ಸದ್ಯ ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು, ಹತ್ತಾರು ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ನಟ ಗೋಪಾಲಕೃಷ್ಣ ದೇಶಪಾಂಡೆ. ಎಂತಹ ಪಾತ್ರವಾದರೂ ಸರಿ, ಆ ಪಾತ್ರಕ್ಕೆ ವಿಶೇಷ ಜೀವ-ಭಾವ ಎರಡನ್ನೂ ತುಂಬಿ ಲೀಲಾಜಾಲವಾಗಿ ಅಭಿನಯಿಸುವ ಗೋಪಾಲಕೃಷ್ಣ ದೇಶಪಾಂಡೆ, ಯಾವುದೇ ಸದ್ದು-ಗದ್ದಲವಿಲ್ಲದೆ ಪ್ರೇಕ್ಷಕರ ಮನಮುಟ್ಟುವ ಅಪರೂಪದ ಕಲಾವಿದ.
ತಾನಾಯಿತು ತನ್ನ ಪಾತ್ರವಾಯಿತು ಎಂದು ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ, ಆದಷ್ಟು ಪ್ರಚಾರಗಳಿಂದ ದೂರವೇ ಉಳಿದಿರುವ ಗೋಪಾಲಕೃಷ್ಣ ದೇಶಪಾಂಡೆ ಇಂದಿನ ಬಹುತೇಕ ಯುವ ನಿರ್ದೇಶಕರ ಅಚ್ಚುಮೆಚ್ಚಿನ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥ ನಟ ಗೋಪಾಲಕೃಷ್ಣ ದೇಶಪಾಂಡೆ ಕೊಂಚ ಸಂಕೋಚದಿಂದಲೇ ತಮ್ಮ ಬಣ್ಣದ ಬದುಕಿನ ಒಂದಷ್ಟು ಸಂಗತಿಗಳ ಬಗ್ಗೆ “ಉದಯವಾಣಿ’ ಜೊತೆ ಮಾತಿಗಿಳಿದರು.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ಗೋಪಾಲಕೃಷ್ಣ ದೇಶಪಾಂಡೆ ಅವರದ್ದು ಮಧ್ಯಮ ವರ್ಗದ ಕುಟುಂಬ. ತಂದೆ ಒಂದಷ್ಟು ನಾಟಕಗಳನ್ನು ಮಾಡುತ್ತಿದ್ದರೂ, ಗೋಪಾಲಕೃಷ್ಣ ಅವರಿಗೆ ಅವರೇ ಹೇಳುವಂತೆ ಬಾಲ್ಯದಲ್ಲಿ ನಾಟಕ, ಅಭಿನಯದ ಕಡೆಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಪಿಯುಸಿ ವೇಳೆ ತಂದೆ ನಿಧನರಾಗಿದ್ದು, ಆ ಬಳಿಕ ಬಿ. ಎಸ್ಸಿ ಮಾಡಲು ಮುಂದಾಗುವ ಗೋಪಾಲಕೃಷ್ಣ ದೇಶಪಾಂಡೆಗೆ ಆಗ “ನೀನಾಸಂ’ ಜೊತೆಗೆ ರಂಗಭೂಮಿಯ ನಂಟು ಶುರುವಾಗುತ್ತದೆ. “ಬಿ. ಎಸ್ಸಿ ಮಾಡೋದು ಕಷ್ಟ ಅಂಥ ಗೊತ್ತಾಗುತ್ತಿದ್ದಂತೆ, ನನ್ನ ಗಮನ “ನೀನಾಸಂ’ ಮತ್ತು ರಂಗಭೂಮಿಯ ಕಡೆಗೆ ತಿರುಗಿತು. “ನೀನಾಸಂ’ಗೆ ಸೇರಿಕೊಂಡ ನಾನು ಅಲ್ಲಿ ಸುಮಾರು ಮೂರು ವರ್ಷ ರಂಗ “ತಿರುಗಾಟ’ ಮಾಡಿದೆ. ಇದು ನನಗೆ ಹೊಸ ಅನುಭವಗಳನ್ನು ತಂದುಕೊಟ್ಟಿತು. “ನೀನಾಸಂ’ಗೆ ಹೋದ ಮೇಲೆ ಬದುಕು ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಯಿತು. ಅಲ್ಲಿ ಹತ್ತಾರು ನಾಟಕಗಳನ್ನು ಮಾಡಿದೆ. ಅನೇಕ ರಂಗ ಸ್ನೇಹಿತರು ಸಿಕ್ಕರು. ಹೀಗೆ ಅಭಿನಯವೇ ಬದುಕಾಯಿತು’ ಎನ್ನುತ್ತಾರೆ ಗೋಪಾಲಕೃಷ್ಣ ದೇಶಪಾಂಡೆ.
2011-12ರಲ್ಲಿ ಬೆಂಗಳೂರಿಗೆ ಬಂದ ಗೋಪಾಲಕೃಷ್ಣ ದೇಶಪಾಂಡೆ ಮೊದಲು “ಪುಟ್ಟಗೌರಿ ಮದುವೆ’ ಮತ್ತು ಬಿ. ಸುರೇಶ್ ಅವರ “ಅಳಿಗುಳಿ ಮನೆ’ ಧಾರಾವಾಹಿ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಎರಡೂ ಧಾರಾವಾಹಿಗಳು ಗೋಪಾಲಕೃಷ್ಣ ಅವರನ್ನು ಪ್ರೇಕ್ಷಕರು ಗುರುತಿಸುವಂತೆ ಮಾಡುವುದರ ಜೊತೆಗೆ ಸಾಕಷ್ಟು ಅವಕಾಶಗಳನ್ನು ತಂದುಕೊಟ್ಟವು. ಅದಾದ ನಂತರ ನಿಧಾನವಾಗಿ “ಸಾಹೇಬ’ ಸಿನಿಮಾದ ಮೂಲಕ ಸಿನಿಮಾರಂಗಕ್ಕೂ ಅಡಿಯಿಟ್ಟ ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಮೊದಲ ಸಿನಿಮಾದಲ್ಲೇ ಸಿನಿಪ್ರಿಯರ ಮನ-ಗಮನ ಸೆಳೆಯುವಲ್ಲೂ ಯಸ್ವಿಯಾಗುತ್ತಾರೆ. “ಸಾಹೇಬ’ ಸಿನಿಮಾದ ಬಳಿಕ “ತಾಯಿಗೆ ತಕ್ಕ ಮಗ’, “ಅವನೇ ಶ್ರೀಮನ್ನಾರಾಯಣ’ ಹೀಗೆ ಬ್ಯಾಕ್ ಟು ಬ್ಯಾಕ್ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಗೋಪಾಲಕೃಷ್ಣ ದೇಶಪಾಂಡೆ, ಈಗ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಜಿ.ಎಸ್. ಕಾರ್ತಿಕ ಸುಧನ್