Advertisement

IPL; ಹೈದರಾಬಾದ್‌ ಬಿಗ್‌ ಬ್ಯಾಟಿಂಗ್‌ಗೆ ಸಾಟಿಯೇ ಆರ್‌ಸಿಬಿ ಬೌಲಿಂಗ್‌?

12:01 AM Apr 15, 2024 | Team Udayavani |

ಬೆಂಗಳೂರು: ಬೌಲಿಂಗ್‌ ವೈಫ‌ಲ್ಯದಿಂದ ಅಂಕಪಟ್ಟಿಯಲ್ಲಿ ಪಾತಾಳ ಕಂಡಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಸೋಮವಾರ ರಾತ್ರಿ ತವರಿನಂಗಳದಲ್ಲಿ ಭಾರೀ ದೊಡ್ಡ ಸವಾಲೊಂದನ್ನು ಎದುರಿಸಲಿದೆ. ಅತ್ಯಂತ ಬಲಿಷ್ಠ ಹಾಗೂ ವಿಸ್ಫೋಟಕ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ.

Advertisement

ಈವರೆಗಿನ 6 ಪಂದ್ಯಗಳಲ್ಲಿ ಐದನ್ನು ಕಳೆದುಕೊಂಡಿರುವ ಆರ್‌ಸಿಬಿ, ಈ ಪಂದ್ಯದೊಂದಿಗೆ ಅರ್ಧ ಹಾದಿ ಕ್ರಮಿಸಲಿದೆ. ಸದ್ಯದ ಸ್ಥಿತಿಯಲ್ಲಿ ಪ್ಲೇ ಆಫ್ ಪಯಣ ಸುಲಭವಲ್ಲ. ಆದರೆ ಒಂದಿಷ್ಟಾದರೂ ಪ್ರತಿಷ್ಠೆ ಗಳಿಸಬೇಕಾದ ತುರ್ತು ಅಗತ್ಯವಿದೆ. ಹೈದರಾಬಾದ್‌ನ ಬಿಗ್‌ ಹಿಟ್ಟರ್‌ಗಳ ದೊಡ್ಡ ಪಡೆಯನ್ನು ಮಗುಚುವ ಮೂಲಕವೇ ಗೆಲುವಿನ ಹಳಿ ಏರಿದರೆ ಆರ್‌ಸಿಬಿ ಅಭಿಮಾನಿಗಳಿಗೆ ಇದಕ್ಕಿಂತ ಮಿಗಿಲಾದ ಸಂಭ್ರಮ ಇರಲಾರದು!

ಈ ಬಾರಿಯ ಐಪಿಎಲ್‌ ಟ್ರ್ಯಾಕ್‌ಗಳು ಬೌಲರ್‌ಗಳಿಗೆ ವೈವಿಧ್ಯಮಯ ಆಯ್ಕೆಗಳನ್ನು ಒದಗಿಸಿದೆ. ಬಹುತೇಕ ಎಲ್ಲ ತಂಡಗಳ ಬೌಲರ್ ಇದರ ಲಾಭವೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರ್‌ಸಿಬಿ ಬೌಲರ್ ಮಾತ್ರ ಇದರಲ್ಲಿ ಎಡವುತ್ತಿದ್ದಾರೆ. ಯಾವುದೇ ಪರಿಣಾಮ ಬೀರದ ಇವರ ಎಸೆತಗಳು ಎದುರಾಳಿಗಳ ಪಾಲಿಗೆ ಹಬ್ಬವಿದ್ದಂತೆ. ಮುಂಬೈ ವಿರುದ್ಧದ ಕಳೆದ ಪಂದ್ಯವೇ ಇದಕ್ಕೆ ಸಾಕ್ಷಿ. ಆರ್‌ಸಿಬಿ 196 ರನ್‌ ಪೇರಿಸಿದರೂ ಮುಂಬೈ ಇದನ್ನು 15.3 ಓವರ್‌ಗಳಲ್ಲೇ ಹಿಂದಿಕ್ಕಿ ಜಯಭೇರಿ ಮೊಳಗಿಸಿತು. ಅರ್ಥಾತ್‌, ಆರ್‌ಸಿಬಿ ಬೌಲರ್ ಓವರಿಗೆ 13ರಷ್ಟು ರನ್‌ ಬಿಟ್ಟುಕೊಟ್ಟಿದ್ದರು!

