Advertisement
ಕಾವ್ಯದ ಮಾನದಂಡಗಳ ಬಗ್ಗೆ ಎಲ್ಲಾ ಚರ್ಚೆ ಮಾಡಿ ಕಾವ್ಯ ಅಂದರೆ ಹೀಗೆ ಇರಬೇಕು ಎಂಬ ಚೌಕಟ್ಟನ್ನು ಕಟ್ಟುವ ಕೆಲಸ ಮಾಡುವುದು ಬೇಡ ಬಿಡಿ. ಭಾವ-ಲಯ-ವೇಗ-ಓಗ ಆದರೂ ಎಳ್ಳಷ್ಟಾದರೂ ಗೊತ್ತಿರಬೇಕು ಅಲ್ವಾ…? ಅದ್ಯಾವುದೂ ಇಲ್ಲದ ಕವಿತೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಓಡಾಡುವ ಭಾವ ರಹಿತ ಬರಹಗಳ ನಡುವೆ ಒಂದಿಷ್ಟು ಎದೆ ಕದಿಯುವ ಕಾವ್ಯಗಳನ್ನು ಓದುವಾಗ ಏನೋ ಸ್ವಲ್ಪ ಓದಿಗೆ ಖುಷಿ ಕೊಡುತ್ತದೆ.
Related Articles
Advertisement
ಇಲ್ಲಿನ ಕಾವ್ಯಗಳಲ್ಲಿ ಕಾಣುವ ರೂಪಕಗಳು ಕಾವ್ಯದ ಗಟ್ಟಿತನವನ್ನು ತಿಳಿಸುತ್ತವೆ.
ಉದಾ :
‘ನಮ್ಮೆದೆಯ ಕೂಗು ನಿಮಗೆ ಕೇಳದಿದ್ದಾಗ
ಸಿಡಿಸಬಲ್ಲೆವು ನಾವು
ನಿಮ್ಮ ಭವ್ಯ ಬಂಗಲೆಯನ್ನು
ಮಹಡಿ ಮಹಲು ಕಟ್ಟಿದ ನಾವು
ನಿಮಗೂ ಕಟ್ಟಬಲ್ಲೆವು ಸುಂದರ ಗೋರಿಯನ್ನು’ ಹೆಣ್ಣಿನ ಸಹನೆಯೊಳಗಿನ ಕಿಡಿ ಸಿಡಿದ ಭಾವವಿದು(ಸಹನೆ-ಸಿಡಿಲು).
ಓದಿ : 75 ಮಿಲಿಯನ್ ಭಾರತೀಯರು ಬಡತನ ರೇಖೆಯಿಂದ ಕೆಳಕ್ಕೆ : ಪ್ಯೂ ವರದಿ
‘ದುರುಗುಟ್ಟುವ ನೋಟದಲ್ಲೇ
ಹುಡುಗಿಯರೆದೆ ಸೆರಗು ಬಿಚ್ಚಿ
ಬೆತ್ತಲೆಯ ಮೈಗೆ ಬಾಯಿ ಹಚ್ಚಿ
ದವಡೆಯ ಹಲ್ಲುಗಳ ಸಂದಿಯಿಂದ ಕಚಾ ಕಚಾ ಕಚ್ಚಿ
ಕವಳದಂತೆ ಜಗಿದು ಉಗಿದು ಬಿಡುತ್ತಾರೆ
ಎಂದೇನೂ ನಾ ದೂರುವುದಿಲ್ಲ;
ನನ್ನೆದೆಯೊಳಗೇ ಬೇರು ಬಿಟ್ಟು
ಹಸಿರಾಗಿ ಚಿಗುರಲು ಒಂದಿಷ್ಟು
ಕಾವು ಕೊಟ್ಟು ಮೆತ್ತನೆಯ ಗಲ್ಲಕ್ಕೆ
ಮೃದುವಾಗಿ ಮುತ್ತಿಟ್ಟು ಮೊಗ್ಗಾಗಿಸಿ
ಹಿಗ್ಗಾಗಿಸಿ ಹೂವಾಗಿಸಿ
ಒಳಗೊಳಗೆ ಖುಷಿಪಡುವ
ನನ್ನ ಹುಡುಗನದು ಯಾವ ದಾಟಿ..?’ (…ಹೀಗೇ?)
