Advertisement

ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ 17ನೇ ವಾರ್ಷಿಕೋತ್ಸವ

05:36 PM Nov 11, 2018 | Team Udayavani |

ಕಲ್ಯಾಣ್‌: ಹೊರನಾಡಿನಲ್ಲಿ ಅದರಲ್ಲೂ ಮರಾಠಿ ಮಣ್ಣಿನ ಗ್ರಾಮೀಣ ಪ್ರದೇಶವಾಗಿರುವ ಕಲ್ಯಾಣ್‌ ಪರಿಸರದಲ್ಲಿ ನಾಡು-ನುಡಿ ಸೇವೆಗೈಯುತ್ತಿರುವ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಒಂದು  ಮಾದರಿ ಸಂಸ್ಥೆಯಾಗಿದೆ. ಜಾತಿ, ಮತ, ಧರ್ಮವನ್ನು  ಮೀರಿ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ-ಬೆಳೆಸುತ್ತಿರುವ ಸಂಸ್ಥೆಯ ಶ್ರಮವನ್ನು ಕಂಡಾಗ ಸಂತೋಷವಾಗುತ್ತಿದೆ. ನಾಡಿನ ಹಿರಿಮೆ-ಗರಿಮೆಯನ್ನು ಇಲ್ಲಿ ಸಂಸ್ಥೆಯು ಎತ್ತಿ ಹಿಡಿಯುತ್ತಿದೆ. ವೈದಿಕ ಶ್ರೇಷ್ಠರ ನಾಡು-ಶರಣರ ನಾಡು, ಸಂಸ್ಕೃತಿಗಳ ಬೀಡು, ಸಜ್ಜನರ ನಾಡಾದ ಕನ್ನಡ ಮಣ್ಣಿನ ಕಂಪನ್ನು ಇಲ್ಲಿ ಪಸರಿಸುತ್ತಿರುವ ನಿಮ್ಮೆಲ್ಲರ ಕಾರ್ಯ ಕರ್ನಾಟಕದ ಕನ್ನಡಿಗರಿಗೆ ಮಾದರಿಯಾಗಿದೆ ಎಂದು ಸಾಹಿತಿ, ಸಮಾಜ ಸೇವಕ, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ನುಡಿದರು.

Advertisement

ನ.4ರಂದು ಕಲ್ಯಾಣ್‌ ಪಶ್ಚಿಮದ ಗಿರಿಜಾ ಮಾತಾ ಪಯ್ಯಡೆ ಸಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 17 ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದಿಂದ ದೂರದಲ್ಲಿದ್ದು, ನಮ್ಮ ರಾಜ್ಯದ ಸಂಸ್ಕೃತಿಯ ಬಗ್ಗೆ ಚಿಂತಿಸುತ್ತಿರುವ ಇಲ್ಲಿನ ಕನ್ನಡಿಗರು ಧನ್ಯರು. ನಾಡು-ನುಡಿಯ ಬಗ್ಗೆ ನಿಮ್ಮ ಪ್ರೇಮ, ಔದಾರ್ಯ ಇತರರಿಗೆ ಪ್ರೇರಣೆಯಾಗಬೇಕು. ನಾವೆಲ್ಲರೂ ಒಂದಾಗಿ ಕನ್ನಡತನವನ್ನು ಕಟ್ಟೋಣ ಎಂದು ನುಡಿದು ಶುಭಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್‌ ಎಲ್‌. ಶೆಟ್ಟಿ ಅವರು ಮಾತನಾಡಿ, ಭಾಷಾಭಿಮಾನ, ದೇಶಾಭಿಮಾನ ಪ್ರತಿಯೋರ್ವರಲ್ಲಿ ರಕ್ತಗತ ವಾಗಿರಬೇಕು. ಕನ್ನಡಪರ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಪ್ರತಿಯೊಬ್ಬರ ಪ್ರತಿಭೆಯನ್ನು ಗುರುತಿಸಿ ಸತ್ಕರಿಸಿ, ಅಭಿನಂದಿಸುವ ಕಾರ್ಯ ಸ್ತುತ್ಯರ್ಹ. ಮಹಿಳೆಯರ ಕೈಯಲ್ಲಿ ಸಂಘಟನೆಯನ್ನು ನೀಡಿದಾಗ ಸಂಸ್ಥೆ ಬಲಾಡ್ಯಗೊಳ್ಳುತ್ತದೆ ಎಂಬುವುದು ಈ ಸಂಸ್ಥೆಯ ನಿದರ್ಶನವಾಗಿದೆ. ಕನ್ನಡವನ್ನು ಉಳಿಸಿ-ಬೆಳೆಸುವ ನಿಮ್ಮ ಕಾರ್ಯ ನಿರಂತರವಾಗಿ ನಡೆಯುತ್ತಿರಲಿ. ನಮ್ಮ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದರು.

