Advertisement
ಕಾಸರಗೋಡು: ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಇತ್ತೀಚೆಗೆ ತಮ್ಮನ್ನು ಭೇಟಿಯಾದ ಕನ್ನಡಿಗರ ನಿಯೋಗವನ್ನುದ್ದೇಶಿಸಿ ಭಾಷಾ ಅಲ್ಪಸಂಖ್ಯಾ ಕರಿಗೆ ಮಲಯಾಳವನ್ನು ಕಡ್ಡಾಯ ಗೊಳಿಸಿಯೇ ಸಿದ್ಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಡಾಖಂಡಿತವಾಗಿ ಹೇಳಿದ್ದಾರೆ.
ಇಲ್ಲಿ ಉದ್ಭವಿಸುವ ಹಲವು ಪ್ರಾಯೋಗಿಕ ಸಮಸ್ಯೆ ಯನ್ನು ಚಿಂತಿಸಿ ಪರಿಹಾರ ಸೂತ್ರವನ್ನು ಏರ್ಪಡಿಸದೆ ಮಲಯಾಳ ವನ್ನು ಕಡ್ಡಾಯಗೊಳಿಸುತ್ತಿರುವುದರ ಬಗ್ಗೆ ಕನ್ನಡಿಗರು ಆತಂಕಿತರಾಗಿದ್ದಾರೆ ಜತೆಗೆ ಆಕ್ರೋಶ ಗೊಂಡಿದ್ದಾರೆ. ಕೇರಳದಲ್ಲಿ ಪ್ರಸ್ತುತ ಪ್ರಥಮ ಭಾಷೆಯನ್ನಾಗಿ ಮಲ ಯಾಳ, ಸಂಸ್ಕೃತ, ಅರೆಬಿಕ್, ಇಂಗ್ಲಿಷ್, ಕನ್ನಡ, ತಮಿಳು ಮೊದಲಾದ ಭಾಷೆಗಳನ್ನು ಕಲಿಯುವ ಅವಕಾಶವಿದೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳು ಕಡ್ಡಾಯವಾಗಿ ದ್ವಿತೀಯ ಹಾಗೂ ತೃತೀಯ ಭಾಷೆಗಳಾಗಿರುತ್ತವೆ. ಅಲ್ಪಸಂಖ್ಯಾಕ ಭಾಷಿಗರಿಗೂ ಈ ವ್ಯವಸ್ಥೆ ಇದುವರೆಗೆ ಜಾರಿಯಲ್ಲಿತ್ತು.
ಆದರೆ ಈಗಿನ ಆದೇಶದಂತೆ ಕನ್ನಡಿಗರು ಮಲಯಾಳ ವನ್ನು ದ್ವಿತೀಯ ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಯ ಬೇಕೆಂದರೆ ಇಂಗ್ಲಿಷನ್ನು ಹೇಗೆ ಕಲಿಯಬೇಕು? ಅದರ ಬದಲು ಪ್ರಥಮ ಭಾಷೆಯ ದ್ವಿತೀಯ ಪತ್ರಿಕೆಯನ್ನಾಗಿ ಮಲಯಾಳವನ್ನು ಕಡ್ಡಾಯಗೊಳಿಸಬಹುದೆ?
Related Articles
Advertisement
ಇದರಿಂದ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಸಂಪರ್ಕ ಉಳಿಯುವಂತೆ ಮಾಡಲಾಗುತ್ತದೆ ಮಾತ್ರವಲ್ಲ ಕನ್ನಡವನ್ನು ಪ್ರಥಮ ಭಾಷೆಯ ಎರಡನೇ ಪತ್ರಿಕೆಯನ್ನಾಗಿ ಅಭ್ಯಾಸ ಮಾಡಿರುವುದರಿಂದ ಈ ವಿದ್ಯಾರ್ಥಿಗಳಿಗೆ ಮುಂದೆ ಕೇರಳ ಅಥವಾ ಕರ್ನಾಟಕದಲ್ಲಿ ಶಿಕ್ಷಣ ಮುಂದುವರಿಸುವಾಗ ಕನ್ನಡ ಅಥವಾ ಸಂಸ್ಕೃತವನ್ನು ಭಾಷಾ ವಿಷಯವನ್ನಾಗಿ ಆರಿಸಿಕೊಳ್ಳುವ ಅವಕಾಶವಿರುತ್ತದೆ.
