Advertisement

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

04:05 PM Nov 29, 2024 | Team Udayavani |

ಅರಮನೆ ಮೈದಾನದ ಒಂದೊಂದು ವಿವಾಹ ವೇದಿಕೆಗಳಿಗೆ ಪ್ರತ್ಯೇಕ ದರ ; ರಾಜಧಾನಿಯಲ್ಲಿ ವೆಡ್ಡಿಂಗ್‌ಗೆ ಪ್ಯಾಲೇಸ್‌ ಗ್ರೌಂಡ್‌ಗೆ ಬೇಡಿಕೆ

Advertisement

ಬೆಂಗಳೂರು: ಆಡಂಬರ, ವೈವಿಧ್ಯ, ಸಂಪ್ರದಾಯ, ಅಡುಗೆ, ಉಡುಗೆ ಇವೆಲ್ಲವೂ ಇದ್ದು, ವಿಶಾಲವಾದ ವೈಭವದ ಸ್ಥಳಗಳಲ್ಲಿ ವಿವಾಹ ಸಮಾರಂಭ ಮಾಡಬೇಕೆಂದರೆ ಥಟ್‌ ಎಂದು ನೆನಪಿಗೆ ಬರುವುದು ಬೆಂಗಳೂರಿನ ಅರಮನೆ ಮೈದಾನದ (ಪ್ಯಾಲೇಸ್‌ ಗ್ರೌಂಡ್ಸ್‌) ಪ್ರತಿಷ್ಠಿತ ಮೈದಾನಗಳು. ಇಲ್ಲಿ ಕೇವಲ ಕೋಟ್ಯದಿಪತಿಗಳಿಗೆ ಮಾತ್ರ ವಿವಾಹ ಸಮಾರಂಭ ಮಾಡಲು ಸಾಧ್ಯ ಎಂದು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಅರಮನೆ ಮೈದಾನಗಳಲ್ಲಿ ಸುಮಾರು 15 ರಿಂದ 20 ಲಕ್ಷ ರೂ.ಗೂ ವಿವಾಹ ಸಮಾರಂಭ ನೆರ ವೇರಿಸಬಹುದು.

ಹೈ ಪ್ರೋಫೈಲ್‌ ಮದುವೆಗಳು, ಸಿನಿಮಾ ಸೆಲೆಬ್ರಿಟಿಗಳ ಸಮಾರಂಭಗಳು ಹೆಚ್ಚಾಗಿ ಅರಮನೆ ಮೈದಾನಗಳಲ್ಲಿ ನಡೆಯುತ್ತವೆ. ಇದು ಬೆಂಗಳೂರಿನಲ್ಲಿ ಮದುವೆ ಸಮಾರಂಭಗಳಿಗೆ ಹೆಚ್ಚಿನ ಬೇಡಿಕೆ ಇರುವ ಸ್ಥಳವಾಗಿದೆ. ಮದುವೆ ಸಮಾರಂಭಗಳಿಗಾಗಿ ಬಾಡಿಗೆ ನೀಡುವ 12ಕ್ಕೂ ಹೆಚ್ಚಿನ ಸ್ಥಳಗಳು ಅರಮನೆ ಮೈದಾನದಲ್ಲಿವೆ. ಅವುಗಳ ಪೈಕಿ ಗಾಯತ್ರಿ ವಿಹಾರ್‌ ಬಹಳ ಪ್ರಸಿದ್ದಿ ಪಡೆದಿದೆ.

ಉಳಿದಂತೆ ಟೆನಿಸ್‌ ಪೆವಿಲಿಯನ್‌, ಪ್ರಿನ್ಸೆಸ್‌ ಗಾಲ್ಫ್, ಶ್ರೀನಗರ ಪ್ಯಾಲೇಸ್‌ ಗಾರ್ಡನ್‌, ಶೃಂಗಾರ್‌, ದಿ ಗ್ರ್ಯಾಂಡ್‌ ಕ್ಯಾಸಲ್‌, ವೈಟ್‌ಪೆಟಲ್‌, ದಿ ಗ್ರ್ಯಾಂಡ್‌ ಕ್ಯಾಸಲ್‌, ಶೀಷ್‌ ಮಹಲ್‌ಗ‌ಳು ನಂತರದ ಸ್ಥಾನಗಳಲ್ಲಿವೆ. ಈ ಪ್ರದೇಶಗಳಿಗೆ 2 ದಿನಗಳ ವಿವಾಹ ಸಮಾರಂಭಕ್ಕೆ ಸುಮಾರು 3 ರಿಂದ 4 ಲಕ್ಷ ರೂ. ಬಾಡಿಗೆಗಳಿವೆ. ಒಂದೊಂದು ಸ್ಥಳಗಳಿಗೂ ಪ್ರತ್ಯೇಕ ಬಾಡಿಗೆ ನಿಗದಿಪಡಿಸಲಾಗಿದೆ.

