Advertisement

ಕೆಪಿಜೆಪಿಗೆ ಬೈ: ಪ್ರಜಾಕೀಯಕ್ಕೆ ಜೈ

07:00 AM Mar 07, 2018 | Team Udayavani |

ಬೆಂಗಳೂರು: ಆರು ತಿಂಗಳ ಹಿಂದೆಯಷ್ಟೇ “ಕರ್ನಾಟಕ ಪ್ರಜ್ಞಾವಂತರ ಜನತಾಪಕ್ಷ’ದ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದ ರಿಯಲ್‌ ಸ್ಟಾರ್‌ ಖ್ಯಾತಿಯ ನಟ ಉಪೇಂದ್ರ ಕೆಪಿಜೆಪಿಗೆ ಗುಡ್‌ಬೈ ಹೇಳಿ “ಪ್ರಜಾಕೀಯ’ದ ಮೂಲಕ ರಾಜಕೀಯ ಮಾಡುವ ತೀರ್ಮಾನ ಮಾಡಿದ್ದಾರೆ.

Advertisement

ಇದರೊಂದಿಗೆ ಉಪೇಂದ್ರ ಕೆಪಿಜೆಪಿ ಸಂಬಂಧ ಕಡಿದು ಕೊಂಡಿದ್ದು, “ಪ್ರಜಾಕೀಯ’ ಹೆಸರಿನ ಪಕ್ಷ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸುವುದಾಗಿ ತಿಳಿಸಿದ್ದಾರೆ. ಬೇರೆ ಪಕ್ಷ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರುಪ್ಪಿಸ್‌ ರೆಸಾರ್ಟ್‌ನಲ್ಲಿ ಮಂಗಳವಾರ ಆಪ್ತರು, ಅಭಿಮಾನಿಗಳು, ಈಗಾಗಲೇ ಕೆಪಿಜೆಪಿಯಡಿ ಸ್ಪರ್ಧೆಗಿಳಿಯಲು ಸಜ್ಜಾಗಿದ್ದ ಉಪೇಂದ್ರ ಬಣದ
ಅಭ್ಯರ್ಥಿಗಳ ಜತೆ ಸಮಾಲೋಚನೆ ನಂತರ, “ಕೆಪಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಪ್ರಜಾಕೀಯ ಕಾನ್ಸೆಪ್ಟ್ನಡಿ ಹೊಸ ಪಕ್ಷ ಸ್ಥಾಪನೆ ಪ್ರಕ್ರಿಯೆ ತತ್‌ಕ್ಷಣದಿಂದಲೇ ಪ್ರಾರಂಭಿಸುವುದಾಗಿ’ ಘೋಷಿಸಿದರು.  ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 
“ಪ್ರಜಾಕೀಯ’ ಕಲ್ಪನೆಯಡಿ ಕೆಪಿಜೆಪಿಯಡಿ ಕೆಲಸ ಮಾಡಲಾಗುತ್ತಿತ್ತು. ಆದರೆ, ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಕೆಪಿಜೆಪಿ ತೊರೆದು ಪ್ರಜಾಕೀಯ ಪಕ್ಷ ಸ್ಥಾಪನೆಗೆ ತೀರ್ಮಾನಿಸಿದ್ದೇನೆ. ಪ್ರಜಾಕೀಯದಡಿ ನಾವು ಅಂದುಕೊಂಡಿರುವ ಕೆಲಸ ಮುಂದುವರಿಸಲಿದ್ದೇವೆ ಎಂದು ಹೇಳಿದರು.

ಜನರು ನಮಗೆ ಇಲ್ಲಿವರೆಗೆ ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ನಮಗೆ ಇದೇ ರೀತಿ ಬೆಂಬಲಿಸಬೇಕೆಂದು ಮನವಿ  ಮಾಡಿದರು.ಪ್ರಜಾಕೀಯ ಪಕ್ಷ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಲಾಗುವುದು. ಪಕ್ಷ ನೋಂದಣಿಯಾಗಿ ಚಿಹ್ನೆ ದೊರೆತರೆ
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು. ಇಲ್ಲದಿದ್ದರೆ ಮುಂದಿನ ಚುನಾವಣೆಗೆ ತಯಾರಾಗ್ತೀವೆ. ಗ್ರಾಪಂ, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದರು.

