Advertisement

ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ಸ್ಟಾರ್‌ವಾರ್‌?

06:00 AM Oct 05, 2018 | |

ಬೆಂಗಳೂರು: ಕನ್ನಡದ ಚಿತ್ರರಂಗದಲ್ಲಿ ದೊಡ್ಡ ಸಂಚಲನವೊಂದು ಉಂಟಾಗಿದೆ. ಆ ಸಂಚಲನಕ್ಕೆ ಕಾರಣ ಇಬ್ಬರು ಸ್ಟಾರ್‌ ನಟರು ಹಾಗೂ ಅವರು ಆಯ್ಕೆ ಮಾಡಿಕೊಂಡಿರುವ ಐತಿಹಾಸಿಕ ಕಥೆ. ಇಬ್ಬರು ಸ್ಟಾರ್‌ ನಟರು ಒಂದೇ ಕಥೆಯನ್ನಿಟ್ಟುಕೊಂಡು ಬೇರೆ ಬೇರೆ ಸಿನಿಮಾ ಮಾಡಲು ಮುಂದಾಗಿರುವುದೇ ಆ ಸಂಚಲನಕ್ಕೆ ಕಾರಣ. ಇದೀಗ ಈ ಇಬ್ಬರು ನಟರ ಅಭಿಮಾನಿ ವರ್ಗಕ್ಕೂ ಹಾಗು ಚಿತ್ರರಂಗಕ್ಕೂ ಇನ್ನಿಲ್ಲದ ಕುತೂಹಲ ಶುರುವಾಗಿದೆ!

Advertisement

ನಟರಾದ ದರ್ಶನ್‌ ಹಾಗೂ ಸುದೀಪ್‌ ಅವರು ಐತಿಹಾಸಿಕ ಚಿತ್ರವೊಂದನ್ನು ಮಾಡಲು ಮುಂದಾಗಿದ್ದಾರೆ. ಹಾಗಂತ, ಇಬ್ಬರು ಜೊತೆಯಾಗಿ ನಟಿಸಲಿದ್ದಾರೆಂದು ಅಭಿಮಾನಿಗಳು ಖುಷಿಪಡುವಂತಿಲ್ಲ. ಕೋಟೆನಾಡು ಚಿತ್ರದುರ್ಗದ ರಾಜ ವೀರ ಮದಕರಿ ನಾಯಕನ ಕಥೆ ಇಟ್ಟುಕೊಂಡು ಐತಿಹಾಸಿಕ ಚಿತ್ರ ಮಾಡಲು ಈ ಇಬ್ಬರು ನಾಯಕರು ಆಸಕ್ತಿ ತೋರಿಸಿದ್ದಾರೆ. ಅಂದಹಾಗೆ, ಲೇಖಕ ಬಿ.ಎಲ್‌.ವೇಣು ಅವರು ಬರೆದ “ಗಂಡುಗಲಿ ಮದಕರಿ ನಾಯಕ’ ಕಾದಂಬರಿಯನ್ನಾಧರಿಸಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ, ದರ್ಶನ್‌ ನಾಯಕರಾಗಿ ನಟಿಸುತ್ತಾರೆಂದು ಹೇಳಲಾಗಿದೆ. ಜೊತೆಗೆ ಚಿತ್ರಕ್ಕೆ ಬೇಕಾದ ಪೂರ್ವ ತಯಾರಿಗಳು ಕೂಡಾ ಈಗಾಗಲೇ ಜೋರಾಗಿಯೇ ನಡೆಯುತ್ತಿವೆ.

ಈ ನಡುವೆಯೇ ಸುದೀಪ್‌ ಕೂಡಾ ರಾಜವೀರ ಮದಕರಿನಾಯಕನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದು, ಆ ಚಿತ್ರದ ಕುರಿತ ಕೆಲಸಗಳು ಒಂದೂವರೆ ವರ್ಷದಿಂದಲೇ ಆರಂಭವಾಗಿವೆ ಹಾಗು ಈ ಚಿತ್ರವನ್ನು ತಾನೇ ನಿರ್ದೇಶಿಸುವ ಆಸೆಯೂ ಇದೆ ಎಂದು ಸ್ವತಃ ಸುದೀಪ್‌ ಹೇಳಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದಾರೆ. ಸುದೀಪ್‌ ಕೂಡಾ ಚಿತ್ರದುರ್ಗದ ವೀರಮದಕರಿ ನಾಯಕನ ಕುರಿತ ಸಿನಿಮಾ ಮಾಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದರೂ, ಈ ಬಗ್ಗೆ ಯಾವುದೇ ಸ್ಪಷತೆ ಇರಲಿಲ್ಲ. ಈಗ ಸ್ವತಃ ಈ ಬಗ್ಗೆ ತಮ್ಮ ಟ್ವೀಟರ್‌ನಲ್ಲಿ ದೀರ್ಘ‌ ಪತ್ರವೊಂದನ್ನು ಬರೆದುಕೊಂಡು, ಕೆಲ ಗೊಂದಲಗಳನ್ನು ಸ್ಪಷ್ಟಪಡಿಸಿದ್ದಾರೆ.

