Advertisement

ಕನ್ನಡಿಗ  ಕಲಾವಿದರ ಪರಿಷತ್‌ ಮಹಾರಾಷ್ಟ್ರ:ಕಲಾ ಮಹೋತ್ಸವ ಸಮಾರೋಪ

04:14 PM Mar 20, 2018 | Team Udayavani |

ಮುಂಬಯಿ: ತುಳುನಾಡ ಕರಾವಳಿಯು  ಕಲೆಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ ನಾಡಾಗಿದೆ. ಇಲ್ಲಿ ವೈವಿಧ್ಯಮಯ ಕಲೆಗಳು ತನ್ನದೇ ಆದ ವೈಭವದೊಂದಿಗೆ ಮೆರೆಯುತ್ತಿದ್ದು, ಇಲ್ಲಿಂದ ಬಂದ ಕಲಾವಿದರು ಮುಂಬಯಿಯಲ್ಲಿ ನಮ್ಮ ಕಲೆಗಳನ್ನು ಬೆಳೆಸುವುದರೊಂದಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೆಚ್ಚಿನ ಕಲಾವಿದರು ಅನೇಕ ಸಮಸ್ಯೆಗಳನ್ನು ಅನುಭವಿಸಿದರೂ  ಕಲೆಯ ಮೇಲಿನ ಪ್ರೀತಿಯಿಂದ ಕಠಿಣ ಪರಿಶ್ರಮದೊಂದಿಗೆ ಇಲ್ಲಿ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಕಲಾವಿದರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕ ಶ್ರಮಿಸುತ್ತಿರುವುದು ಅಭಿನಂದನೀಯವಾಗಿದೆ ಎಂದು ಉದ್ಯಮಿ, ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಕುಲದ ಉಪಕಾರ್ಯಾಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಇವರು ನುಡಿದರು.

Advertisement

ಮಾ. 17 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದಲ್ಲಿ ನಡೆದ ಕನ್ನಡಿಗ  ಕಲಾವಿದರ ಪರಿಷತ್ತು ಮಹಾರಾಷ್ಟ್ರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಜರಗಿದ ಸಾಂಸ್ಕೃತಿಕ ಕಲಾ ಮಹೋತ್ಸವ-2018 ಮತ್ತು ಕಲಾಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಕಲಾವಿದರ ಜೀವನವೊಂದು ಬಣ್ಣದ ಬದುಕು. ಅವರು ರಂಗದಿಂದ ನಿರ್ಗಮಿಸಿದ ಆನಂತರ ಅವರ ಜೀವನವು ಅನೇಕ ಸಮಸ್ಯೆಗಳಿಂದ ಕೂಡಿದೆ. ಅದರಲ್ಲೂ ರಂಗ ಕಲಾವಿದರು ತಮ್ಮ ಕಲೆಯ ಮೇಲಿನ ಪ್ರೀತಿಯಿಂದ ಅನೇಕ ಕಷ್ಟ-ಕಾರ್ಪಣ್ಯಗಳಿಂದ ಜೀವನವನ್ನು ಕಟ್ಟಿ ಕಠಿಣ ಪರಿಶ್ರಮದಿಂದ ಕಲೆಯನ್ನು ಪ್ರದರ್ಶಿಸುತ್ತಾರೆ. ಅವರೆಂದೂ ಕಲೆಯ ವ್ಯಾಪರೀಕರಣವನ್ನು ಮಾಡಿದವರಲ್ಲ. ಅವರಿಗೆ ಪ್ರೇಕ್ಷಕರ ಕೈ ಚಪ್ಪಾಳೆಯನ್ನು ಮಾತ್ರ ನಿರೀಕ್ಷಿಸುತ್ತಾರೆ. ಇತರ ಯಾವುದೇ ರೀತಿಯ ಸಂಭಾವನೆಗಳು ಅವರಿಗೆ ದೊರೆಯುವುದಿಲ್ಲ. ಇಂತಹ ಕಲಾವಿದರನ್ನು ನಾವೆಲ್ಲರು ಪ್ರೋತ್ಸಾಹಿಸಬೇಕು ಎಂದು ನುಡಿದರು.