ಆದರೆ ಇನ್ನು ಮುಂದೆ ಮಲಯಾಳವನ್ನು ಪ್ರಥಮ ಭಾಷೆಯ ದ್ವಿತೀಯ ಪತ್ರಿಕೆಯಾಗಿ ಕಡ್ಡಾಯಗೊಳಿಸಿದರೆ ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಆಯ್ದುಕೊಳ್ಳುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಯುವ ಅವಕಾಶವೇ ಇರುವುದಿಲ್ಲ!
ಇನ್ನು ಮುಂದೆ ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನೇ ಪ್ರಥಮ ಭಾಷೆಯನ್ನಾಗಿ ಕಲಿಯುವ ಅವಕಾಶವಿದ್ದರೂ ಸಂಸ್ಕೃತ ಅಥವಾ ಕನ್ನಡಗಳೆರಡನ್ನೂ ಕಲಿಯುವ ಅವಕಾಶವಿಲ್ಲ. ಅವರು ಕನ್ನಡ ಅಥವಾ ಸಂಸ್ಕೃತದಲ್ಲಿ ಒಂದನ್ನು ಆಯ್ದುಕೊಳ್ಳಬೇಕಾಗುತ್ತದೆ.
ಇದು ಅವರ ಮುಂದಿನ ಶಿಕ್ಷಣಕ್ಕೆ ಸಮಸ್ಯೆಯಾಗಿ ಕಾಡಲಿದೆ. ಪ್ರೌಢಶಾಲಾ ಹಂತದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷಾ ಶಿಕ್ಷಕರ ಹುದ್ದೆಗಳ ಉಳಿವಿಗೂ ಸಮಸ್ಯೆಯಾಗಬಹುದು. ಕನ್ನಡ ಕಲಿಯುವವರ ಸಂಖ್ಯೆ ಕಡಿಮೆಯಾಗಬಹುದು.ಮಾತೃ ಭಾಷೆಗೆ ಉತ್ತೇಜನವಾದರೆ ಕನ್ನಡಕ್ಕೆ ಯಾಕಿಲ್ಲ ?
ಕರ್ನಾಟಕ ಸರಕಾರದಿಂದ ಕಾಸರಗೋಡಿನ ಕನ್ನಡಿಗ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರಯೋಜನ ಲಭಿಸಬೇಕಾದರೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯುವುದು ಅನಿವಾರ್ಯ. ಈ ಮಧ್ಯೆ ಮಾತೃ ಭಾಷಾ ಶಿಕ್ಷಣವನ್ನು ಉತ್ತೇಜಿಸುವುದೇ ಕೇರಳ ಸರಕಾರದ ಗುರಿಯಾಗಿದ್ದರೆ ಕಾಸರಗೋಡಿನಂತಹ ಭಾಷಾ ಅಲ್ಪಸಂಖ್ಯಾಕ ಪ್ರದೇಶದಲ್ಲಿ ಮಲಯಾಳವನ್ನು ಕಡ್ಡಾಯಗೊಳಿಸುವುದು ಅನಿವಾರ್ಯ ವೆಂದು ವಾದಿಸುವಾಗ ಅದರೊಂದಿಗೆ ಅಲ್ಪಸಂಖ್ಯಾಕ ಭಾಷೆಯಾದ ಕನ್ನಡವನ್ನೂ ಕಡ್ಡಾಯಗೊಳಿಸಬೇಕು ಎಂಬುದನ್ನು ಯಾಕೆ ಮರೆತರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿ ಕನ್ನಡವನ್ನೇ ಪ್ರಥಮ ಭಾಷೆಯನ್ನಾಗಿ ಸ್ವೀಕರಿಸುವುದು ಕಡ್ಡಾಯವಾಗಬೇಕು. ಅದರೊಂದಿಗೆ ಸಂಸ್ಕೃತವನ್ನು ಕಲಿಯಬಯಸುವವರಿಗೆ ಐದನೇ ಭಾಷೆಯನ್ನಾಗಿ ಆ ಅವಕಾಶವನ್ನು ಒದಗಿಸಬೇಕು. ಕನ್ನಡ, ಮಲಯಾಳ, ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ಹೀಗೆ ಪಂಚ ಭಾಷಾ ಪ್ರವೀಣರನ್ನಾಗಿಸಲು ಇದೊಂದೇ ಮಾರ್ಗ. ಅದೇ ರೀತಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಕನ್ನಡಿಗ ವಿದ್ಯಾರ್ಥಿ ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಆರಿಸಿಕೊಂಡರೆ ಮಾತೃ ಭಾಷೆ ಕನ್ನಡವನ್ನೂ ಕಡ್ಡಾಯವಾಗಿ ಕಲಿಸಬೇಕು ಎಂಬ ವಾದವನ್ನು ಕೇರಳ ಸರಕಾರ ಬೆಂಬಲಿಸಬೇಕು. ತಪ್ಪಲಿದೆ ಕನ್ನಡ ಕಲಿಯುವ ಅವಕಾಶ
ಈಗಿನ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಕನ್ನಡಿಗ ವಿದ್ಯಾರ್ಥಿಗಳು ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಆರಿಸಿಕೊಂಡರೆ ಪ್ರಥಮ ಭಾಷೆಯ ದ್ವಿತೀಯ ಪತ್ರಿಕೆಯನ್ನಾಗಿ ಮಾತೃ ಭಾಷೆ ಕನ್ನಡವನ್ನು ಕಲಿಯುವ ಅವಕಾಶವಿತ್ತು. ಆದರೆ ಇನ್ನು ಮುಂದೆ ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಮಲಯಾಳವನ್ನು ಪ್ರಥಮ ಭಾಷೆಯ ದ್ವಿತೀಯ ಪತ್ರಿಕೆಯನ್ನಾಗಿ ಕಲಿಯಬೇಕಾಗುವುದರಿಂದ ಕನ್ನಡ ಮಾತೃ ಭಾಷೆಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯುವ ಅವಕಾಶವೇ ಇರುವುದಿಲ್ಲ ಎಂಬುದು ಬೇಸರ. ಸಂಸ್ಕೃತದ ಕಲಿಕೆ ಕನ್ನಡಕ್ಕೆ ಪೂರಕ ಎನ್ನುವವರೂ ಮುಂದೆ ಕರ್ನಾಟಕದಲ್ಲಿ ಶಿಕ್ಷಣ ಮುಂದುವರಿಸ ಬೇಕಾದಾಗ ಸಂಸ್ಕೃತ ಹಾಗೂ ಕನ್ನಡ ಭಾಷೆಗಳು ಪ್ರಸ್ತುತವೇ ಹೊರತು ಮಲಯಾಳವಲ್ಲ ಎಂಬ ನಿಲುವಿನ ಪೋಷಕರಿಗೂ ತಮ್ಮ ಮಕ್ಕಳಿಗೆ ಕನ್ನಡ ಹಾಗೂ ಸಂಸ್ಕೃತ ಎರಡು ಭಾಷೆಗಳನ್ನೂ ಕಲಿಸಲು ಸಾಧ್ಯತೆಯಿಲ್ಲದಿರುವುದು ಸಮಸ್ಯೆಯಾಗಬಹುದು. ಈ ಎಲ್ಲ ವಿಚಾರಗಳನ್ನು ಕೇರಳ ಸರಕಾರದ ಮಂತ್ರಿ ಮಹೋದಯರು ಹಾಗೂ ಅಧಿಕಾರಿಗಳು ಅರಿತುಕೊಂಡು ಕಾರ್ಯಪ್ರವೃತ್ತರಾಗಬೇಕಿತ್ತು ಎಂಬುದು ಗಡಿನಾಡು ಕನ್ನಡಿಗರ ಅಭಿಮತವಾಗಿದೆ.