ಸುದೀಪ್‌ ಟ್ವೀಟರ್‌ ಮೂಲಕ ತಾವು ವೀರ ಮದಕರಿ ನಾಯಕನ ಕುರಿತು ಸಿನಿಮಾ ಮಾಡುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಚರ್ಚೆ ಹಾಗೂ ಕಾಮೆಂಟ್‌ಗಳಿಗೂ ಕಾರಣವಾಗಿದೆ. ಯಾರು ಈ ಪಾತ್ರಕ್ಕೆ ಹೊಂದುತ್ತಾರೆ, ಹೊಂದಲ್ಲ ಎಂಬಂತಹ ಚರ್ಚೆಗಳು ಸಹ ಜೋರಾಗಿಯೇ ಆರಂಭವಾಗಿದ್ದು, ಮುಂದೆ ಸ್ಟಾರ್‌ವಾರ್‌ಗೆ ಕಾರಣವಾಗುವ ಲಕ್ಷಣಗಳು ಗೋಚರಿಸುತ್ತಿವೆ ಅಂದರೆ ನಂಬಲೇಬೇಕು.

ಅದೇನೆ ಇದ್ದರೂ, ಐತಿಹಾಸಿಕ ಚಿತ್ರ ಕಟ್ಟಿಕೊಡುವುದು ಸುಲಭವಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕು, ರೂಪುರೇಷೆಗಳು ಸಿದ್ಧಗೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ, ಈ ನೆಲದ ರಾಜನ ವೈಭವ ಚಿತ್ರದ ಮೂಲಕ ಮರುಕಳಿಸಬೇಕು. ಇಂತಹ ನೂರಾರು ಸವಾಲುಗಳು ಚಿತ್ರಕ್ಕೆ ಎದುರಾಗುತ್ತವೆ. ಅವೆಲ್ಲವನ್ನು ಮೆಟ್ಟಿನಿಂತು ರಾಜವೀರ ಮದಕರಿಯ ಚಿತ್ರಣವನ್ನು ಕನ್ನಡಿಗರಿಗೆ ಉಣಬಡಿಸಲು ಹೊರಟಿರುವ ಸಾಹಸವನ್ನು ಮೆಚ್ಚಲೇಬೇಕು. ಐತಿಹಾಸಿಕ ಸಿನಿಮಾ ಯಾರೇ ಮಾಡಿದರೂ, ಅಂತಿಮವಾಗಿ “ರಾಜವೀರ ಮದಕರಿ’ ನೆನಪಲ್ಲುಳಿಯುವಂತಿರಬೇಕಷ್ಟೇ.

Advertisement

ವಿವಾದಕ್ಕೆ ಸಿಲುಕಿದ್ದ ಸುದೀಪ್‌ “ವೀರ ಮದಕರಿ’ ಶೀರ್ಷಿಕೆ: 2009ರಲ್ಲಿ ಸುದೀಪ್‌ “ವೀರ ಮದಕರಿ’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದು ತೆಲುಗಿನ “ವಿಕ್ರಮಾರ್ಕುಡು’ ಸಿನಿಮಾದ ರೀಮೇಕ್‌ ಆಗಿತ್ತು. ರೀಮೇಕ್‌ ಸಿನಿಮಾವೊಂದಕ್ಕೆ ಕನ್ನಡ ನೆಲದ ರಾಜನ ಹೆಸರನ್ನು ಇಡಬಾರದು ಎಂದು ಸಾಹಿತಿ ಬಿ.ಎಲ್‌.ವೇಣು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರದ ಶೀರ್ಷಿಕೆಯನ್ನು “ಈ ಶತಮಾನದ ವೀರಮದಕರಿ’ ಬದಲಿಸಿ, ಚಿತ್ರ ಮಾಡಲಾಗಿತ್ತು.

