Advertisement

ಗಲ್ಫ್ ನಾಡಿನಲ್ಲಿ ಕನ್ನಡ ಡಿಂಡಿಮ : ಮೊಳಗಿಸಿದ ಶಾರ್ಜಾ ಕರ್ನಾಟಕ ಸಂಘ

02:04 PM May 20, 2021 | Team Udayavani |

ಬಾರಿಸು ಕನ್ನಡ ಡಿಂಡಿಮ ಓ ಕರ್ನಾಟಕ ಹೃದಯ ಶಿವ… ಬಾಲ್ಯದಲ್ಲಿ ತಾಯಿನಾಡಿನಲ್ಲಿ ಓದಿದ ಕವಿವಾಣಿಯ ಪದ್ಯದ ಸಾಲುಗಳು ನಿಜವಾಗಿ ಅರ್ಥವಾಗಿದ್ದು ದೇಶ ಬಿಟ್ಟು ಹೊರ ದೇಶಕ್ಕೆ ಬಂದ ಅನಂತರವೇ. ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಕ್ಕೆ ಮೂರು ದಶಕಗಳ ಹಿಂದೆ ಕನಸಿನ ರೆಕ್ಕೆಗಳನ್ನು ಕಟ್ಟಿಕೊಂಡು ಬಂದಿಳಿದಾಗ ಮನಸ್ಸಿನಲ್ಲಿ ಮರುಭೂಮಿಯ ಚಿತ್ರಣವಿತ್ತು.

Advertisement

ಅರಬ್‌ ಸಂಯುಕ್ತ ಸಂಸ್ಥಾನದ ಅರಬ್ಬರು ಮರಳುಗಾಡನ್ನು ಹಸುರು ಭೂಮಿಯನ್ನಾಗಿ ಪರಿವರ್ತಿಸಿದ ಜ್ಞಾನ, ವಿಜ್ಞಾನದ ಕ್ರಿಯಾರೂಪದ ಆಧುನಿಕ ನಗರ. ಇನ್ನೂರು ವಿವಿಧ ದೇಶಗಳ, ವಿವಿಧ ಭಾಷೆಯನ್ನಾಡುವ ಜನರೊಂದಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ. ಕರ್ನಾಟಕದ ಕನ್ನಡಿಗರು ಅನಿವಾಸಿ ಕನ್ನಡಿಗರಾಗಿ  ಶಿಸ್ತಿನ ಜೀವನ ಸಾಗಿಸುತ್ತಿದ್ದಾರೆ.

ಶಾರ್ಜಾ ವಿಭಾಗದಲ್ಲಿ ಕನ್ನಡಿಗರನ್ನು ಸಂಘಟಿಸಿ ಕೊಂಡು ನಾಡು ನುಡಿಯ ಸೇವೆಗೈಯುವ ಉದ್ದೇಶದಿಂದ ಯಾವುದೇ ಫ‌ಲಾಪೇಕ್ಷೆ ಇಲ್ಲದೆ ರಾಜಕೀಯ ಧಾರ್ಮಿಕ ಭಾವನೆಗಳಿಗೆ ಅಸ್ಪದ ಕೊಡದೆ, ಕನ್ನಡ ಕಲೆ ಸಂಸ್ಕೃತಿ, ಭಾಷೆಯ ಬಗ್ಗೆ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಮೇಶ್‌ ನಂತೂರ್‌ ಅವರ ಅಧ್ಯಕ್ಷತೆಯಲ್ಲಿ ಶಾರ್ಜಾ ಕರ್ನಾಟಕ ಸಂಘ ಶಾರ್ಜಾ ಇಂಡಿಯನ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಪ್ರಾರಂಭವಾಗಿ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆತು ಕನ್ನಡ ಚಟುವಟಿಕೆಗಳು ಈ ಮಣ್ಣಿನಲ್ಲಿ ನಡೆದುಕೊಂಡು ಬರುವಂತಾಯಿತು.

ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಅಭಿನಂದಿಸಿ ಗೌರವಿಸುವ ಸಲುವಾಗಿ ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿಯನ್ನು ಶಾರ್ಜಾ ಕರ್ನಾಟಕ ಸಂಘ ಪ್ರತಿವರ್ಷ ಗಣ್ಯರಿಗೆ ನೀಡುತ್ತಾ ಬಂದಿದೆ. ಇಲ್ಲಿಯವರೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 23 ಮಂದಿ ಕನ್ನಡಿಗರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಶಾರ್ಜಾ ಕರ್ನಾಟಕ ಸಂಘ 2004ರಲ್ಲಿ ದ್ವಿತೀಯ ಅಧ್ಯಕ್ಷರಾಗಿ ಬಿ.ಕೆ. ಗಣೇಶ್‌ ರೈ ಜವಾಬ್ದಾರಿಯನ್ನು ವಹಿಸಿಕೊಂಡು ಹಾಗೂ ಮಾರ್ಕ್‌ ಡೆನ್ನಿಸ್‌ ಅವರು ಪೋಷಕರಾಗಿದ್ದ ಸಮಯದಲ್ಲಿ ಕರ್ನಾಟಕ ಸಂಘ ತನ್ನ ಉತ್ತಮ ಕಾರ್ಯ ಯೋಜನೆಗಳಲ್ಲಿ,ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರು, ಕರ್ನಾಟಕ ಪರ ಸಂಘಟನೆಗಳ ಪೂರ್ಣ ಮಾಹಿತಿ ಇರುವ ಸಾಧನೆ ಸಂಪುಟವನ್ನು ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ  ಕನ್ನಡ ಭಾಷೆಯಲ್ಲಿ ಶಾರ್ಜಾದಲ್ಲಿ ಮುದ್ರಿಸಿ ಬಿಡುಗಡೆ ಗೊಳಿಸಲಾಗಿದೆ.

