Advertisement

ಅನುದಾನ ಇಲ್ಲದೇ ಕನ್ನಡ ಭವನ ನನೆಗುದಿಗೆ

12:44 PM Mar 29, 2022 | Team Udayavani |

ಬೀದರ: ಸುದೀರ್ಘ‌ ಹೋರಾಟದ ಪರಿಣಾಮ ಜಿಲ್ಲಾ ಕೇಂದ್ರ ಬೀದರನಲ್ಲಿ ಸ್ಥಾಪನೆಯಾಗುತ್ತಿರುವ ಸುಸಜ್ಜಿತ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಕೊರತೆ ಆಗಿದ್ದು, ಯೋಜನೆ ನನೆಗುದಿಗೆ ಬಿದ್ದಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವಾಗಿದ್ದು, ಅನುದಾನಕ್ಕಾಗಿ ಕಸಾಪ ಹೋರಾಟಕ್ಕೆ ಇಳಿಯುವುದು ಇಲ್ಲವೇ “ಜೋಳಿಗೆ’ ಅಭಿಯಾನ ನಡೆಸಲು ನಿರ್ಧರಿಸಿದೆ.

Advertisement

ಸಾಂಸ್ಕೃತಿಕ ನಗರಿ ಬೀದರನಲ್ಲಿ ಸಾಹಿತ್ಯಾಸಕ್ತರ ಸ್ವಾಭಿಮಾನದ ಹೆಗ್ಗುರುತು “ಕನ್ನಡ ಭವನ’ ನಿರ್ಮಾಣ ಆಗಬೇಕೆಂಬುದು ಕನ್ನಡಿಗರ ಎರಡು ದಶಕಗಳ ಕನಸು. ಕನ್ನಡದ ನೆಲದಲ್ಲೇ ಭವನಕ್ಕಾಗಿ ಅಗತ್ಯ ನಿವೇಶನಕ್ಕೆ ಹಲವು ವರ್ಷಗಳ ಕಾಲ ಸಂಘರ್ಷ ನಡೆಸಿದ ಕನ್ನಡ ಸಾಹಿತ್ಯ ಪರಿಷತ್‌, ಈಗ ಅರ್ದಕ್ಕೆ ನಿಂತಿರುವ ಕಟ್ಟಡಕ್ಕೆ ಅನುದಾನಕ್ಕಾಗಿ ಮಗದೊಮ್ಮೆ ಹೋರಾಟದ ಹಾದಿ ತುಳಿಯುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ.

ನಗರದ ಗುರುದ್ವಾರ ಪರಿಸರದ ಸರ್ವೇ ನಂ.60ರಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸುಸಜ್ಜಿತ ಭವನ ನಿರ್ಮಾಣಕ್ಕೆ ಕಳೆದ ನ.22ರಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೂರು ಪ್ರತ್ಯೇಕ ಕಟ್ಟಡಗಳನ್ನು ಒಳಗೊಂಡಿರುವ ಯೋಜನೆಯಡಿ ಗ್ರಂಥಾಲಯ, ಆರ್ಟ್‌ ಗ್ಯಾಲರಿ, ವಸತಿ ಗೃಹ, ಕಸಾಪ ಕಚೇರಿ, ಸಭಾಂಗಣವುಳ್ಳ ಒಂದು ಕಟ್ಟಡ, 600 ಜನ ಸಾಮರ್ಥ್ಯದ ಸಭಾ ಭವನ ಮತ್ತು ಬಯಲು ರಂಗ ಮಂದಿರದ ಎರಡು ಕಟ್ಟಡಗಳು ಹೊಂದಿವೆ. ಸದ್ಯ ಯೋಜನೆಯಡಿ ಆಡಳಿತ ಕಚೇರಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಕಳೆದ ವರ್ಷ 2 ಕೊಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ, ಕೋವಿಡ್‌ ಕಾರಣದಿಂದ ಆರ್ಥಿಕ ತೊಂದರೆಯ ನೆಪವೊಡ್ಡಿ ಕೇವಲ 1 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಇನ್ನೊಂದೆಡೆ ಸಂಸದರು ಮತ್ತು ಬೀದರ ಶಾಸಕರು ತಮ್ಮ ನಿಧಿಯಿಂದ ಘೋಷಿಸಿದ್ದ ತಲಾ 10 ಲಕ್ಷ ರೂ. ಬಿಡುಗಡೆಗೆ ನಿರ್ಲಕ್ಷ ತೋರುತ್ತಿದ್ದಾರೆ. ಹಾಗಾಗಿ ಶೇ. 80ರಷ್ಟು ಪೂರ್ಣಗೊಂಡಿರುವ ಕಟ್ಟಡದ ಕಾಮಗಾರಿ ಈಗ ಹಣ ಇಲ್ಲದೇ ಕಳೆದ 3 ತಿಂಗಳಿಂದ ಸ್ಥಗಿತಗೊಂಡಿದೆ.