ಸುದೀಪ್‌ ಬರಹ ಹೀಗಿದೆ…
ವೀರ ಮದಕರಿ ನಾಯಕನ ಸಿನಿಮಾ ನಿರ್ಮಾಣದ ಕುರಿತಂತೆ ನನ್ನ ಕೆಲವು ಅಭಿಪ್ರಾಯಗಳು ..
ನಾನು, ನನ್ನ ತಂಡ ಹಾಗೂ ಕೆಲವು ಲೇಖಕರ ಬಳಗವು ಈಗ ಒಂದು-ಒಂದೂವರೆ ವರ್ಷದಿಂದ ವೀರ ಮದಕರಿ ನಾಯಕ ಸಿನಿಮಾ ನಿರ್ಮಾಣದ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಒಂದಷ್ಟು ಸಂಶೋಧನೆ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. “ವೀರ ಮದಕರಿ’ ಸಿನಿಮಾ ಮಾಡುವ ನಮ್ಮ ಆಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದಂತಹುದು. ಆದರೆ, ಈ ದಿಸೆಯಲ್ಲಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು. ಹೀಗಾಗಿ ಈ ಸಿನಿಮಾ ನಿರ್ದೇಶನ ಕೂಡ ಮಾಡುವ ಸ್ಫೂರ್ತಿ ಚಿಗುರೊಡೆಸಿತ್ತು.ಇತ್ತೀಚೆಗೆ ಇದೇ ಕಥೆಯ ಆಧಾರಿತ ಮತ್ತೂಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತು.

ಸಹಜವಾಗಿಯೇ ನನಗೆ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟು ಹಾಕಿತು. ಯಾರೇ ಆಗಲೀ, ಇತಿಹಾಸದ ವಿಷಯಗಳ ಮೇಲೆ ಸಿನಿಮಾ ನಿರ್ಮಿಸಲು ಅರ್ಹರಿದ್ದಾರೆ. ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆಕಂಡ ಉದಾಹರಣೆಗಳಿವೆ. ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಆತ ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನಿಮಾ ಯಾರಾದರೂ ಮಾಡಬಹುದು.

ರಾಕ್‌ಲೈನ್‌  ವೆಂಕಟೇಶ್‌ ಅವರ ಸಿನಿಮಾ ಆಸಕ್ತಿ ಅದ್ವಿತೀಯವಾದದ್ದು. ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದಕ್ಕೆ ಅನುಮಾನವೇ ಇಲ್ಲ. ರಾಜೇಂದ್ರ ಸಿಂಗ್‌ ಬಾಬು ಅವರ ಅನುಭವ ಕೂಡಾ ಇದರಲ್ಲಿ ಸಮ್ಮಿಲನವಾಗಿದೆ. ಆದರೆ, ನಾನು ಮತ್ತು ನನ್ನ ತಂಡವು ಮಾಡ ಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡಾ. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಛಿಸುವುದಿಲ್ಲ. ಇದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ!ರಾಕ್‌ಲೈನ್‌ ಅವರ ತಂಡವನ್ನು ನಾನು ಇಂತಹ ಒಳ್ಳೆಯ ಕರ್ನಾಟಕದ ನೆಲದ ಕಥೆಯನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಶಯಗಳು.ಅದೇ ರೀತಿಯಾಗಿ ನನ್ನ ನಿರ್ಣಯವನ್ನು ನೀವೆಲ್ಲರೂ ಸಮ್ಮತಿಸುತ್ತೀರೆಂದು ನಂಬಿರುವೆ.
ನಿಮ್ಮವ, ಕಿಚ್ಚ

ಈಗಾಗಲೇ “ಗಂಡುಗಲಿ ಮದಕರಿ ನಾಯಕ’ ಚಿತ್ರ ಮಾಡುವ ಕುರಿತು ಮಾತುಕತೆ ನಡೆದು, ಅದರ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ.1981ರಲ್ಲೇ ನಾನು “ಗಂಡುಗಲಿ ಮದಕರಿನಾಯಕ’ ಕಾದಂಬರಿ ಬರೆದಿದ್ದೆ. ಈಗಾಗಲೇ 7 ಮುದ್ರಣ ಕಂಡು, ಈಗ ಎಂಟನೇ ಮುದ್ರಣಕ್ಕೆ ಅಣಿಯಾಗುತ್ತಿದೆ. ಈ ಕಾದಂಬರಿ ಚಿತ್ರವಾಗುತ್ತಿ ರುವುದು ಹೊಸ ಸುದ್ದಿಯಲ್ಲ. ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ.
– ಬಿ.ಎಲ್‌.ವೇಣು, ಲೇಖಕ