ಉಪೇಂದ್ರ ಕೆಪಿಜೆಪಿ ತೊರೆದಿರುವುದು ನೋವು ತಂದಿದೆ. ಅವರನ್ನು ಪಕ್ಷದಿಂದ ಹೊರಹಾಕುವ ಉದ್ದೇಶ ಇರಲಿಲ್ಲ. ಮತ್ತೆ ಕೆಪಿಜೆಪಿಗೆ ಬಂದರೆ ಅವರೇ ನಮ್ಮ ನಾಯಕರು. ಪ್ರಜಾಕೀಯ ಕಾನ್ಸೆಪ್ಟ್ ಕೆಪಿಜೆಪಿಯದೇ. ಉಪೇಂದ್ರ ಅವರಿಗೆ ಆಲ್‌ದಿ ಬೆಸ್ಟ್‌ ಹೇಳುವೆ.
● ಮಹೇಶ್‌ಗೌಡ, ಕೆಪಿಜೆಪಿ ಸಂಸ್ಥಾಪಕ

ಏನೇನಾಯ್ತು
 ರುಪ್ಪಿಸ್‌ ರೆಸಾರ್ಟ್‌ನಲ್ಲಿ ಬೆಂಬಲಿಗರು, ಆಪ್ತರು, ಸ್ಪರ್ಧಾಕಾಂಕ್ಷಿಗಳ ಸಭೆ
 ಆರು ತಿಂಗಳ ಹಿಂದೆಯಷ್ಟೇ “ರಂಗಪ್ರವೇಶ’ ಮಾಡಿದ್ದ ಕೆಪಿಜೆಪಿಗೆ ಮಂಗಳವಾರ ಉಪೇಂದ್ರ ಗುಡ್‌ಬೈ
 ಕೆಪಿಜೆಪಿಗೆ ರಾಜೀನಾಮೆ ನೀಡಿ “ಪ್ರಜಾಕೀಯ’ದಡಿ ರಾಜಕೀಯಕ್ಕೆ ಮುಂದಾದ ರಿಯಲ್‌ ಸ್ಟಾರ್‌
 ತಕ್ಷಣ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸುವುದಾಗಿ ಘೋಷಣೆ, ವಕೀಲರ ಮೂಲಕ ಪ್ರಕ್ರಿಯೆ ಶುರು
 ಈ ಚುನಾವಣೆಯಲ್ಲೇ ಸ್ಪರ್ಧೆ ಮಾಡುವ ಆಸಕ್ತಿ, ಆಗದಿದ್ದರೆ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧೆ
 ಬಿಜೆಪಿ ಅಥವಾ ಬೇರೆ ಪಕ್ಷ ಸೇರುವ ಸಾಧ್ಯತೆ ಅಲ್ಲಗಳೆದು ಸ್ಪಷ್ಟನೆ ನೀಡಿದ “ಆಟೋರಾಜ’
 “ಪ್ರಜಾಕೀಯ’ ಕಟ್ಟುವುದೊಂದೇ ದಾರಿ ಹಾಗೂ ಅನಿವಾರ್ಯ
 ನಮ್ಮಲ್ಲಿ ಅಭ್ಯರ್ಥಿಗಳಿದ್ದಾರೆ, ಪಕ್ಷ ಇಲ್ಲ ಎಂದು ಅಲವತ್ತುಕೊಂಡ ನಟ.
 ಉಪೇಂದ್ರ ಪಕ್ಷ ತೊರೆದದ್ದು ನೋವು ತಂದಿದೆ, ಅವರನ್ನು ಹೊರಹಾಕುವ ಉದ್ದೇಶ ಇರಲಿಲ್ಲ, ಮತ್ತೆ ಬಂದರೆ ಅವರೇ ನಮ್ಮ ನಾಯಕರು ಎಂದು ಕೆಪಿಜೆಪಿ ಸಂಸ್ಥಾಪಕ ಮಹೇಶ್‌ ಗೌಡ  ಹೇಳಿದ್ದಾರೆ.

Advertisement

ಪ್ರಜಾಕೀಯ ಪಕ್ಷ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಲಾಗುವುದು. ಪಕ್ಷ ನೋಂದಣಿಯಾಗಿ ಚಿಹ್ನೆ ದೊರೆತರೆ ವಿಧಾನಸಭೆ
ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು.

● ಉಪೇಂದ್ರ, ನಟ

Advertisement

Udayavani is now on Telegram. Click here to join our channel and stay updated with the latest news.

Next