ನವದೆಹಲಿ: ನಟಿ ತನುಶ್ರೀ ದತ್ತಾ ಶುರು ಮಾಡಿದ್ದ ಭಾರತದಲ್ಲಿನ ಮೀಟೂ ಆಂದೋಲನಕ್ಕೆ ನಿಧಾನಗತಿಯಲ್ಲಿ ಪ್ರತಿಕ್ರಿಯೆ ಸಿಗುತ್ತಿದ್ದು, ಈಗ ಬಾಲಿವುಡ್‌ನ ಹಲವು ನಟಿಯರು ತಾವು ಎದುರಿಸಿದ ಲೈಂಗಿಕ ಕಿರುಕುಳ ಕುರಿತಂತೆ ಬಾಯಿಬಿಡುತ್ತಿದ್ದಾರೆ. ಕ್ವೀನ್ ಚಿತ್ರದ ನಿರ್ದೇಶಕ ವಿಕಾಸ್ ಬೆಹ್ಲ ವಿರುದ್ಧ ನಟಿ ಕಂಗನಾ ರಣಾವತ್ ನೇರವಾಗಿಯೇ ಆರೋಪ ಮಾಡಿದ್ದಾರೆ. ಅಲ್ಲದೆ ಫಾಂಟಮ್ ಫಿಲ್ಮ್ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ಬೆಹ್ಲ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಆಂಗ್ಲ ವೆಬ್‌ಸೈಟ್‌ವೊಂದರಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. 2015ರ ಮೇನಲ್ಲಿ ಗೋವಾದ ಹೋಟೆಲ್‌ನಲ್ಲಿ ನಡೆದ ಘಟನೆ ಬಗ್ಗೆ ಅವರು ಹೇಳಿಕೊಂಡಿ ದ್ದಾರೆ. ಬೆಹ್ಲ, ಅನುರಾಗ್ ಕಶ್ಯಪ್ ಅವರು ಜತೆಗೂಡಿ ಈ ಸಿನಿಮಾ ಕಂಪನಿ ಶುರು ಮಾಡಿದ್ದು, ಇತ್ತೀಚೆಗಷ್ಟೇ ಇದು ಕಣ್ಮುಚ್ಚಿದೆ.
ವಿವಾದದ ಬಿಸಿ ತಾಗುತ್ತಿದ್ದಂತೆಯೇ ಕಂಪನಿಯ ಮತ್ತೂಬ್ಬ ಮಾಲೀಕ ಅನುರಾಗ್ ಕಶ್ಯಪ್, ಈಕೆಯ ಆರೋಪದ ಬಗ್ಗೆ ಗೊತ್ತಿದ್ದರೂ ವಕೀಲರ ತಪ್ಪು ಸಲಹೆಯಿಂದಾಗಿ ಹೆಚ್ಚು ಗಮನ ಹರಿಸಲಾಗಲಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಅಲ್ಲದೆ ಎಲ್ಲ ಗೊತ್ತಿದ್ದೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೆ ಎಂದಿದ್ದಾರೆ. ಆಗಲೇ ನೊಂದ ಯುವತಿಯು ತಮಗೆ ವಿವರವಾದ ದೂರು ನೀಡಿದ್ದರು. ಆದರೆ, ಬೆಹ್ಲ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕೆ ಕೆಲಸ ತ್ಯಜಿಸಿದ್ದರು. ಮೋಟ್ವಾನೆ ವಿಕ್ರಮಾದಿತ್ಯ ಕೂಡ ಆಗ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದಕ್ಕೆ ನೊಂದ ಯುವತಿಗೆ ಕ್ಷಮೆ ಕೋರಿದ್ದಾರೆ.
ನಾನಾ, ಗಣೇಶ್ ಆಚಾರ್ಯ ವಿರುದ್ಧ ದೂರು: ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಮತ್ತು ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ತನುಶ್ರೀ ದತ್ತಾ ಅಧಿಕೃತವಾಗಿ ಲೈಂಗಿಕ ಕಿರುಕುಳ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚೇತನ್ ಭಗತ್ ಕ್ಷಮೆ: ಮಹಿಳಾ ಪತ್ರಕರ್ತೆಯೊಬ್ಬರು ಖ್ಯಾತ ಲೇಖಕ ಚೇತನ್ ಭಗತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಲ್ಲದೆ ಚೇತನ್ ಭಗತ್ ಮತ್ತು ತಮ್ಮ ನಡುವಿನ ಸಂದೇಶಗಳ ಸ್ಕ್ರೀನ್ ಶಾಟ್ ಅನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇದಾದ ಮೇಲೆ ಭಗತ್, ಪತ್ರಕರ್ತೆ ಮತ್ತು ತಮ್ಮ ಪತ್ನಿಗೂ ಕ್ಷಮೆ ಕೇಳಿದ್ದಾರೆ. ಇದೇ ವೇಳೆ, ಬಾಲಿವುಡ್ ಗಾಯಕ ಕೈಲಾಶ್ ಖೇರ್ ವಿರುದ್ಧವೂ ನಟಾಶಾ ಹೆಮ್ರಾಜಿನಿ ಎಂಬ ಮಹಿಳಾ ಫೋಟೋ ಗ್ರಾಫರ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಖೇರ್ ನಿವಾಸಕ್ಕೆ ಸಂದರ್ಶನಕ್ಕೆ ತೆರಳಿದ್ದಾಗ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ಕಂಗನಾ ಆಕ್ರೋಶ
ಫಾಂಟಮ್ ಕಂಪನಿ ಮಾಜಿ ಸಿಬ್ಬಂದಿಯ ಹೇಳಿಕೆ ಹೊರಬಿದ್ದ ಮೇಲೆ ಬೆಹ್ಲ ಮೇಲೆ ನಟಿ ಕಂಗನಾ ರಣಾವತ್ ಕೂಡ ಮುಗಿಬಿದ್ದಿದ್ದಾರೆ. ನನ್ನ ಕುತ್ತಿಗೆಯಲ್ಲಿ ಮುಖ ಹುದುಗಿಸಿ, ನನ್ನ ತಲೆಗೂದಲಿನ ವಾಸನೆ ಗ್ರಹಿಸುತ್ತಿದ್ದ ಬೆಹ್ಲ, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ. ಬೆಹ್ಲ ಅವರ ಈ ವರ್ತನೆ ನನಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಹೀಗಾಗಿ ಫಾಂಟಮ್ ಕಂಪನಿಯ ಮಾಜಿ ಉದ್ಯೋಗಿ ಹೇಳಿದ್ದರಲ್ಲಿ ಸತ್ಯವಿದೆ ಎಂದಿದ್ದಾರೆ. ಸದ್ಯ ವಿಕಾಸ್ ಬೆಹ್ಲ, ಹೃತಿಕ್ ರೋಷನ್ ನಟನೆಯ ಸೂಪರ್ 30 ಸಿನಿಮಾ ನಿರ್ದೇಶಿಸಿದ್ದು ಜನವರಿಯಲ್ಲಿ ತೆರೆಗೆ ಬರಲಿದೆ.