Advertisement

ಕೇನ್‌ ದಾಖಲೆ ದ್ವಿಶತಕ; ಕಿವೀಸ್‌ ಮೇಲುಗೈ

10:44 PM Jan 05, 2021 | Team Udayavani |

ಕ್ರೈಸ್ಟ್‌ಚರ್ಚ್: ಕೇನ್‌ ವಿಲಿಯಮ್ಸನ್‌ ಅವರ ದಾಖಲೆ ದ್ವಿಶತಕ, ಹೆನ್ರಿ ನಿಕೋಲ್ಸ್‌ ಮತ್ತು ಡ್ಯಾರಿಲ್‌ ಮಿಚೆಲ್‌ ಅವರ ಶತಕ ಸಾಹಸದಿಂದ ಕ್ರೈಸ್ಟ್‌ ಚರ್ಚ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಅಮೋಘ ಮೇಲುಗೈ ಸಾಧಿಸಿದೆ. ಪಾಕಿಸ್ಥಾನ ವೈಟ್‌ವಾಶ್‌ ಮುಖಭಂಗ ಅನುಭವಿಸುವುದು ಖಾತ್ರಿಯಾಗಿದೆ.

Advertisement

ನ್ಯೂಜಿಲ್ಯಾಂಡ್‌ 6 ವಿಕೆಟಿಗೆ 659 ರನ್‌ ಪೇರಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಇದರಲ್ಲಿ ವಿಲಿಯಮ್ಸನ್‌ ಪಾಲು 238 ರನ್‌ (364 ಎಸೆತ, 28 ಬೌಂಡರಿ). ಇದರೊಂದಿಗೆ ಅವರು ಟೆಸ್ಟ್‌ ನಲ್ಲಿ 4 ದ್ವಿಶತಕ ಬಾರಿಸಿದ ನ್ಯೂಜಿಲ್ಯಾಂಡಿನ ದ್ವಿತೀಯ ಕ್ರಿಕೆಟಿಗನೆನಿಸಿದರು. ಬ್ರೆಂಡನ್‌ ಮೆಕಲಮ್‌ ಮೊದಲಿಗ.

ಈ ಮ್ಯಾರಥಾನ್‌ ಇನ್ನಿಂಗ್ಸ್‌ ವೇಳೆ ವಿಲಿಯಮ್ಸನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರೈಸಿದರು. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ಸಹಸ್ರ ರನ್‌ ಪೂರ್ತಿಗೊಳಿಸಿದ ನ್ಯೂಜಿಲ್ಯಾಂಡಿನ 3ನೇ ಆಟಗಾರನೆನಿಸಿದರು.

ವಿಲಿಯಮ್ಸನ್‌-ನಿಕೋಲ್ಸ್‌ 4ನೇ ವಿಕೆಟಿಗೆ 369 ರನ್‌ ಜತೆಯಾಟದ ಮೂಲಕ ಪಾಕ್‌ ಬೌಲರ್‌ಗಳನ್ನು ಸುಸ್ತು ಹೊಡೆಸಿದರು. ಇದು ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ನ್ಯೂಜಿಲ್ಯಾಂಡಿನ 3ನೇ ಅತ್ಯಧಿಕ ಮೊತ್ತದ ಜತೆಯಾಟವಾಗಿದೆ.

ಹೆನ್ರಿ ನಿಕೋಲ್ಸ್‌ 291 ಎಸೆತಗಳಿಂದ 157 ರನ್‌ ಬಾರಿಸಿದರು (18 ಬೌಂಡರಿ, ಒಂದು ಸಿಕ್ಸರ್‌). ಡ್ಯಾರಿಲ್‌ ಮಿಚೆಲ್‌ ಮೊದಲ ಶತಕ ಪೂರೈಸಿದ ಕೂಡಲೇ ವಿಲಿಯಮ್ಸನ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರು. ಮಿಚೆಲ್‌ ಗಳಿಕೆ ಅಜೇಯ 102 ರನ್‌ (112 ಎಸೆತ, 8 ಬೌಂಡರಿ, 2 ಸಿಕ್ಸರ್‌).

Advertisement

ಪಾಕಿಸ್ಥಾನ 64 “ಇತರ ರನ್‌’ ಬಿಟ್ಟುಕೊಟ್ಟಿತು. ಇದು ಇನ್ನಿಂಗ್ಸ್‌ ಒಂದರಲ್ಲಿ ಪಾಕಿಸ್ಥಾನ ನೀಡಿದ ಗರಿಷ್ಠ ಎಕ್ಸ್‌ಟ್ರಾ ರನ್ನುಗಳ ಜಂಟಿ ದಾಖಲೆ.

3ನೇ ದಿನದಾಟದ ಅಂತ್ಯಕ್ಕೆ ಪಾಕಿಸ್ಥಾನ ಒಂದು ವಿಕೆಟಿಗೆ 8 ರನ್‌ ಮಾಡಿದ್ದು, ಇನ್ನೂ 354 ರನ್ನುಗಳ ಹಿನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-297 ಮತ್ತು ಒಂದು ವಿಕೆಟಿಗೆ 8. ನ್ಯೂಜಿಲ್ಯಾಂಡ್‌-6 ವಿಕೆಟಿಗೆ 659 ಡಿಕ್ಲೇರ್‌.

Advertisement

Udayavani is now on Telegram. Click here to join our channel and stay updated with the latest news.

Next