Advertisement

ಶಾರ್ಜಾ ಕರ್ನಾಟಕ ಸಂಘ ಪ್ರಥಮ ಬಾರಿಗೆ ರಕ್ತದಾನ ಶಿಬಿರವನ್ನು 2006ರಲ್ಲಿ  ಆಯೋಜಿಸಿದ್ದು, ಗಲ್ಫ್ ಮೆಡಿಕಲ್‌ ಕಾಲೇಜ್‌ ಹಾಸ್ಪಿಟಲ್‌ ಅಜ್ಮಾನ್‌ ಸಹಯೋಗದೊಂದಿಗೆ, ಶಾರ್ಜಾ ಮಿನಿಸ್ಟ್ರಿ ಆಫ್ ಹೆಲ್ತ್‌ ನ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾರತೀಯರ ಜತೆಗೆ ಅರಬ್‌ ಪ್ರಜೆಗಳು, ಬ್ರಿಟಿಷ್‌, ಈಜಿಪ್ಟ್, ಫಿಲಿಫಿನ್ಸ್‌, ಶ್ರೀಲಂಕಾ, ಬಾಂಗ್ಲಾ ನೇಪಾಳಿ ಮತ್ತು ಪಾಕಿಸ್ತಾನಿಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.

ಶಾರ್ಜಾ ಕರ್ನಾಟಕ ಸಂಘ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಮಾರಂಭ, ವಾರ್ಷಿಕ ಸ್ನೇಹ ಮಿಲನದಂತ ಅದ್ಧೂರಿ ಸಮಾರಂಭದಲ್ಲಿ ಕನ್ನಡಿಗರ ಮಕ್ಕಳಲ್ಲಿ ಇರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟು ಕನ್ನಡ ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಚಲನಚಿತ್ರ ನೃತ್ಯ, ಕನ್ನಡ ಗೀತೆಗಳು, ಹಾಸ್ಯ ಪ್ರಹಸನ, ರಸಪ್ರಶ್ನೆ, ಛದ್ಮವೇಷ ಇತ್ಯಾದಿ ಸಾಂಸ್ಕೃತಿಕವಾಗಿ ಪ್ರದರ್ಶನ ನೀಡಲು ಅವಕಾಶ ದೊರೆತು ಪ್ರತಿಭೆಯು ಅನಾವರಣ ಗೊಳುತ್ತದೆ.

ವಿಹಾರ ಕೂಟ, ಕ್ರೀಡಾ ಕೂಟ, ಯು.ಎ.ಇ. ಮಟ್ಟದಲ್ಲಿ ಮಹಿಳೆಯರ ಥ್ರೋಬಾಲ್‌. ಪುರುಷರ ವಾಲಿಬಾಲ್‌ ಪಂದ್ಯಾಟ, ಸಂಗೀತ ರಸಮಂಜರಿ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಶಾರ್ಜಾ ಕರ್ನಾಟಕ ಸಂಘ ಯು.ಎ.ಇ.ಯಲ್ಲಿ ನೆಲೆಸಿರುವ ಅಪಾರ ಕನ್ನಡಿಗರ ಜನಮೆಚ್ಚುಗೆಯನ್ನು ಪಡೆದಿದೆ.

ಶಾರ್ಜಾ ಕರ್ನಾಟಕ ಸಂಘ ಪ್ರಾರಂಭವಾದ ದಿನದಂದಲೇ ಆಹ್ವಾನ ಪತ್ರ ಕನ್ನಡ ಭಾಷೇಯಲ್ಲಿ ಮುದ್ರಣವಾಗಿ ಕನ್ನಡಿಗರ ಕೈ ಸೇರುತ್ತದೆ. ವೇದಿಕೆಯಲ್ಲಿ ಬೃಹತ್‌ ಕನ್ನಡ ಅಕ್ಷರಗಳ ಸಹಿತ ಕರ್ನಾಟಕ ಕಲಾಸಂಸೃತಿಯನ್ನು ಪ್ರತಿಬಿಂಬಿಸುವ ಚಿತ್ರಪಟಗಳು ಡಿಜಿಟಲ್‌ ಡಿಸ್‌ಪ್ಲೇ, ಅಚ್ಚ ಕನ್ನಡದಲ್ಲೇ ಕಾರ್ಯಕ್ರಮ ನಿರೂಪಣೆ, ಅತಿಥಿಗಳಿಂದ ಕನ್ನಡ ಭಾಷೆಯಲ್ಲಿಯೇ ಭಾಷಣ, ಪ್ರವಚನಗಳು ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರತಿಧ್ವನಿಸುತಿದೆ.

ಶಾರ್ಜಾ ಕರ್ನಾಟಕ ಸಂಘ ತನ್ನ ಸಾಧನೆಯ 18 ವರ್ಷಗಳ ಹೆಜ್ಜೆ ಗುರುತಿನಲ್ಲಿ ಎಂಟು ಮಂದಿ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರ ಜತೆಗೂಡಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಗಲ್ಫ್ ನಾಡಿನಲ್ಲಿ ಕನ್ನಡ ಭಾಷೆಯನ್ನು  ಹಸುರಾಗಿ ರಿಸಿದ್ದಾರೆ.

ಬಿ.ಕೆ. ಗಣೇಶ್‌ ರೈ,  ಶಾರ್ಜಾ

Advertisement

Udayavani is now on Telegram. Click here to join our channel and stay updated with the latest news.

Next