ಇಂಥ ಸ್ಥಿತಿಯಲ್ಲಿ, ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತವನ್ನು ಪೇರಿಸಿದ ತಂಡದ ವಿರುದ್ಧ ಆರ್‌ಸಿಬಿ ಬೌಲರ್ ಮ್ಯಾಜಿಕ್‌ ಮಾಡಬಲ್ಲರೇ ಎಂಬ ಪ್ರಶ್ನೆಯ ಜತೆಗೆ ಆತಂಕವೂ ಎದುರಾಗುವುದು ಸಹಜ. ಎಸ್‌ಆರ್‌ಎಚ್‌ನ ಹೆನ್ರಿಚ್‌ ಕ್ಲಾಸೆನ್‌ (186), ಅಭಿಷೇಕ್‌ ಶರ್ಮ (177) ಟಾಪ್‌-10 ಯಾದಿಯಲ್ಲಿದ್ದಾರೆ. ವಿಶ್ವಕಪ್‌ ಫೈನಲ್‌ ಹೀರೋ ಟ್ರ್ಯಾವಿಸ್‌ ಹೆಡ್‌ (133), ಐಡನ್‌ ಮಾರ್ಕ್‌ರಮ್‌ ಕೂಡ ಅಪಾಯಕಾರಿಗಳೇ.

ಸಮಾಧಾನವೆಂದರೆ, ಐಪಿಎಲ್‌ ದಾಖಲೆ ಹಾಗೂ ಈ ಸ್ಫೋಟಕ ಬ್ಯಾಟರ್‌ಗಳ ಹೊರತಾಗಿಯೂ ಹೈದರಾಬಾದ್‌ 5ನೇ ಸ್ಥಾನದಲ್ಲಿ ನೆಲೆಸಿದೆ. ಐದರಲ್ಲಿ 3 ಪಂದ್ಯ ಗೆದ್ದಿದೆ. ಆದರೆ ಇಲ್ಲೊಂದು ಸಂಗತಿಯನ್ನು ಗಮನಿಸಬೇಕು, ಮುಂಬೈ ವಿರುದ್ಧ ಸಿಡಿದ ಬಳಿಕ ಮತ್ತೂಮ್ಮೆ ಇಂಥದೇ ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಲು ಹೈದರಾಬಾದ್‌ ವಿಫ‌ಲವಾಗಿದೆ!

Advertisement

ಮ್ಯಾಕ್ಸ್‌ವೆಲ್‌ ಬೇಕೇ?
ಆರ್‌ಸಿಬಿ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚುವುದು ಕೊಹ್ಲಿ, ಕಾರ್ತಿಕ್‌ ಸೇರಿದಂತೆ ಒಬ್ಬಿಬ್ಬರು ಮಾತ್ರ. 5.3ರ ಸರಾಸರಿಯಲ್ಲಿ ಕೇವಲ 32 ರನ್‌ ಮಾಡಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಂಪೂರ್ಣ ವ್ಯರ್ಥ. ಇವರನ್ನು ಕೈಬಿಡಲು “ಫಿಟ್‌ನೆಸ್‌’ ನೆಪದ ಅಗತ್ಯ ಖಂಡಿತ ಇಲ್ಲ. ಮ್ಯಾಕ್ಸಿ ಬದಲು ತವರಿನ ಕೆಲವು ಯುವ ಆಟಗಾರರನ್ನು ಆಡಿಸಬಹುದು. ಬೌಲಿಂಗ್‌ ವಿಭಾಗ ದಲ್ಲಿ ಲಾಕಿ ಫ‌ರ್ಗ್ಯುಸನ್‌ ದಾಳಿಗೆ ಇಳಿಯುವುದೊಂದು ಬಾಕಿ ಇದೆ.
“ಚಿನ್ನಸ್ವಾಮಿ ಸ್ಟೇಡಿಯಂ’ನ ಸೀಮಾರೇಖೆ ಚಿಕ್ಕದಾದ ಕಾರಣ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಆಗುವುದರಲ್ಲಿ ಅನುಮಾನವಿಲ್ಲ. ಇಂಥ ಸ್ಥಿತಿಯಲ್ಲಿ ಬೌಲರ್‌ಗಳ ಪಾಡನ್ನು ಕಲ್ಪಿಸಿಕೊಳ್ಳುವುದೂ ಕಷ್ಟ!

Advertisement

Udayavani is now on Telegram. Click here to join our channel and stay updated with the latest news.

Next