Advertisement

 ಕನಸು ಮಾರಾಟಕ್ಕೆ ಹೊಸ ಸಾಹಸ!

02:22 PM Feb 14, 2021 | Team Udayavani |

ಒಂದೆಡೆ ಸ್ಟಾರ್‌ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆಯಾಗುತ್ತಿದ್ದರೆ, ಮತ್ತೂಂದೆಡೆ ಈ ಗ್ಯಾಪ್‌ನಲ್ಲಿ ಒಂದಷ್ಟು ಹೊಸಬರ ಸಿನಿಮಾಗಳು ಪ್ರೇಕ್ಷಕರ ಮುಂದೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. ಈ ವಾರ ಕೂಡ ಅಂಥದೇ ಬಹುತೇಕ ಹೊಸಬರ “ಕನಸು ಮಾರಾಟಕ್ಕಿದೆ’ ಸಿನಿಮಾ ಬಿಡುಗಡೆಗೆಯಾಗಿ ತೆರೆಗೆ ಬಂದಿದೆ.

Advertisement

ಇನ್ನು “ಕನಸು ಮಾರಾಟಕ್ಕಿದೆ’ ಚಿತ್ರದ ಕಥಾಹಂದರ ಹೀಗಿದೆ. ಆಕೆಯ ಹೆಸರು ಕನಸು. ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಮಾಡಬೇಕೆಂಬ ಆಸೆಯ ಕನಸು ನಾನಾ

ಕಾರಣಗಳಿಂದ ಕೈಗೂಡುವುದೇ ಇಲ್ಲ. ಕೊನೆಗೆ ತನ್ನಂತೆ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಮಾಡಲಾಗದವರಿಗಾಗಿ ತನ್ನ ತಂದೆಯ ಜೊತೆ ಸೇರಿ ಸ್ವತಃ ಕಾಲೇಜ್‌ ಒಂದನ್ನೇ ಶುರು ಮಾಡುವ ಸಾಹಸಕ್ಕೆ ಕೈ ಹಾಕುತ್ತಾಳೆ ಕನಸು. ಎಲ್ಲ ಆಯ್ತು ಇನ್ನೇನು ಕಾಲೇಜ್‌ ಶುರುಮಾಡಬೇಕು ಎನ್ನುವಷ್ಟರಲ್ಲಿ ಅದಕ್ಕೆ ಬೇಕಾದ ತಾಂತ್ರಿಕ ಅನುಮತಿಗೆ ಮತ್ತೆ ಯಾರೋ ಕೊಕ್ಕೆ ಹಾಕುತ್ತಾರೆ. ಕೊನೆಗೆ ತನ್ನ ಕನಸು ನನಸಾಗದೆಂಬ ಭಯದಲ್ಲಿ ಕನಸು ಕುಗ್ಗಿ ಮಾನಸಿಕ ಅಸ್ವತ್ಥಳಾಗುತ್ತಾಳೆ. ಮಗಳ ಕನಸು ನನಸು ಮಾಡುವ ಸಲುವಾಗಿ ಕಾಲೇಜ್‌ ಶುರು ಮಾಡುವ ತಂದೆ, ವಿದ್ಯಾರ್ಥಿಗಳಿಗೆ ನಕಲಿ ಸರ್ಟಿಫಿಕೇಟ್‌ ಕೊಟ್ಟು ಕಾಲೇಜ್‌ ನಡೆಸಿಕೊಂಡು ಹೋಗುತ್ತಿರುತ್ತಾನೆ. ಇದರ ನಡುವೆಯೇ ಕಾಲೇಜ್‌ ಹಾಸ್ಟೆಲ್ ನ‌ಲ್ಲಿ ಒಂದಷ್ಟು ನಿಗೂಢ ಕೊಲೆಗಳಾಗುತ್ತವೆ. ಆ ಕೊಲೆಗಳ ರಹಸ್ಯ ಭೇದಿಸುವುದರೊಳಗೆ, ಕಾಲೇಜ್‌ ಕನಸು ಕಂಡಿದ್ದ ಕ‌ನಸು ಕೂಡ ಕಣ್ಮುಚ್ಚುತ್ತಾಳೆ ಅಲ್ಲಿಗೆ ಸಿನಿಮಾ ಕ್ಲೈಮ್ಯಾಕ್ಸ್‌ಗೆ ಬಂದಿರುತ್ತದೆ.