ಉಳಿದಂತೆ ಅಲಂಕಾರ ಗಳು, ಆಸನಗಳು, ಮಂಟಪದ ಅಲಂಕಾರಗಳನ್ನು ಆಯೋಜಕರ ಮೂಲಕ ಮಾಡಿಸಬೇಕಾಗುತ್ತದೆ. ನೀವು ವಿವಾಹ ಸಮಾರಂಭವನ್ನು ಕೊಂಚ ಅದ್ಧೂರಿ ಯಾಗಿ ಮಾಡಬೇಕಿದ್ದರೆ ಬಾಡಿಗೆ ಹೊರತುಪಡಿಸಿ ಅಲಂಕಾರ ಹಾಗೂ ಇನ್ನಿತರ ಖರ್ಚುಗಳಿಗೆ ಕನಿಷ್ಠ 10 ರಿಂದ 12 ಲಕ್ಷ ರೂ. ವ್ಯಯಿಸಬೇಕಾಗುತ್ತದೆ. ಅಂದಾಜು ಸುಮಾರು 15 ರಿಂದ 20 ಲಕ್ಷ ರೂ. ವೆಚ್ಚ ಮಾಡಿದರೆ ಅರಮನೆ ಮೈದಾನದಲ್ಲಿ ಅದ್ಧೂರಿ ವಿವಾಹ ಸಮಾ ರಂಭ ನೆರವೇರಿಸಬಹುದು.

Advertisement

ಇನ್ನು ವಿವಾಹಕ್ಕೆ ಸೇರುವ ಜನ, ಲೈಟಿಂಗ್ಸ್‌ಗಳು, ಡಿಜೆ ಸದ್ದು, ಹೂವಿನ ಶೃಂಗಾರ, ಊಟೋಪಚಾರ ಇನ್ನಿತರ ವ್ಯವಸ್ಥೆಗಳಿಗೆ ಅನು ಗುಣವಾಗಿ ಕೋಟ್ಯಂತರ ರೂ. ಬೇಕಾದರೂ ವ್ಯಯಿ ಸುವವರಿದ್ದಾರೆ ಎನ್ನುತ್ತಾರೆ ವಿವಾಹ ಆಯೋಜಕರು.

ಯಾವೆಲ್ಲ ಮೈದಾನಗಳಲ್ಲಿ ಏನೆಲ್ಲ ಆಕರ್ಷಣೆ ಗಳಿವೆ?: ಅರಮನೆ ಮೈದಾನಗಳಲ್ಲಿರುವ ವಿವಾಹ ಸಮಾ ರಂಭಗಳಲ್ಲಿ ಹೊರಾಂಗಣ ಅಥವಾ ಒಳಾಂಗಣವನ್ನೂ ಆಯ್ಕೆ ಮಾಡಬಹುದು. ಈ ಅರಮನೆ ಮೈದಾನದಲ್ಲಿರುವ ಟೆನಿಸ್‌ ಪೆವಿಲಿಯನ್‌ ವೈಭವದ ಮದುವೆಗಳಿಗೆ ಪ್ರಶಸ್ತವಾಗಿದೆ. ಇಲ್ಲಿ ಹಸಿರು ಲಾನ್‌, ರಿಸೆಪ್ಷನ್‌ ವೇದಿಕೆ, ಊಟದ ಹಾಲ್‌ನ ಪ್ರತ್ಯೇಕ ಸೌಲಭ್ಯಗಳಿವೆ. 3 ಸಾವಿರಕ್ಕೂ ಹೆಚ್ಚಿನ ಅತಿಥಿಗಳಿಗೆ ಇಲ್ಲಿ ಸ್ಥಳಾವಕಾಶವಿದೆ.

ಶ್ರೀನಗರ ಪ್ಯಾಲೇಸ್‌ ಗಾರ್ಡನ್‌, ಪ್ರಿನ್ಸೆಸ್‌ ಗಾಲ್ಫ್, ಶೃಂಗಾರ್‌ನಲ್ಲಿ ಐಷಾರಾಮಿ ವಿವಾಹ ಮಂಟಪಗಳು, ರಿಸೆಪ್ಷನ್‌ ಹಾಲ್, ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆಗಳಿವೆ. ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ದಿ‌ ಗ್ರ್ಯಾಂಡ್‌ ಕ್ಯಾಸಲ್‌ನಲ್ಲಿ ಏಕಕಾಲಕ್ಕೆ 4 ಸಾವಿರಕ್ಕೂ ಹೆಚ್ಚಿನ ಅತಿಥಿಗಳು ಸೇರಬಹುದು.

