕರ್ಣನದು ನಿರ್ಮಲಾಂತಃಕರಣದಿಂದ ಕೂಡಿದ ಸ್ನೇಹ. ಕರ್ಣನ ವೀರ್ಯ ಕಥನವನ್ನು ಪಂಪನಿಗಿಂತ ಒಂದು ಮುಷ್ಠಿ ಮಿಗಿಲಾಗಿ ಕುಮಾರವ್ಯಾಸ ಚಿತ್ರಿಸಿದ್ದಾನೆ. ತನ್ನ ಧಣಿ ದುರ್ಯೋಧನನಿಗಾಗಿ ದೇಹ ತ್ಯಾಗವನ್ನೂ ಮಾಡಿದ ಮಹಾತ್ಯಾಗಿ ಕರ್ಣನಿಗೆ ಸಮನಾರು ಎಂಬುದನ್ನು ಹತ್ತಾರು ಪದ್ಯಗಳಲ್ಲಿ ರಸಾರ್ದವಾಗಿ ಚಿತ್ರಿಸಿದ್ದಾನೆ ಎಂಬುದನ್ನು ವ್ಯಾಸಭಾರತ- ಪಂಪಭಾರತದ ಹಿನ್ನೆಲೆಯಲ್ಲಿ ಕರ್ಣನ ಪಾತ್ರದ  ವಿಭಿನ್ನ ಮುಖಗಳ ಮೇಲೆ ಬೆಳಕು ಚೆಲ್ಲಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎ. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಕಾವ್ಯ ಪರಂಪರೆ ಸಮೃದ್ಧವಾದುದು ಹಾಗೂ ಪ್ರಾಚೀನವಾದುದು. ಹಳಗನ್ನಡ ಸಾಹಿತ್ಯದ ಚಿಂತನ ಮಂಥನ ಇಂದಿಗೂ ಅಗತ್ಯವೇ ಆಗಿದೆ. ಡಾ| ಜಯರಾಮ ರಾವ್‌ ಅವರ ವಿದ್ವತ್ತು, ಕಂಠಸಿರಿ, ತೌಲನಿಕ ದೃಷ್ಟಿಕೋನ ಅಪೂರ್ವವಾದುದು. ಮೈಸೂರು ಅಸೋಸಿಯೇಷನ್‌ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ದೊಡ್ಡ ಇತಿಹಾಸವಿದೆ. ಈ ದತ್ತಿ ನಿಧಿಗೆ ಮೈಸೂರು ಅಸೋಸಿಯೇಷನ್‌ ಈ ವರ್ಷ ಮತ್ತೆ ಐವತ್ತು ಸಾವಿರ ರೂಗಳನ್ನು ನೀಡಿ ಆ ಮೊತ್ತವನ್ನು ಹೆಚ್ಚಿಸಿರುವುದು ಪ್ರಶಂಸನೀಯ ಅಂಶ ಎಂದು ಸಂತಸ ವ್ಯಕ್ತ ಪಡಿಸಿ ಕೃತಜ್ಞತೆ ಸಲ್ಲಿಸಿದರು.

ಮೈಸೂರು ಅಸೋಸಿಯೇಶನ್‌ ಅಧ್ಯಕ್ಷರಾದ ಕೆ. ಕಮಲಾ ಹಾಗೂ ಕಾರ್ಯದರ್ಶಿ ಡಾ| ಶಂಕರಲಿಂಗ ಅವರು ವಿಶ್ವವಿದ್ಯಾಲಯಕ್ಕೆ ಐವತ್ತು ಸಾವಿರ ರೂಗಳ ಚೆಕ್‌ನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. ನೇಸರು ಪತ್ರಿಕೆಯ ಸಂಪಾದಕರಾದ ಡಾ| ಜ್ಯೋತಿ ಸತೀಶ್‌ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next