ಅತಿಥಿಯಾಗಿ ಪಾಲ್ಗೊಂಡ ಕಲಾಶ್ರೀ ಪ್ರಶಸ್ತಿಯ ಪ್ರಾಯೋಜಕ ಉದ್ಯಮಿ, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಇವರು ಮಾತನಾಡಿ, ಹಿರಿಯ ಕಲಾವಿದರನ್ನು ಗೌರವಿಸಿ, ಅವರಿಗೆ ಪ್ರಶಸ್ತಿಯನ್ನು ನೀಡುವ ಸೌಭಾಗ್ಯ ನನಗೆ ದೊರೆತಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಮುಂಬಯಿಯಲ್ಲಿ ಅನೇಕ ಹಿರಿಯ ಕಲಾವಿದರು ತಮ್ಮ ಜೀವನವನ್ನೇ ಕಲೆಗಾಗಿ ಮುಡಿಪಾಗಿಟ್ಟಿದ್ದಾರೆ. ಅಂತವರನ್ನು ಗುರುತಿಸುವುದು ಉತ್ತಮ ಕಾರ್ಯವಾಗಿದೆ. ಈ ಕಲಾಶ್ರೀ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವಲ್ಲೂ ಪ್ರಯತ್ನಿಸುತ್ತೇನೆ ಎಂದರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ನ್ಯಾಯವಾದಿ ಸುಂದರ ಜಿ. ಭಂಡಾರಿ, ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಜಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಒಕ್ಕಲಿಗರ ಸಂಘ ಮುಂಬಯಿ ಅಧ್ಯಕ್ಷ ಜಿತೇಂದ್ರ ಜೆ. ಗೌಡ, ಮುಲುಂಡ್‌ ಬಂಟ್ಸ್‌ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್‌ ಎಂ. ಶೆಟ್ಟಿ,     ಅರುಣೋದಯ ಕಲಾನಿಕೇತನ ಇದರ ನಿರ್ದೇಶಕಿ ಡಾ| ಮೀನಾಕ್ಷೀ ರಾಜು ಶ್ರೀಯಾನ್‌ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಸಂಸ್ಥೆಯ ಉಪಾಧ್ಯಕ್ಷ ಅರವಿಂದ ಶೆಟ್ಟಿ ಕೊಜಕ್ಕೊಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ವಿಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಿ. ಟಿ. ಆಚಾರ್ಯ ಸಮ್ಮಾನ ಪತ್ರ ವಾಚಿಸಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕಮಲಾಕ್ಷ ಸರಾಫ್‌, ಗೌರವ ಪ್ರಧಾನ ಕಾರ್ಯದರ್ಶಿ ಬಾಬಾ ಪ್ರಸಾದ್‌ ಅರಸ, ಕೋಶಾಧಿಕಾರಿ ಪಿ. ಬಿ. ಚಂದ್ರಹಾಸ್‌, ಜತೆ ಕೋಶಾಧಿಕಾರಿ ಚಂದ್ರಾವತಿ ದೇವಾಡಿಗ, ಸಂಚಾಲಕ ರಮೇಶ್‌ ಶಿವಪುರ, ತಾರಾ ಆರ್‌. ಬಂಗೇರ ಉಪಸ್ಥಿತರಿದ್ದರು. 

Advertisement

ಜೊತೆ ಕೋಶಾಧಿಕಾರಿ ನವೀನ್‌ ಶೆಟ್ಟಿ ಇನ್ನಬಾಳಿಕೆ ವಂದಿಸಿದರು. ಸಭಾ ಕಾರ್ಯಕ್ರಮದ ಆನಂತರ ಕೃಷ್ಣರಾಜ್‌ ಶೆಟ್ಟಿ ನಿರ್ದೇಶನದಲ್ಲಿ ಪರಿಷತ್ತಿನ ಕಲಾವಿದರಿಂದ ಈ ರಾತ್ರೆಗ್‌ ಪಗೆಲ್‌Y ಯಾನ್‌ ನಾಟಕ ಪ್ರದರ್ಶನಗೊಂಡಿತು. 

ಚಿತ್ರ-ವರದಿ : ಸುಭಾಶ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next