ಹೊಸದಿಲ್ಲಿ: ನ್ಯೂಜಿಲ್ಯಾಂಡಿನ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಸನ್‌ರೈಸರ್ ಹೈದರಾಬಾದ್ ತಂಡದ ಬದಲಿ ನಾಯಕನನ್ನಾಗಿ ನೇಮಿಸಲಾಗಿದೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿ ನಿಷೇಧಕ್ಕೊಳಗಾದ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಬದಲು ವಿಲಿಯಮ್ಸನ್ 2018ರ ಋತುವಿನಲ್ಲಿ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಷಣ್ಮುಗಂ ಗುರುವಾರ ಈ ಬದಲಾವಣೆಯನ್ನು ಪ್ರಕಟಿಸಿದರು.”ಕೇನ್ ವಿಲಿಯಮ್ಸನ್ ಅವರನ್ನು ಸನ್‌ರೈಸರ್ ಹೈದರಾಬಾದ್ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ. ಅವರು 2018ರ ಸಾಲಿನಲ್ಲಿ ನಮ್ಮ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ಕೆ. ಷಣ್ಮುಗಂ ಮಾಧ್ಯಮಗಳಿಗೆ ತಿಳಿಸಿದರು.
“ನಾನು ಈ ಋತುವಿನ ಉಸ್ತುವಾರಿ ನಾಯಕನ ಜವಾಬ್ದಾರಿಯನ್ನು ಹೊರಲು ಸಿದ್ಧನಾಗಿದ್ದೇನೆ. ಇದೊಂದು ಅಪೂರ್ವ ಅವಕಾಶ ಎಂದೇ ಭಾವಿಸಿದ್ದೇನೆ. ಸನ್‌ರೈಸರ್ ಹೈದರಾಬಾದ್ ಪ್ರತಿಭಾನ್ವಿತ ಆಟಗಾರರ ಪಡೆಯನ್ನು ಹೊಂದಿರುವ ತಂಡ. ಸವಾಲು ಸ್ವೀಕರಿಸಲು ಸಜ್ಜಾಗಿದ್ದೇನೆ…’ ಎಂಬ ಕೇನ್ ವಿಲಿಯಮ್ಸನ್ ಹೇಳಿಕೆಯನ್ನು ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
ಹೈದರಾಬಾದ್ ತಂಡದ ನಾಯಕತ್ವದ ರೇಸ್‌ನಲ್ಲಿ ಭಾರತದ ಎಡಗೈ ಆರಂಭಕಾರ ಶಿಖರ್ ಧವನ್ ಕೂಡ ಇದ್ದರು. ಬಾಂಗ್ಲಾದೇಶದ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಹೆಸರು ಕೂಡ ಕೇಳಿಬಂದಿತ್ತು. ಆದರೆ ಈಗಾಗಲೇ ನ್ಯೂಜಿಲ್ಯಾಂಡ್ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಸಾಕಷ್ಟು ಅನುಭವ ಹೊಂದಿರುವ ಹಾಗೂ ಯಶಸ್ಸನ್ನೂ ಕಂಡಿರುವ ಕಾರಣಕ್ಕಾಗಿ ವಿಲಿಯಮ್ಸನ್‌ಗೆ ಈ ಅವಕಾಶ ಒಲಿಯಿತು.
ಏಕೈಕ ವಿದೇಶಿ ನಾಯಕ!
ಕೇನ್ ವಿಲಿಯಮ್ಸನ್ ಈ ಸಲದ ಐಪಿಎಲ್ ಪಂದ್ಯಾವಳಿಯ ಏಕೈಕ ವಿದೇಶಿ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದ ಸ್ಟೀವನ್ ಸ್ಮಿತ್ ಅವರನ್ನು ಬುಧವಾರವೇ ಉಚ್ಚಾಟಿಸಲಾಗಿತ್ತು.
ಉಳಿದಂತೆ ಭಾರತದವರೇ ಆದ ವಿರಾಟ್ ಕೊಹ್ಲಿ (ಆರ್‌ಸಿಬಿ), ಗೌತಮ್ ಗಂಭೀರ್ (ಡೆಲ್ಲಿ), ಮಹೇಂದ್ರ ಸಿಂಗ್ ಧೋನಿ (ಚೆನ್ನೈ), ರೋಹಿತ್ ಶರ್ಮ (ಮುಂಬೈ), ಅಜಿಂಕ್ಯ ರಹಾನೆ (ರಾಜಸ್ಥಾನ್), ಆರ್. ಅಶ್ವಿನ್ (ಪಂಜಾಬ್), ದಿನೇಶ್ ಕಾರ್ತಿಕ್ (ಕೆಕೆಆರ್) ಅವರೆಲ್ಲ ಪ್ರಸಕ್ತ ಐಪಿಎಲ್‌ನ ಉಳಿದ 7 ತಂಡಗಳ ನಾಯಕರಾಗಿರುತ್ತಾರೆ.