Advertisement
ಕಾಣಿಯೂರಿನಿಂದ ಸ್ವಲ್ಪ ದೂರದ ರೈಲ್ವೇ ಸೇತುವೆಯ ಕೆಳಭಾಗದಲ್ಲಿ ರಸ್ತೆಯ ಪಕ್ಕದಲ್ಲಿಯೇ ಹೊಳೆ ಇದೆ. ಇಲ್ಲಿ ಪ್ರತಿ ಬಾರಿಯ ಮಳೆಗಾಲದಲ್ಲಿ ರಸ್ತೆ ಮುಳುಗಡೆಯಾಗುವುದು ಸಾಮಾನ್ಯ. ಭಾರೀ ಮಳೆಯಿಂದ ಬಂದ ನೆರೆ ನೀರಿಗೆ ಕಾಂಕ್ರೀಟ್ ರಸ್ತೆ ಮತ್ತು ತಡೆಗೋಡೆ ಕೊಚ್ಚಿ ಹೋಗಿದೆ. ಈ ಸಂಪರ್ಕ ರಸ್ತೆಯಲ್ಲಿ ತಿರುವು ಕೂಡ ಇದ್ದು, ರಾತ್ರಿ ಹೊತ್ತು ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಪಾದಚಾರಿಗಳಿಗೂ ಅಪಾಯವಿದೆ.
1996ರಲ್ಲಿ ರೈಲು ಮಾರ್ಗವು ಮೀಟರ್ ಗ್ರೇಜ್ ನಿಂದ ಬ್ರಾಡ್‌ಗೇಜ್ ಗೆ ಪರಿವರ್ತನೆಯಾಗುವ ಸಂದರ್ಭ ಕಾಣಿಯೂರು – ಮಾದೋಡಿ ಜಿ.ಪಂ. ರಸ್ತೆಯನ್ನು ಬಂದ್ ಮಾಡಿ ಪರ್ಯಾಯ ರಸ್ತೆಯಾಗಿ ಈ ರಸ್ತೆಯನ್ನು ರೈಲ್ವೇ ಇಲಾಖೆಯವರೇ ನಿರ್ಮಿಸಿದ್ದರು. ರಸ್ತೆಯನ್ನು ಬಂದ್ ಮಾಡಬಾರದಾಗಿ ಊರಿನವರು ಆ ಸಂದರ್ಭ ಪ್ರತಿಭಟಿಸಿದ್ದರು. ಆ ಕಾರಣಕ್ಕಾಗಿ ರೈಲ್ವೇ ಸೇತುವೆಯ ಕೆಲಭಾಗದಲ್ಲಿ ಹೊಳೆ ಬದಿಗೆ ತಡೆಗೋಡೆಯನ್ನು ನಿರ್ಮಿಸಿ ಕೊಟ್ಟಿದ್ದರು. ಕಾಮಗಾರಿ ಕಳಪೆಯಾದ ಕಾರಣ ರಸ್ತೆಯ ತಡೆಗೋಡೆಯು ಮಳೆ ನೀರಿಗೆ ಕೊಚ್ಚಿಕೊಂಡು ಹೋಯಿತು. ಜನಪ್ರತಿನಿಧಿಗಳು ಹಾಗೂ ರೈಲ್ವೇ ಇಲಾಖೆಗೆ ಹಲವು ಬಾರಿ ಮನವಿ ಮಾಡ ಲಾಯಿತಾದರೂ ಪರಿಣಾಮ ಶೂನ್ಯ. ಇದರಿಂದಾಗಿ ಹಲವಾರು ದ್ವಿಚಕ್ರ ಹಾಗೂ ಇತರ ವಾಹನಗಳು ಹೊಳೆಗೆ ಬಿದ್ದ ಘಟನೆಗಳು ಕಣ್ಣ ಮುಂದಿವೆ.
