ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು “ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಕರೆಯುವ ಮೂಲಕ ನಟಿ ಕಂಗನಾ ರಣೌತ್ ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಡ್ರಗ್ ವಿವಾದದ ಕುರಿತು ಮಾತನಾಡಿದ್ದ ಸಂಸದೆ ಜಯಾ ಬಚ್ಚನ್ ಅವರನ್ನು ಟೀಕಿಸಿದ್ದ ಕಂಗನಾ ಬಗ್ಗೆ ಕಿಡಿಕಾರಿದ್ದ ಊರ್ಮಿಳಾ, “ಮುಂಬೈ ಮತ್ತು ಮಹಾರಾಷ್ಟ್ರ, ಸಿನಿಮಾ ಇಂಡಸ್ಟ್ರಿಯನ್ನು ಟೀಕಿಸುವ ಮುನ್ನ ಕಂಗನಾ ಅವರು ತಮ್ಮದೇ ಹುಟ್ಟೂರಾದ ಹಿಮಾಚಲ ಪ್ರದೇಶದಲ್ಲಿನ ಡ್ರಗ್ ಸಂಸ್ಕೃತಿ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿದೆ’ ಎಂದು ಹೇಳಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಂಗನಾ, “ಊರ್ಮಿಳಾ ತಮ್ಮ ನಟನೆಯಿಂದ ಖ್ಯಾತರಾಗಿಲ್ಲ. ಬದಲಾಗಿ ಅವರೊಬ್ಬ ಸಾಫ್ಟ್ ಪೋರ್ನ್ ಸ್ಟಾರ್(ಅಶ್ಲೀಲ ಚಿತ್ರಗಳ ನಟಿ)’ ಎಂದು ಹೇಳಿದ್ದಾರೆ. ಊರ್ಮಿಳಾ ವಿರುದ್ಧ ಕಂಗನಾ ಈ ರೀತಿಯ ಹೇಳಿಕೆಗೆ ಬಾಲಿವುಡ್‌ನ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಪ್‌ಗೆ ಹೋಲಿಕೆ: ಇದೇ ವೇಳೆ, ತಮ್ಮ ಬಂಗಲೆಯನ್ನು ಬಿಎಂಸಿ ಕೆಡವಿದ್ದರ ಕುರಿತು ಗುರುವಾರ ಮತ್ತೆ ಟ್ವೀಟ್ ಮಾಡಿರುವ ಕಂಗನಾ, “ಇದು ನನ್ನ ಕನಸು, ನನ್ನ ಚೈತನ್ಯ, ಸ್ವಾಭಿಮಾನ ಮತ್ತು ಭವಿಷ್ಯದ ಮೇಲಿನ ಅತ್ಯಾಚಾರ’ ಎಂದು ಬಣ್ಣಿಸಿದ್ದಾರೆ.
ಆರ್‌ಜೆಡಿ ನಾಯಕ ಲೂಸ್‌ಟಾಕ್: ಈ ನಡುವೆ, ನಟ ಸುಶಾಂತ್ ಸಿಂಗ್ ಒಬ್ಬ ರಜಪೂತ್ ಅಲ್ಲವೇ ಅಲ್ಲ. ಯಾಕೆಂದರೆ ಮಹಾರಾಣಾ ಪ್ರತಾಪ್ ವಂಶಕ್ಕೆ ಸೇರಿದ ರಜಪೂತರು ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಆರ್‌ಜೆಡಿ ಶಾಸಕ ಅರುಣ್ ಯಾದವ್ ಹೇಳಿದ್ದು, ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.