ಮಹಾನಗರ: ಕಂಕನಾಡಿ ಕರಾವಳಿ ವೃತ್ತ ದಿಂದ ಲೋವರ್ ಬೆಂದೂರ್‌ವೆಲ್‌ವರೆಗೆ ಹೊಂಡಗುಂಡಿಗಳಿಂದ ಕೂಡಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿದೆ.
ಕೆಲವೇ ಮೀಟರ್‌ಗಳಷ್ಟು ಇರುವ ಈ ರಸ್ತೆಯಲ್ಲಿ ಬೃಹತ್ ಹೊಂಡ ಗುಂಡಿಗಳು ನಿರ್ಮಾಣವಾಗಿದ ಹಿನ್ನೆಲೆ ವಾಹನ ಸವಾರರು ಪರದಾಡುತ್ತಿದ್ದರು. ದಿನವಿಡೀ ಈ ರಸ್ತೆ ವಾಹನ ದಟ್ಟನೆಯಿಂದ ಕೂಡಿರುವ ಕಾರಣ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ನಿತ್ಯ ಟ್ರಾಫಿಕ್ ಜಾಮ್‌ನಿಂದ ಸವಾರರು ಕಂಗೆಟ್ಟಿದ್ದರು. ಪ್ರತೀ ಮಳೆಗಾಲದಲ್ಲೂ ಇದೇ ಪರಿಸ್ಥಿತಿ ನಿಮಾರ್ಣವಾಗುವ ಹಿನ್ನೆಲೆ ಉದಯವಾಣಿ ಸುದಿನ ಆ. 9ರಂದು ಮೂಲ ಸೌಲಭ್ಯ ಸಮಾಚಾರದಲ್ಲಿ ವರದಿ ಪ್ರಕಟಿಸಿತ್ತು.
ಇದರ ಬೆನ್ನಲ್ಲೇ ಪಾಲಿಕೆ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ತತ್‌ಕ್ಷಣ ಸ್ಪಂದಿಸಿದ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರದಲ್ಲೇ ರಸ್ತೆ ಡಾಮರು ಕಾಮಗಾರಿ ನಡೆಸಬೇಕು ಎಂದು ಸಾರ್ವ ಜನಿಕರು ಆಗ್ರಹಿಸಿದ್ದಾರೆ.
ಮಾನವೀಯತೆ ಮೆರೆದ ಆಟೋ ರಿಕ್ಷಾ ಚಾಲಕ
ಕರಾವಳಿ ವೃತ್ತದಿಂದ ಲೋವರ್ ಬೆಂದೂರ್‌ವೆಲ್ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಹೊಂಡಗಳಲ್ಲಿ ಸಂಚರಿಸಲು ಸಂಕಷ್ಟವಾಗುತ್ತಿರುವುದನ್ನು ಗಮನಿಸಿದ ಆಟೋ ರಿಕ್ಷಾ ಚಾಲಕರೊಬ್ಬರು ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ತಮ್ಮ ರಿಕ್ಷಾದಲ್ಲಿ ಕಲ್ಲು ಮಣ್ಣು ತಂದು ಅವುಗಳನ್ನು ಹೊಂಡಗಳಿದ್ದ ಭಾಗಕ್ಕೆ ಹಾಕಿದ್ದಾರೆ. ಆ ಮೂಲಕ ಹೊಂಡ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇದೀಗ ಪಾಲಿಕೆ ಮೂಲಕ ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಕಾರ್ಯವಾಗಿದೆ.