ಹೊಸದಿಲ್ಲಿ : ಮುಂದಿನ ತಿಂಗಳು ಎಪ್ರಿಲ್ 7ರಿಂದ ಆರಂಭಗೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11 ನೇ ಆವೃತ್ತಿಯ ಕೂಟದಲ್ಲಿ ನ್ಯೂಜೀಲ್ಯಾಂಡ್ ಕ್ರಿಕೆಟ್ ನಾಯಕ ಕೇನ್ ವಿಲಯಮ್ಸನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸಲಿದ್ದಾರೆ.
ದಕ್ಷಿಣ ಆಫ್ರಿಕದ ಕೇಪ್ ಟೌನ್‌ನಲ್ಲಿ ಸಾಗಿದ 3ನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಕೃತ್ಯದಲ್ಲಿ ಶಾಮೀಲಾದ ಕಾರಣಕ್ಕೆ ನಿಷೇಧಕ್ಕೆ ಗುರಿಯಾಗಿರುವ ಡೇವಿಡ್ ವಾರ್ನರ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೂಲ ನಾಯಕ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದ ಹೊಣೆಯನ್ನು ಸ್ವೀಕರಿಸಿರುವ ವಿಲಿಯಮ್ಸನ್ ಅವರು, “ಪ್ರತಿಭಾವಂತ ಆಟಗಾರರನ್ನು ಒಳಗೊಂಡ ತಂಡದ ನಾಯಕತ್ವ ವಹಿಸುವ ಹೊಣೆಗಾರಿಕೆಯು ಅತ್ಯಂತ ರೋಮಾಂಚಕಾರಿ.ನನ್ನ ಮುಂದಿರುವ ಸವಾಲುಗಳನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಡೇವಿಡ್ ವಾರ್ನರ್ ಅವರ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 2016ರ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ವಿಲಯಮ್ಸನ್ ಆ ತಂಡದ ಭಾಗವಾಗಿದ್ದರು.
ಕುತೂಹಲದ ಸಂಗತಿ ಎಂದರೆ ಎಪ್ರಿಲ್ 9ರಂದು ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ, ವಾರ್ನರ್ ಜತೆಗೇ ಒಂದು ವರ್ಷದ ನಿಷೇಧಕ್ಕೆ ಗುರಿಯಾಗಿರುವ ಆಸೀಸ್ ಕ್ರಿಕೆಟ್ ನಾಯಕ ಸ್ಟೀವ್ ಸ್ಮಿತ್ ನಾಯಕತ್ವ ಇಲ್ಲದ ರಾಜಸ್ಥಾನ್ ರಾಯಲ್ ತಂಡವನ್ನು ಎದುರಿಸಲಿದೆ.