ಮುಂಬಯಿ: ರಣ್ಬೀರ್ ಕಪೂರ್, ಆಲಿಯಾ ಭಟ್ ಅಭಿನಯದ “ಬ್ರಹ್ಮಾಸ್ತ್ರ” ಚಿತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾದ ಮೇಲೆ ಬಾಲಿವುಡ್ ದೊಡ್ಡ ನಿರೀಕ್ಷೆಯನ್ನಿಟ್ಟುಕೊಂಡಿದೆ.
ಬಿಗ್ ಬಜೆಟ್ ನಲ್ಲಿ ತಯಾರಾದ ಸಿನಿಮಾ ಮೊದಲ ದಿನ 36 ಕೋಟಿ ಗಳಿಕೆ ಮಾಡಿದೆ. ಇದು ಮಕಾಡೆ ಮಲಗಿರುವ ಬಾಲಿವುಡ್ ಗೆ ಚೇತರಿಕೆ ನೀಡಿದೆ. ಚಿತ್ರದ ಬಗ್ಗೆ ವಿಮರ್ಶಕರು ಪಾಸಿಟಿವ್ – ನೆಗೆಟಿವ್ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ನಟಿ ಕಂಗನಾ ರಣಾವತ್ “ಬ್ರಹ್ಮಾಸ್ತ್ರ” ನಿರ್ದೇಶಕ ಅಯನ್ ಮುಖರ್ಜಿ ವಿರುದ್ದ ಸರಣಿ ಟೀಕೆಗಳನ್ನು ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಹೆಸರು ಹೇಳಿ ನೇರವಾಗಿ ಟೀಕೆ ಮಾಡಿರುವ ಅವರು, ನಿರ್ದೇಶಕ ಅಯನ್ ಮುಖರ್ಜಿ ಅವರನ್ನು ಬುದ್ಧಿವಂತವೆಂದು ಕೆರದ ಪ್ರತಿಯೊಬ್ಬರನ್ನು ತಕ್ಷಣ ಜೈಲಿಗಟ್ಟಬೇಕು. ಸಿನಿಮಾ ತಯಾರಿಗೆ 12 ವರ್ಷ ತೆಗೆದುಕೊಂಡಿದ್ದಾರೆ. 14 ಡಿಓಪಿಗಳನ್ನು ಬದಲಾಯಿಸಿದ್ದಾರೆ. 400 ಕ್ಕೂ ಹೆಚ್ಚಿನ ದಿನ ಶೂಟಿಂಗ್ ಮಾಡಿದ್ದಾರೆ. 85 ಸಹಾಯಕ ನಿರ್ದೇಶಕರನ್ನು ಬದಲಾಯಿಸಿ, 600 ಕೋಟಿ ಬೂದಿಗೆ ಹಾಕಿದ್ದಾರೆ. ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳಲು ಸಿನಿಮಾದ ಹೆಸರನ್ನು ʼಜಲಾಲುದ್ದೀನ್ ರೂಮಿʼಯಿಂದ ʼಶಿವʼ ಎಂದು ಇಟ್ಟಿದ್ದಾರೆ. ʼಬಾಹುಬಲಿʼ ಸಿನಿಮಾದ ಯಶಸ್ಸಿನಿಂದ ಕೊನೆ ಕ್ಷಣದಲ್ಲಿ ಟೈಟಲ್ ಬದಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಲ್ಲಿ ಇದುವರೆಗೆ ಪ್ರತಿಭಾವಂತ ಕಲಾವಿದರು ಸಿಕ್ಕಿಲ್ಲ: ಕರಣ್ ಜೋಹರ್
ಕರಣ್ ಜೋಹರ್ ನಂತಹ ನಿರ್ಮಾಪಕರು, ಇದನ್ನು ಪ್ರಶ್ನೆ ಮಾಡಬೇಕು. ಅವರಿಗೆ ಸಿನಿಮಾದ ಸ್ಕ್ರಿಪ್ಟ್, ಸ್ಟೋರಿಗಿಂತ ಇನ್ನೊಬ್ಬರ ಲೈಂಗಿಕ ಜೀವನದ ಮೇಲೆ ಆಸಕ್ತಿ ಹೆಚ್ಚು. ಈ ಬಾರಿ ಕರಣ್ ಹಿಂದುತ್ವ, ದಕ್ಷಿಣದ ಕಡೆ ಸವಾರಿ ಮಾಡಿ ಮೆಚ್ಚುಗೆ ಗಳಿಸಲು ಹೊರಟಿದ್ದಾರೆ. ಸಿನಿಮಾ ಚೆನ್ನಾಗಿದೆ ಎನ್ನುವುದನ್ನು ವಿಮರ್ಶೆ ಮಾಡಿಸಿ, ಸುಳ್ಳು ರೇಟಿಂಗ್ ಕೊಟ್ಟು, ಕಲೆಕ್ಷನ್ ಬಗ್ಗೆ ಹೇಳುತ್ತಾರೆ. ದಕ್ಷಿಣದ ಸ್ಟಾರ್ ಗಳನ್ನು, ನಿರ್ದೇಶಕರು, ಬರಹಗಾರರನ್ನು ಸಿನಿಮಾದ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ. ಅವರು ಎಲ್ಲವನ್ನು ಮಾಡುತ್ತಾರೆ ಆದರೆ “ಬ್ರಹ್ಮಾಸ್ತ್ರ” ಎಂಬ ʼದುರಂತʼವನ್ನು ಸರಿಪಡಿಸಲು ಒಳ್ಳೆಯ ಡೈರೆಕ್ಟರ್, ನಟ, ಕಲಾವಿದರನ್ನು ಯಾಕೆ ಬಳಸಿಕೊಂಡಿಲ್ಲ ಎಂದು ಹೇಳಿದ್ದಾರೆ.
“ಬ್ರಹ್ಮಾಸ್ತ್ರ” ಹಿಂದಿ, ತಮಿಳು,ತೆಲುಗು,ಮಲಯಾಳಂ ಹಾಘೂ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿದೆ. ಸಿನಿಮಾದಲ್ಲಿ ರಣ್ಭೀರ್ ಕಪೂರ್,ಆಲಿಯಾ ಭಟ್,ಅಮಿತಾಭ್ ಬಚ್ಚನ್,ಮೌನಿ ರಾಯ್, ನಾಗಾರ್ಜುನ ನಟಿಸಿದ್ದಾರೆ. ಶಾರುಖ್ ಖಾನ್ ಗೆಸ್ಟ್ ರೋಲ್ ಮಾಡಿದ್ದಾರೆ.