ಹೊಸಬರ ಸಿನಿಮಾದಲ್ಲಿ ಹೊಸತರದ ಕಥೆಯಿರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ಗೆ ಹೋದರೆ, ಹೊರಬರುವಷ್ಟರಲ್ಲಿ ಆ ನಿರೀಕ್ಷೆ ಹುಸಿಯಾಗಿರುವ ಸಾಧ್ಯತೆಯೇ ಹೆಚ್ಚಾಗಿದೆ. ಯಾವುದೇ ಹೊಸತನವಿಲ್ಲದ ಕಥೆಯೊಂದನ್ನು ಇಟ್ಟುಕೊಂಡು ಅದಕ್ಕೆ ಸಂಬಂಧವೇ ಇರದ ಹತ್ತಾರು ಸಂಗತಿಗಳನ್ನು ಸೇರಿಸಿ ಚಿತ್ರವನ್ನ ತೆರೆಮೇಲೆ ತಂದಿದ್ದಾರೆ ನಿರ್ದೇಶಕರು.

ಸಲೀಸಾಗಿ ಹೇಳಬಹುದಾದ, ಕಥೆಗೆ ಇನ್ನಿಲ್ಲದ ತಿರುವುಗಳನ್ನು ನೀಡಲು ಹೋಗಿರುವುದರಿಂದ, ಕೊನೆಗೆ ಕಥೆಯ ಎಳೆಯೇ ಹಳಿ ತಪ್ಪಿದ್ದಂತೆ ಭಾಸವಾಗುತ್ತದೆ. ‌ಈ ಕಥಾಹಂದರದಲ್ಲಿ ಇನ್ನೂ ಪರಿಣಾಮಕಾರಿ ಯಾಗಿ ಚಿತ್ರವನ್ನು ಕಟ್ಟಿಕೊಡುವ ಎಲ್ಲ ಸಾಧ್ಯತೆಗಳಿದ್ದರೂ, ಚಿತ್ರತಂಡ ಅದೆಲ್ಲವನ್ನು ಸಮರ್ಥವಾಗಿ ಬಳಸಿಕೊಂಡಂತೆ ಕಾಣುವುದಿಲ್ಲ.

Advertisement

ಇನ್ನು ಚಿತ್ರದ ಕಲಾವಿದರ ಅಭಿನಯದ ಬಗ್ಗೆ ಹೇಳುವುದಾದರೆ, ಎರಡು – ಮೂರು ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ, ಉಳಿದ ಬಹುತೇಕರದ್ದು ಒಂದಾ ಅತಿರೇಕದ ಅಭಿನಯ, ಮತ್ತೂಂದು ನೀರಸ ಅಭಿನಯ. ಕೆಲವು ಪಾತ್ರಗಳು ನೊಡುಗರಿಗೆ ಮನರಂಜನೆ ಕೊಡುವ ಬದಲು, ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಹಾಗಾಗಿ ಚಿತ್ರದ ಬಹುತೇಕ ಯಾವ ಪಾತ್ರಗಳೂ ಕೊನೆವರೆಗೂ ಅಷ್ಟಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದೇ ಇಲ್ಲ.

ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಸಂಕಲನ ಕಾರ್ಯ ಕೂಡ ಚೆನ್ನಾಗಿದೆ. ಒಂದೆರಡು ಹಾಡುಗಳು ಚಿತ್ರಕಥೆಗೆ ಅಗತ್ಯವೇ ಇಲ್ಲದಿದ್ದರೂ, ಕಿವಿಗೆ ಸ್ವಲ್ಪ ತಂಪು ನೀಡುತ್ತವೆ. ಒಂದು ಸಿನಿಮಾಕ್ಕೆ ಮುಖ್ಯ ಜೀವಾಳವಾಗಿರುವ ಚಿತ್ರಕಥೆ, ನಿರೂಪಣೆ, ಸಂಭಾಷಣೆ ಕಡೆಗಿಂತ ತಾಂತ್ರಿಕತೆ ಕಡೆಗೇ ಚಿತ್ರತಂಡ ಹೆಚ್ಚು ಗಮನ ಕೊಟ್ಟಂತೆ ಇದೆ.

ಜಿ.ಎಸ್.ಕೆ ಸುಧನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next