ತಾತ್ಕಾಲಿಕ ಹಾಲ್‌ನ್ನು ಸಹ ಒಳಗೊಂಡಿದ್ದ ಆಡಳಿತ ಕಚೇರಿಯನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸಿ, ಅಲ್ಲಿಂದ ಕನ್ನಡದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕೆಂಬ ಕಸಾಪ ಕನಸಿಗೆ ಅನುದಾನ ಕೊರತೆ ತಣ್ಣೀರೆರಚಿದಂತಾಗಿದೆ.

Advertisement

2ನೇ ಕಂತಿನ ಹಣಕ್ಕಾಗಿ ಪ್ರಾಧಿಕಾರಕ್ಕೆ ನಿರಂತರ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರಾಧಿಕಾರದ ಬಳಿ ಹಣ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಪಡೆಯುವಂತೆ ಕೈಚಲ್ಲಿದೆ. ಕನ್ನಡ ಭವನಕ್ಕೆ ಒಂದಾದ ಮೇಲೊಂದು ಅಡೆತಡೆ ಎದುರಾಗುತ್ತಿರುವುದು ಕನ್ನಡಿಗರನ್ನು ಕೆರಳಿಸುತ್ತಿದ್ದು, ಚುನಾಯಿತ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಎಚ್ಚೆತ್ತು ಸರ್ಕಾರದಿಂದ ಅಗತ್ಯ ಅನುದಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿ, ಆದಷ್ಟು ಬೇಗ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಪಾರಂಪರಿಕ ನಗರ ಬೀದರಗೆ ಇನ್ನಷ್ಟು ಮೆರಗು ತುಂಬಬೇಕಿದೆ.

ಬೀದರ ನಗರದಲ್ಲಿ ಎಲ್ಲ ಅಡೆತಡೆಗಳನ್ನು ದಾಟಿ 8 ಕೋಟಿ ರೂ. ವೆಚ್ಚದ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗಡಿ ಪ್ರಾಧಿಕಾರ ಮಂಜೂರು ಮಾಡಿದ 2 ಕೋಟಿ ರೂ. ಪೈಕಿ 1 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಹಾಗಾಗಿ ಆರಂಭಿಕವಾಗಿ ಕೈಗೆತ್ತಿಕೊಂಡಿರುವ ಆಡಳಿತ ಕಚೇರಿ ಕೆಲಸವೂ ಸಹ ಸ್ಥಗಿತಗೊಂಡಿದೆ. ಇತ್ತಿಚೆಗೆ ಭೇಟಿ ನೀಡಿದ್ದ ಪ್ರಾಧಿಕಾರದ ಅಧ್ಯಕ್ಷರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದೇನೆ. ಅಷ್ಟೇ ಅಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಕೆಆರ್‌ಡಿಬಿಗೂ ಸಹ ಅನುದಾನಕ್ಕಾಗಿ ಮನವಿ ಮಾಡಿದ್ದೇನೆ. -ಸುರೇಶ ಚನಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಸಾಪ, ಬೀದರ

-­ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next