“ಸದ್ಯಕ್ಕೆ “ಮದಕರಿನಾಯಕ’ ಕುರಿತು ಸಿನಿಮಾ ಮಾಡಲು ತಯಾರಿ ನಡೆಯುತ್ತಿದೆ. ಸ್ಕ್ರಿಪ್ಟ್ ಕೆಲಸ ಜೋರಾಗಿದೆ. ಈ ಬಗ್ಗೆ ನಾನು ಹೇಳುವುದಕ್ಕಿಂತ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರೇ ಮಾತನಾಡಬೇಕು. ಅವರೇ ಈ ವಿಷಯಕ್ಕೆ ಸ್ಪಷ್ಟನೆ ಕೊಡುತ್ತಾರೆ. ನಾನು ಆ ಬಗ್ಗೆ ಈಗಲೇ ಏನನ್ನೂ ಹೇಳಲಾರೆ. ನಾನು ಮೇಕಿಂಗ್‌ ಬಗ್ಗೆಯಷ್ಟೇ ಒತ್ತು ಕೊಡ್ತೀನಿ. ಏನೇ ಇದ್ದರೂ, ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿದ ಬಳಿಕವಷ್ಟೇ ನಾನು ಉತ್ತರಿಸುತ್ತೇನೆ’.
– ರಾಜೇಂದ್ರಸಿಂಗ್‌ ಬಾಬು, ನಿರ್ದೇಶಕ

ಜ.15ಕ್ಕೆ ಮುಹೂರ್ತ: ರಾಕ್‌ಲೈನ್‌
“ಈ ಸಿನಿಮಾ ನಾಲ್ಕು ವರ್ಷಗಳ ಹಿಂದೆ ಕಂಡ ಕನಸು. ಈ ಕುರಿತು ರಾಜೇಂದ್ರ ಸಿಂಗ್‌ ಬಾಬು, ಬಿ.ಎಲ್‌.ವೇಣು ಸೇರಿ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದೇವೆ. ಇಲ್ಲಿ ನಾನು ಮಾಡುತ್ತಿರುವುದು ಚಿತ್ರದುರ್ಗದ ಕಡೆಯ ಮದಕರಿ ನಾಯಕನ ಕುರಿತ ಸಿನಿಮಾ. ಇಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹೇಳಿದ್ದಾರೆ. ಚಿತ್ರಕ್ಕೆ ಜನವರಿ 15 ರಂದು ಮುಹೂರ್ತ ನಡೆಯಲಿದೆ.

ದಸರಾ ಅಥವಾ ದೀಪಾವಳಿಗೆ ರಿಲೀಸ್‌ ಮಾಡುವ ಯೋಚನೆ ಇದೆ ಎಂದೂ ತಿಳಿಸಿದ್ದಾರೆ. ನಾನು ಸುದೀಪ್‌, ದರ್ಶನ್‌ ಎಲ್ಲರೂ ಸ್ನೇಹಿತರು. ಏನೇ ಕೆಲಸ ಮಾಡಿದರೂ, ಪರಸ್ಪರ ಹೊಂದಾಣಿಕೆಯಿಂದ ಮಾಡುತ್ತೇವೆ. ನನ್ನ ಸಿನಿಮಾ ಕಥೆಯನ್ನು ಸುದೀಪ್‌ ಅವರಿಗೆ ಹೇಳುತ್ತೇನೆ. ಅವರ ಸಿನಿಮಾ ಕಥೆಯನ್ನು ನನಗೆ ಹೇಳುತ್ತಾರೆ. ಹಾಗಾಗಿ ಇಲ್ಲಿ ಯಾವುದೇ ಗೊಂದಲ, ವಿವಾದಕ್ಕೆ ಆಸ್ಪದ ಇರಲ್ಲ ಎಂದರು.

– ರವಿಪ್ರಕಾಶ್‌ ರೈ/ವಿಜಯ್‌ ಭರಮಸಾಗರ
 

Advertisement

Udayavani is now on Telegram. Click here to join our channel and stay updated with the latest news.

Next