ವೈಭವದ ವಿವಾಹಕ್ಕೆ ಶೀಷ್‌ ಮಹಲ್‌: ಕೆಂಪು ಹಾಸಿನ ಶೀಷ್‌ ಮಹಲ್‌ ವೈಭವದ ವಿವಾಹ ಸಮಾರಂಭಗಳಿಗೆ ಪ್ರಸಿದ್ಧಿ ಪಡೆದಿದ್ದು, ಸುಮಾರು ಒಂದೂವರೆಯಿಂದ ಎರಡು ಸಾವಿರ ಜನಕ್ಕೆ ಆಸನ ವ್ಯವಸ್ಥೆಗಳಿವೆ. ಇನ್ನು ಅತ್ಯಂತ ವಿಶಾಲವಾದ ಹೊರಾಂಗಣದಲ್ಲಿ ವಿವಾಹ ವಾಗಲು ಬಯಸುವವರು ಪ್ರಿನ್ಸೆಸ್‌ ಗಾಲ್ಫ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದರ ಸುತ್ತ- ಮುತ್ತಲಿನ ಹಸಿರು ಗಾರ್ಡನ್‌ ಕಣ್ಮನಸೂರೆ ಗೊಳಿ ಸುತ್ತವೆ. ಗಾಯತ್ರಿ ವಿಹಾರ್‌ ಸಹ ಎಲ್ಲ ಸೌಕರ್ಯ ಹೊಂದಿದ್ದು, ಮಧ್ಯಮ ವರ್ಗದ ಕುಟುಂಬಗಳು ಇದನ್ನು ಹೆಚ್ಚು ಆಯ್ಕೆ ಮಾಡುತ್ತಾರೆ.

ಇತ್ತೀಚೆಗೆ ಮದುವೆ ವಹಿವಾಟು ಕೊಂಚ ಇಳಿಕೆ

ಅರಮನೆ ಮೈದಾನದಲ್ಲಿ ಕಳೆದ 4-5 ವರ್ಷಗಳ ಹಿಂದೆ ಹೆಚ್ಚು ಮದುವೆ ಸಮಾರಂಭಗಳು ನಡೆ ಯುತ್ತಿದ್ದವು. ಆದರೆ, ಇತ್ತೀಚೆಗೆ ಮದುವೆ ವ್ಯವಹಾರಗಳು ಕೊಂಚ ಇಳಿಕೆಯಾಗಿದೆ. ಇದರಿಂದ ವಿವಾಹ ಆಯೋಜಕರಿಗೆ ಹಿಂದೆ ಆಗುತ್ತಿದ್ದಷ್ಟು ಲಾಭಗಳು ಸಿಗುತ್ತಿಲ್ಲ. ಇನ್ನು ಈ ಹಿಂದೆ ಗಾಯತ್ರಿ ವಿಹಾರ್‌ನಂತಹ ಸ್ಥಳಗಳ ಬಾಡಿಗೆ 2.50 ಲಕ್ಷ ರೂ. ನಿಂದ 3 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿತ್ತು. ಆದರೆ, ಕೆಲ ವರ್ಷಗಳ ಹಿಂದೆ ಈ ಬಾಡಿಗೆ ದರವನ್ನು ಕೊಂಚ ಏರಿಸ ಲಾಗಿದೆ. ಕಳೆದೊಂದು ವರ್ಷಗಳಿಂದ ವಿವಾಹ ಸೀಸನ್‌ಗಳಲ್ಲಿ ಕೇವಲ ಶ್ರೀಮಂತ ಮನೆತನ ದವರು, ಕುಬೇರರು ಮಾತ್ರ ಇಲ್ಲಿ ವಿವಾಹ ಸಮಾರಂಭಗಳ ಹಮ್ಮಿಕೊಳ್ಳುತ್ತಿದ್ದಾರೆ. ಬಹುತೇಕ ಮಂದಿ ನಗರದಲ್ಲಿರುವ ದೊಡ್ಡದಾದ ಹಾಲ್‌ಗ‌ಳನ್ನೇ ಆಶ್ರಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅರಮನೆ ಮೈದಾನದ ಒಂದೊಂದು ಸ್ಥಳಗಳಲ್ಲಿ ಪ್ರತ್ಯೇಕ ಬೆಲೆ ನಿಗದಿಪಡಿಸಲಾಗಿದೆ. ಇಲ್ಲಿನ ಖರ್ಚು-ವೆಚ್ಚಗಳೆಲ್ಲ ವಿವಾಹ ಸಮಾರಂಭ ಆಯೋಜಿಸುವವರ ಮೇಲೆ ಅವಲಂಬಿತವಾಗಿದೆ. ಕಡಿಮೆ ವೆಚ್ಚದಲ್ಲಿ ಸರಳವಾಗಿಯೂ ವಿವಾಹ ಮಾಡಬಹುದು. ಲಕ್ಷಾಂತರ ರೂ. ಖರ್ಚು ಮಾಡಿ ಅದ್ದೂರಿಯಾಗಿ ವಿವಾಹ ಮಾಡುವವರೂ ಇದ್ದಾರೆ. ●ಪಂಕಜ್‌ ಕೊಠಾರಿ, ವಿವಾಹ ಆಯೋಜಕ

  • ಅವಿನಾಶ್‌ ಮೂಡಂಬಿಕಾನ
Advertisement

Udayavani is now on Telegram. Click here to join our channel and stay updated with the latest news.

Next