“ಲವ್ ಮಾಕ್ಟೇಲ್’ ಚಿತ್ರದಲ್ಲಿ ಸಖತ್ ಎನರ್ಜಿಟಿಕ್ ಆಗಿ ಪಟ್ ಪಟ್ ಅಂತಾ ಮಾತನಾಡುತ್ತಾ, ಪ್ರತಿ ಮಾತಿಗೂ “ಹೆಂಗೆ ನಾವೂ’ ಅಂತಾ ಹೇಳುತ್ತಲೇ ಕೋಟಿ ಕನ್ನಡಿಗರ ಹೃದಯ ಗೆದ್ದೆ ಚೆಲುವೆ ರಚನಾ ಇಂದರ್. ಲವ್ ಮಾಕ್ಟೇಲ್ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಸಾಕಷ್ಟು ಪ್ರಶಂಸೆಯನ್ನು ಪಡೆದ ರಚನಾ, ಈಗ ಸಖತ್ ಬ್ಯುಸಿಯಾಗಿದ್ದಾರೆ. ಒಂದರ ಮೇಲೊಂದು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಚನಾ ನಟನೆಯ “ಹರಿಕಥೆಯಲ್ಲ, ಗಿರಿಕಥೆ’ ಇತ್ತೀಚೆಗೆ ಬಿಡುಗಡೆಯಾಗಿದೆ. ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡಬೇಕು ಅಂದರೆ ಒಂದು ಬ್ಯಾಗ್ರೌಂಡ್ ಅಥವಾ ಮಾಡಲಿಂಗ್ ಅನುಭವ ಇರಬೇಕು. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಬಳಿಕ ನಟಿಯಾದವರ ಸಂಖ್ಯೆ ಬಹಳಷ್ಟಿದೆ. ಈ ನಿಟ್ಟಿನಲ್ಲಿ ತಾನು ಮಾಡೆಲಿಂಗ್ ಪ್ರವೇಶಿದರೆ ಸಿನಿ ರಂಗಕ್ಕೆ ಪ್ರವೇಶ ಪಡೆಯಬಹುದು ಎಂಬ ಆಸೆ ರಚನಾಗೆ ಅವರಿಗೆ ಇತ್ತಂತೆ. ಬಾಲ್ಯದ ದಿನಗಳಿಂದ ಅಭಿನಯ, ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇದ್ದ ರಚನಾಗೆ ಮಾಡೆಲಿಂಗ್ ಮೂಲಕ ಸಿನಿರಂಗ ಪ್ರವೇಶಿಸಬಹುದು ಎಂದು ಮೊದಲು ಅದರ ತಯಾರಿ ಆರಂಭಿಸದರಂತೆ. ಮಾಡೆಲ್‌ಗಳಂತೆ ಫೋಟೋ ಶೂಟ್ ಕೂಡಾ ಮಾಡಿಸಿದ್ದರಂತೆ. ಅದರ ಪರಿಣಾಮ ಈಗ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿ, ಬಿಝಿಯಾಗುತ್ತಿದ್ದಾರೆ.
ಇದನ್ನೂ ಓದಿ:‘ತ್ರಿವಿಕ್ರಮ’ನಿಗೆ ಜೈ ಎಂದ ಪ್ರೇಕ್ಷಕ
ಸದ್ಯ ರಚನಾ ನಟಿಸಿರುವ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿರುವ ರಚನಾ “ತ್ರಿಬಲ್ ರೈಡಿಂಗ್’ ಸಿನಿಮಾ ಮೂಲಕ ಲಾಂಗ್ ಡ್ರೈವ್ ಗೆ ಸಿದ್ಧರಾಗಿದ್ದಾರೆ.
ಇನ್ನು “ಲವ್ 360′ ಅನ್ನೋ ಚಿತ್ರದಲ್ಲಿ ಪ್ರೇಕ್ಷಕರಿಗೆ ಪ್ರೀತಿ ಹಂಚಲು ರೆಡಿಯಾಗಿದ್ದಾರೆ. ತಮ್ಮ ಪದವಿ ದಿನಗಳಲ್ಲೇ ನಟನೆಗೆ ಬಂದ ರಚನಾ ಓದನ್ನು ನಿರ್ಲಕ್ಷಿಸದೆ, ಓದಿನ ಕಡೆಗೂ ತಮ್ಮ ಆಸಕ್ತಿಯನ್ನು ಮುಂದುವರಿಸಿದ್ದಾರೆ. ಸಿನಿಮಾ ಕ್ಷೇತ್ರದ ಜೊತೆ ಓದುದನ್ನು ಮುಂದುವರೆಸಿರುವ ರಚನಾ ಈಗ ತಮ್ಮ ಎಂ.ಬಿ.ಎ ಪದವಿಯನ್ನು ಪೂರೈಸುತ್ತಿದ್ದಾರೆ. ಸಾಮಾನ್ಯರಂತೆ ದಿನಂಪ್ರತಿ ಕಾಲೇಜು ಹೋಗುವುದು ಸಾಧ್ಯವಾಗದ ಕಾರಣ ಆನ್ ಲೈನ್ ಮೂಲಕ ಎಂ.ಬಿ.ಎ ಪದವಿ ತರಬೇತಿಗಳನ್ನು ಪಡೆಯುತ್ತಿದ್ದಾರೆ.
ತಮ್ಮ ಮೊದಲ ಚಿತ್ರಕ್ಕೆ ಸಿಕ್ಕ ಯಶಸ್ಸಿನ ಬಗ್ಗೆ ಮಾತನಾಡುವ ರಚನಾ, ಚಿತ್ರ ಮೊದಲು ಬಿಡುಗಡೆಯಾದಾಗ ಅಷ್ಟು ಜನಪ್ರಿಯವಾಗಿರಲಿಲ್ಲ. ಕೋವಿಡ್ ಲಾಕ್‌ಡೌನ್ ಕೂಡಾ ಆಗ ಆರಂಭವಾಗಿತ್ತು. ನಂತರ ಓಟಿಟಿ ಯಲ್ಲಿ ಬಿಡುಗಡೆಯಾದಾಗ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ದೊರೆಯಿತು. ಯಾವಾಗ ಹೆಚ್ಚು ಹೆಚ್ಚು ಜನ ಚಿತ್ರವನ್ನು ವೀಕ್ಷಿಸಿದರೋ ಅಷ್ಟು ಜನ ನನ್ನ ಪಾತ್ರವನ್ನು ಇಷ್ಟ ಪಟ್ಟರು. ಅದರಲ್ಲೂ ಹೆಚ್ಚಾಗಿ ಮಕ್ಕಳು ನನ್ನ ಡೈಲಾಗ್, ಅಭಿನಯ ಕಂಡು ಇಷ್ಟಪಟ್ಟರು. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನ, ಪ್ರೀತಿ ಹರಿದುಬಂತು. ನನಗೆ ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕು ಅಂತಲೇ ತಿಳಿಯಲಿಲ್ಲ. ಅಷ್ಟು ಪ್ರೀತಿ ಜನರಿಂದ ಸಿಕ್ಕಿದ್ದು ಅನಿರೀಕ್ಷಿತ. ನಾನು ಎಂದೂ ಕೂಡಾ ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ.’ ಎನ್ನುತ್ತಾರೆ.