ಹೊಸದಿಲ್ಲಿ: ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂದಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಬಲ ಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.
ಗೆಲುವು ಖಚಿತವಾಗುತ್ತಿದ್ದಂತೆ ಎಕ್ಸ್ ನಲ್ಲಿ ”ಈ ಬೆಂಬಲ, ಈ ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಎಲ್ಲಾ ಮಂಡಿ ನಿವಾಸಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು ಈ ಗೆಲುವು ನಿಮ್ಮೆಲ್ಲರದು, ಇದು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಮೇಲಿನ ನಂಬಿಕೆಯ ಗೆಲುವು, ಇದು ಸನಾತನದ ಗೆಲುವು, ಇದು ಮಂಡಿಯ ಗೌರವದ ಗೆಲುವು” ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ.
‘ಮಂಡಿ ಹೆಣ್ಣು ಮಕ್ಕಳಿಗೆ ಆಗುವ ಅವಮಾನಗಳನ್ನು ಸಹಿಸಲಿಸಿಲ್ಲ. ನಾನು ಮುಂಬೈಗೆ ಹೊರಡುವ ಮಟ್ಟಿಗೆ, ಹಿಮಾಚಲ ಪ್ರದೇಶ ನನ್ನ ‘ಜನ್ಮಭೂಮಿ’ ಮತ್ತು ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಹಾಗಾಗಿ, ನಾನು ಎಲ್ಲಿಗೂ ಹೋಗುತ್ತಿಲ್ಲ. ಬಹುಶಃ, ಬೇರೊಬ್ಬರು ತಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಹೊರಡಬೇಕಾಗುತ್ತದೆ. ನಾನು ಎಲ್ಲಿಯೂ ಹೋಗುವುದಿಲ್ಲ” ಎಂದು ಪರೋಕ್ಷವಾಗಿ ಪ್ರತಿಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ಅವರಿಗೆ ಟಾಂಗ್ ನೀಡಿದ್ದಾರೆ.
ಕ್ರಿಕೆಟಿಗ ಯುಸೂಫ್ ಪಠಾಣ್ ಗೆ ಜಯ
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಬಹರಾಮ್‌ಪುರದಲ್ಲಿ ಮಾಜಿ ಕ್ರಿಕೆಟಿಗ ,ಟಿಎಂಸಿಯಿಂದ ಕಣಕ್ಕಿಳಿದಿದ್ದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸೋಲಿನ ಶಾಕ್ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಕಡು ವಿರೋಧಿಯಾಗಿದ್ದ ಅಧೀರ್ ರಂಜನ್ ಚೌಧರಿ 1999 ರಿಂದ ನಿರಂತರವಾಗಿ ಬಹರಾಮ್‌ಪುರದ ಸಂಸದರಾಗಿ ಆಯ್ಕೆಯಾಗುತ್ತಿದ್ದರು. ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹಿರಿಯ ನಾಯಕ ಚೌಧರಿ ಅವರ ಕಠಿನ ಚುನಾವಣ ಸವಾಲು ಬಂಗಾಳದ ಅನಿವಾಸಿ ಪಠಾಣ್ ರೂಪದಲ್ಲಿ ಬಂತು.