ತಡೆಗೋಡೆಗೆ ಆಗ್ರಹ
ಕಾಣಿಯೂರು – ಮಾದೋಡಿ- ಬೆಳ್ಳಾರೆ ಸಂಪರ್ಕ ರಸ್ತೆ ಮಾತ್ರವಲ್ಲದೇ ಕಾಣಿಯೂರು – ನೀರಜರಿ-ಅಬೀರ ರಸ್ತೆಯ ಮೂಲಕ ಬೆಳ್ಳಾರೆಗೆ ಸಂಪರ್ಕ ಹೊದಿರುವ ರಸ್ತೆಯೂ ಇದಾಗಿದೆ. ಕಾಣಿಯೂರು-ಪೆರ್ಲೋಡಿಗೆ ಸಂಪರ್ಕ ರಸ್ತೆಯೂ ಇದಾಗಿದೆ. ಈ ರಸ್ತೆಗೆ ಸಮರ್ಪಕವಾದ ಡಾಮರು ಕಾಮಗಾರಿ ಹಾಗೂ ಮಳೆಗಾಲದಲ್ಲಿ ರಸ್ತೆಗೆ ನೀರು ಬರದಂತೆ ತಡೆಯಲು ಹೊಳೆಗೆ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಬರಬಹುದಾದ ಅಪಾಯವನ್ನು ತಪ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.
Related Articles
ರೈಲ್ವೇ ಸೇತುವೆಯ ಕೆಲಭಾಗದಲ್ಲಿ ಹೊಳೆ ಬದಿಗೆ ತಡೆಗೋಡೆ ರಚನೆ ಮಾಡುವ ಉದ್ದೇಶದಿಂದ ಅಪಘಾತ ವಲಯಕ್ಕೆ ಸಂಬಂಧಪಟ್ಟ ಅನುದಾನವನ್ನು ಬಳಸಿ ತಡೆಗೋಡೆ ರಚನೆ ಮಾಡುವ ಸಂದರ್ಭದಲ್ಲಿ ರೈಲ್ವೇ ಇಲಾಖೆಯಿಂದ ತಡೆ ಉಂಟಾದ ಕಾರಣ ಅನುದಾನವನ್ನು ಬೇರೆ ಕಡೆಗೆ ವಿನಿಯೋಗಿಸಲಾಗಿದೆ. ಇದು ರೈಲ್ವೇ ಇಲಾಖೆಯವರೇ ಮಾಡಬೇಕಾದ ಕಾಮಗಾರಿಯಾಗಿದ್ದರೂ ನಾನಿಟ್ಟ ಅನುದಾನದಲ್ಲಿ ಕಾಮಗಾರಿ ನಡೆಸಲು ತಡೆ ಉಂಟು ಮಾಡಿರುವುದು ಬೇಸರದ ವಿಚಾರವಾಗಿದೆ. ರೈಲ್ವೇ ಇಲಾಖೆಯಿಂದ ಅನುಮತಿ ದೊರಕಿಸಿಕೊಡಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲು ಅವರಿಗೆ ವಿನಂತಿಸಲಾಗಿದೆ.
– ಪ್ರಮೀಳಾ ಜನಾರ್ದನ, ಸದಸ್ಯರು, ಜಿ.ಪಂ. ಬೆಳಂದೂರು ಕ್ಷೇತ್ರ
Advertisement
ಪತ್ರ ಬಂದಿಲ್ಲತಡೆಗೋಡೆ ರಚನೆಗೆ ಅನುಮತಿ ನೀಡುವಂತೆ ರೈಲ್ವೇ ಇಲಾಖೆಗೆ ಜಿ.ಪಂ.ನಿಂದ ಯಾವುದೇ ಪತ್ರ ಬಂದಿಲ್ಲ. ಪತ್ರ ಬಂದ ಅನಂತರ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಪಿ.ಕೆ. ನಾಯ್ಡು, ಸೆಕ್ಷನ್ ಎಂಜಿನಿಯರ್, ರೈಲ್ವೇ ಇಲಾಖೆ ಇಲಾಖೆಗೆ ಪತ್ರ ಕಳುಹಿಸಲಾಗಿದೆ
ಕಾಣಿಯೂರು-ಮಾದೋಡಿ ಸಂಪರ್ಕ ರಸ್ತೆಯು ಹೊಳೆ ಬದಿಯಲ್ಲಿ ಹಾದು ಹೋಗುತ್ತಿದ್ದು, ಈ ಭಾಗದಲ್ಲಿ ವಾಹನ ಸಂಚಾರವಿದೆ. ಶಾಲಾ ಮಕ್ಕಳು ಹೋಗುತ್ತಾರೆ. ಖಂಡಿತವಾಗಿಯೂ ಈ ಸ್ಥಳ ಅಪಾಯಕಾರಿಯಾಗಿದೆ. ಈ ಬಗ್ಗೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿ ನಿರ್ಣಯ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ.
– ಜಯಂತ ಅಬೀರ ಬೆಳಂದೂರು ಗ್ರಾ.ಪಂ. ಸದಸ್ಯರು — ಪ್ರವೀಣ್ ಚೆನ್ನಾವರ