ಕನ್ನಡ ಚಿತ್ರಗಳಿಗೆ ಈಗ ಮೆಲ್ಲನೆ ಪರಭಾಷೆಯಲ್ಲೂ ಬೇಡಿಕೆ ಹೆಚ್ಚುತ್ತಿದೆ. ಇದುವರೆಗೆ ಸ್ಟಾರ್ ನಟರ ಚಿತ್ರಗಳು ಮಾತ್ರ ತೆಲುಗು, ತಮಿಳು ಚಿತ್ರರಂಗದಲ್ಲಿ ತೆರೆಕಾಣುತ್ತಿದ್ದವು. ಈಗ ಹೊಸಬರೇ ಸೇರಿ ಮಾಡಿರುವ “ಅಡಚಣೆಗಾಗಿ ಕ್ಷಮಿಸಿ’ ಚಿತ್ರ ಕೂಡ ಚೆನ್ನೈನಲ್ಲಿ ತೆರೆ ಕಾಣುತ್ತಿರುವುದು ವಿಶೇಷ. ಹೌದು, ಇತ್ತೀಚೆಗಷ್ಟೇ “ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಪೂರ್ವಭಾವಿ ಪ್ರದರ್ಶನವನ್ನು ನಾರ್ವೆ ದೇಶದಲ್ಲಿ ಏರ್ಪಡಿಸಲಾಗಿತ್ತು.
ಅಲ್ಲಿನ ಕನ್ನಡಿಗರು ಸಿನಿಮಾ ನೋಡಿ, ಮೆಚ್ಚಿಕೊಂಡಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಅನಿಸಿಕೆ ವ್ಯಕ್ತಪಡಿಸಿದ್ದರು. ಈ ಚಿತ್ರ ಮಾ.22 ರಂದು ಬಿಡುಗಡೆಯಾಗುತ್ತಿದೆ. ಆರಂಭದಿಂದಲೂ ಪೋಸ್ಟರ್ ಮೂಲಕ ಕುತೂಹಲ ಹುಟ್ಟಿಸಿದ್ದ ಈ ಚಿತ್ರ ಟೀಸರ್, ಟ್ರೇಲರ್‌ನಲ್ಲೂ ಆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತ್ತು. ಈಗ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿರುವ ಚಿತ್ರ ಚೆನ್ನೈನಲ್ಲೂ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.
ಕನ್ನಡದ ಅದರಲ್ಲೂ ಹೊಸಬರ ಚಿತ್ರ ಚೆನ್ನೈನ ಪಿವಿಆರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ಹೇಳುವ ಹೀರೋ ಕಮ್ ನಿರ್ಮಾಪಕ ಪ್ರದೀಪ್ ವರ್ಮ, ಜರ್ಮನ್ ಮತ್ತು ಆಸ್ಟ್ರೇಲಿಯಾದಲ್ಲೂ ಚಿತ್ರ ಬಿಡುಗಡೆಗೆ ಬೇಡಿಕೆ ಬಂದಿದೆ. ಅಲ್ಲಿನ ಕನ್ನಡಿಗರು ಚಿತ್ರದ ಟೀಸರ್ ಮೆಚ್ಚಿಕೊಂಡು, ಸಿನಿಮಾ ಬಿಡುಗಡೆ ಮಾಡುವಂತೆ ಕೋರಿಕೊಂಡಿದ್ದಾರೆ. ಇಲ್ಲಿ ಬಿಡುಗಡೆ ಬಳಿಕ ಅಲ್ಲೂ ಸಹ ಬಿಡುಗಡೆಯಾಗಲಿದೆ.
ಇನ್ನು, ರಾಜ್ಯಾದ್ಯಂತ ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ವಿವರ ಕೊಡುತ್ತಾರೆ ಪ್ರದೀಪ್ ವರ್ಮ. ಚಿತ್ರಕ್ಕೆ ಭರತ್ ನಾವುಂದ ನಿರ್ದೇಶಕರು. ಚಿತ್ರದಲ್ಲಿ ಒಂಭತ್ತು ಮುಖ್ಯ ಪಾತ್ರಗಳಿದ್ದು, ಅವುಗಳ ಸುತ್ತವೇ ಚಿತ್ರ ಸಾಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಚಿತ್ರದ ಪ್ರಮುಖ ಅಂಶ ಎನ್ನುವ ನಿರ್ದೇಶಕರು, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ.
ಥ್ರಿಲ್ಲರ್ ಅಂದಾಗ, ನೋಡುಗ ಒಂದೊಂದು ದೃಶ್ಯವನ್ನೂ ಕಲ್ಪನೆ ಮಾಡಿಕೊಳ್ಳುತ್ತಾನೆ. ಮುಂದಿನ ದೃಶ್ಯದ ಕಲ್ಪನೆಗೆ ಅಡಚಣೆ ಮಾಡುವ ಪ್ರಯತ್ನ ಚಿತ್ರಕಥೆಯಲ್ಲಿದೆ. ಹಾಗಾಗಿ ಆ ಶೀರ್ಷಿಕೆ ಇಡಲಾಗಿದೆ. ಇನ್ನು, ಇಡೀ ಚಿತ್ರ ಮರ್ಡರ್ ಮಿಸ್ಟ್ರಿ ಹಿಂದೆ ನಡೆಯಲಿದೆ. ಇಲ್ಲಿ ಒಂದು ಕಥೆ, ಎರಡು ಚಿತ್ರಕಥೆಗಳಿವೆ ಎನ್ನುತ್ತಾರೆ ಭರತ್ ನಾವುಂದ. ಚಿತ್ರಕ್ಕೆ ಗಂಗು ಕ್ಯಾಮೆರಾ ಹಿಡಿದಿದ್ದಾರೆ. ಬೆಂಗಳೂರು, ಮಡಿಕೇರಿಯಲ್ಲಿ ಚಿತ್ರೀಕರಣ ನಡೆದಿದೆ.