ಇನ್ನೋರ್ವ ಅತಿಥಿ ಚಿಣ್ಣರ ಬಿಂಬದ ಪ್ರಕಾಶ್‌ ಭಂಡಾರಿ ಇವರು ಮಾತನಾಡಿ, ಕರ್ನಾಟಕದಲ್ಲಿ ಕನ್ನಡವನ್ನು ಮರೆಯುತ್ತಿದ್ದಾರೆ. ಆದರೆ ಹೊರನಾಡಿನಲ್ಲಿ ಭಾಷಾಪ್ರೇಮ ಹೆಚ್ಚಾಗುತ್ತಿದೆ. ಕರ್ನಾಟಕ ಸರಕಾರ ಹೊರನಾಡ ಕನ್ನಡಿಗರಿಗೆ ಸಹಾಯವನ್ನು ಮಾಡುತ್ತಿಲ್ಲ. ಸರಕಾರದಲ್ಲಿ ಹೊರನಾಡ ಕನ್ನಡಿಗರಿಗಾಗಿ ವಿಶೇಷ ಬಜೆಟ್‌ ಇದ್ದರೂ ಹೊರನಾಡ ಕನ್ನಡಿಗರ ಸಂಸ್ಥೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ಮೆಹ್ತಾ ಪದವಿ ಕಾಲೇಜಿನ ಉಪಾಧ್ಯಕ್ಷ ವಿ. ಎನ್‌. ಹೆಗ್ಡೆ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಮರೆಯಾಗುತ್ತಿದ್ದು, ಆದರೆ ಇಲ್ಲಿ ಕನ್ನಡಾಭಿಮಾನ ಉಕ್ಕಿ ಹರಿಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಶಾಲೆಯಲ್ಲಿ ಹೊರರಾಜ್ಯದ ಮಕ್ಕಳು ಕನ್ನಡವನ್ನು ಕಲಿಯಲು ಉತ್ಸುಕರಾಗಿದ್ದಾರೆ. ಇಂತಹ ಪ್ರೋತ್ಸಾಹ ಹೊರ ನಾಡ ಕನ್ನಡಿಗರಿಂದ ಆಗುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.

Advertisement

ಇನ್ನೋರ್ವ ಅತಿಥಿ ಮೈಸೂರು ಅಸೋ ಸಿಯೇಶನ್‌ ಮುಂಬಯಿ ಟ್ರಸ್ಟಿ ಕೆ. ಮಂಜು ನಾಥಯ್ಯ ಅವರು ಮಾತನಾಡಿ, ಪ್ರಪಂಚದ ಅನೇಕ ಭಾಷೆಗಳಲ್ಲಿ ಕನ್ನಡ ಹಳೆಯ ಭಾಷೆ ಯಾಗಿದ್ದು, ಅಂದು ಕನ್ನಡ ಮುಂಬಯಿ ತನಕವಿದ್ದರೂ ಇಂದು ಎಲ್ಲಾ ಭಾಷೆಗಳಿಗೆ ಕುತ್ತು ತಂದಂತಹ ಭಾಷೆಯಿದ್ದರೆ ಅದು ಇಂಗ್ಲಿಷ್‌, ನಾವು ನಮ್ಮ ಮನೆಯಲ್ಲಿ ನಮ್ಮ ಮಾತೃಭಾಷೆಯನ್ನು ರಾಜ್ಯ ಭಾಷೆಯನ್ನು ಮಾತನಾಡದೆ ಭಾಷೆಯ ಅವನತಿಗೆ ಕಾರಣರಾಗಿದ್ದೇವೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಮನೆಯಲ್ಲೇ ಕಲಿಸಿದಾಗ ಮಾತ್ರ ಉಳಿಯಲು ಸಾಧ್ಯ. ಕನ್ನಡ ಸಾಂಸ್ಕೃತಿಕ ಕೇಂದ್ರದ ನಾಡು-ನುಡಿಯ ಕಾರ್ಯಕ್ರಮಗಳು ನಿಜ ವಾಗಿಯೂ ಅಭಿನಂದನೀಯವಾಗಿವೆೆ ಎಂದರು.

ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಇದರ ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಹೆಗ್ಡೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ವೈ. ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮಹಿಳಾ ವಿಭಾಗದ ವರದಿ ವಾಚಿಸಿದರು.

ಪತ್ರಕರ್ತ  ಪ್ರಕಾಶ್‌ ಹೆಗ್ಡೆ ಕುಂಠಿನಿ ಮತ್ತು ಪ್ರಕಾಶ್‌ ನಾಯ್ಕ ಅವರು ಅತಿಥಿಗಳನ್ನು ಪರಿಚಯಿಸಿದರು. ಶಾಲಿನಿ ಶೆಟ್ಟಿ ಅಜೆಕಾರು ಸಮ್ಮಾನ ಪತ್ರ ವಾಚಿಸಿದರು. ಗಣ್ಯರು ಸಂಸ್ಥೆಯ ಕಲ್ಯಾಣ ಕಸ್ತೂರಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಅತೀ ಹೆಚ್ಚು ಜಾಹೀರಾತು ಸಂಗ್ರಹಿಸಿದವರನ್ನು ಗೌರವಿಸ ಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸದಸ್ಯ ಬಾಂಧವರು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಜಾತಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜ್ಯೋತಿ ಪ್ರಕಾಶ್‌ ಹೆಗ್ಡೆ, ಎಂ. ಬಿ. ಬಿರಾದಾರ, ಪ್ರಕಾಶ್‌ ನಾಯ್ಕ ಹೊಸಕೋಟಿ, ಭಾರತಿ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರಕಾಶ್‌ ಗೋರೆ, ಪ್ರಕಾಶ್‌ ಹೆಗ್ಡೆ ಕುಂಠಿನಿ, ಶಾಲಿನಿ ಶೆಟ್ಟಿ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು. ಶಾಲಿನಿ ಶೆಟ್ಟಿ ಅಜೆಕಾರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next