ಬೆಂಗಳೂರು: ರಾಜ್ಯದಲ್ಲಿ ಸಿಬಿಎಸ್ಸಿ ಮತ್ತು ಸಿಐಎಸ್ಸಿಇ ಪಠ್ಯಕ್ರಮ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸಿ ಕಾನೂನು ತಂದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಸಿ. ಸೋಮಶೇಖರ್ ಸೇರಿ ಸಿಬಿಎಸ್ಸಿ ಮತ್ತು ಸಿಐಎಸ್ಸಿಇ ಸಂಯೋಜಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ 19 ಮಂದಿ ಪೋಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ. ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ರಾಜ್ಯ ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿತು.
ಕನ್ನಡ ಭಾಷಾ ಕಲಿಕೆ ಅಧಿನಿಯಮ-2015 ಹಾಗೂ ಕನ್ನಡ ಭಾಷಾ ಕಲಿಕೆ ನಿಯಮಗಳು-2017ರ ಅನ್ವಯ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವೀತೀಯ ಭಾಷೆಯಾಗಿ ಕಡ್ಡಾಯವಾಗಿದೆ. ಆದರೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳು(ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ನಿಯಂತ್ರಣ) ನಿಯಮ 2022ರ ಪ್ರಕಾರ ಎರಡನೇ ಅಥವಾ ಮೂರನೇ ಭಾಷೆಯಾಗಿ ಕಡ್ಡಾಯ ಎಂಬುದಾಗಿ ತಿಳಿಸುತ್ತವೆ. ಈ ಅಂಶಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983ಕ್ಕೆ ತದ್ವಿರುದ್ಧವಾಗಿವೆ. ಅಲ್ಲದೆ, ಸಿಬಿಎಸ್ಸಿ ಮತ್ತು ಸಿಐಎಸ್ಸಿಇ ಈ ಕಾಯ್ದೆಗಳ ವ್ಯಾಪ್ತಿಯಿಂದ ಹೊರಗಡೆ ಇದ್ದಾವೆ.
ಅಲ್ಲದೆ, ಕರ್ನಾಟಕ ಶಿಕ್ಷಣ ಕಾಯ್ದೆ 1998ರ ತಿದ್ದುಪಡಿ ಮಾಡುವ ಮೂಲಕ ಸಿಬಿಎಸ್‌ಇ ಮತ್ತು ಸಿಐಎಸ್ಸಿಇ ಶಾಲೆಗಳು ಮತ್ತು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ನಿಗದಿ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದ ನಿಯಮಗಳನ್ನು ಅಸಾಂವಿಧಾನಿಕ ಎಂದು ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ಆದೇಶಿಸಿದೆ.
ಆದಾಗ್ಯೂ ರಾಜ್ಯ ಸರ್ಕಾರ ಕನ್ನಡ ಭಾಷಾ ಕಲಿಕೆ ಅಧಿನಿಯಮ-2015 ಹಾಗೂ ಕನ್ನಡ ಭಾಷಾ ಕಲಿಕೆ ನಿಯಮಗಳು-2017ರ ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು(ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ನಿಯಂತ್ರಣ) ನಿಯಮ 2022ರ ಪ್ರಕಾರ ಸಿಬಿಎಸ್ಸಿ ಮತ್ತು ಸಿಐಎಸ್ಸಿಇ ಶಾಲೆಗಳು ಸೇರಿ ಎಲ್ಲ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೂ ಕನ್ನಡ ಕಡ್ಡಾಯ ಮಾಡಲಾಗಿದೆ. ಆದ್ದರಿಂದ ಈ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೂ ಕನ್ನಡ ಕಡ್ಡಾಯಗೊಳಿಸಿ ಆದೇಶಿಸಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಈ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಯಾವುದೇ ಭಾಷೆ ಕಡ್ಡಾಯಗೊಳಿಸಲು ಅವಕಾಶವಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿತ್ತು.
ಅಲ್ಲದೆ, ಕನ್ನಡ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಮಧ್ಯಭಾಗದಲ್ಲಿ ಕರ್ನಾಟಕದ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿರುವುದರಿಂದ ಕನ್ನಡ ಭಾಷೆ ಅಧ್ಯಯನ ಮಾಡಲು ಕಷ್ಟವಾಗುತ್ತದೆ. ಅಲ್ಲದೆ, ಕನ್ನಡ ಭಾಷೆಯನ್ನು ಕಡ್ಡಾಯ ಮಾಡದಿದ್ದಲ್ಲಿ ಪ್ರಸ್ತುತ ನೀಡಿರುವ ಎನ್‌ಒಸಿಯನ್ನು ಹಿಂಪಡೆಯುವುದಾಗಿ ರಾಜ್ಯದ ಅಧಿಕಾರಿಗಳು ಸಿಬಿಎಸ್ಸಿ ಮತ್ತು ಸಿಐಎಸ್ಸಿಇ ಶಾಲೆಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.