ಈ ಸಾಲುಗಳಲ್ಲಿ ಪ್ರೀತಿಯೆಂದರೇ ಹೀಗೆ ಇರಬಹುದೇ ಎಂದು ಕೇಳುವ ಸರಸ್ವತಿಯವರ ಮನದಾಳದಲ್ಲಿ ಸಿಟ್ಟು, ಕೋಪ, ತಾಪ, ದುಃಖ, ದುಮ್ಮಾನಗಳೊಂದಿಗೆ ತನ್ನ ಪಾಲಿಗೆ ಹಿತ ಭಾವನೆಯನ್ನುಣಿಸುತ್ತಿರುವ ಹುಡುಗನ ಬಗ್ಗೆ ಅತ್ಯಂತ ಪ್ರಾಂಜಲ ದನಿ ಎದ್ದು ಕಾಣಿಸುತ್ತದೆ.
ಇನ್ನು,
‘ತಾಳಿ ಕಟ್ಟಿದವ ಪ್ರೀತಿಯ
ಪಿಸು ನುಡಿಗೆ ಮಾರ್ದನಿ ಈಯಲಿಲ್ಲ
ಆಂತರ್ಯದ ಅರ್ಪಣೆಗೆ ಆರ್ದ್ರವಾಗಲಿಲ್ಲ
ಹೂವಿಬೆಸಳಿನ ಮೇಲೆ ಹೆಜ್ಜೆಯೂರಿ
ನಡೆದೇ ಬಿಟ್ಟ ಮುಂದಿನ ಅಂಕಕ್ಕೆ
ಪರದೆ ಕಟ್ಟಲು ಅಮ್ಮ ನೆಟ್ಟ
ಬಳ್ಳಿಗಳ ತುಂಬೆಲ್ಲಾ ಬರೇ ಮೊಗ್ಗುಗಳದೇ ಅಬ್ಬರ
ಮನೆ ತುಂಬಿರುವ ಕರುಳ ಕೂಸುಗಳಿಗೆ
ಹಂಚಿಕೊಟ್ಟಳು ಅಮ್ಮ ತನ್ನ ಒಂದೊಂದು ಕನಸುಗಳನ್ನು’ (ಅಮ್ಮನಿಗೀಗ ಐವತ್ತು)
ವಾವ್ಹ್..ಎಂತಹ ಅದ್ಭುತ ಸಾಲುಗಳಿವು..? ಬೆಳೆಸಿ, ಹರಸಿ, ಕಣ್ಣೊರೆಸುವ ಅಮ್ಮನೆಂಬ ಅಚ್ಚರಿಯ ಬಗೆಗೆ ಹನಿದ ಸಾಲಿನೊಳಗೆ ಸ್ವಚ್ಛ, ಸ್ಪಷ್ಟ ಮಗಳ ಭಾವಧಾರೆ ಇದು. ಅಮ್ಮನಿಗೆ ಪೂರ್ಣ ಅರ್ಪಿತವಿದು.
ಓದಿ : ‘ದೂಸ್ರಿ ಬಾರ್ ಡಬಲ್ ಎಂಜಿನ್ ಕಿ ಸರ್ಕಾರ್’ : ಕಾಂಗ್ರೆಸ್ ಗೆ ಪರೋಕ್ಷವಾಗಿ ಕುಟುಕಿದ ಮೋದಿ
‘ಅಂಗಳದ ತುದಿಯ ಕೆಂಡಸಂಪಿಗೆ ಮರವು
ಮತ್ತೆ ಮತ್ತೆ ಕಡಿದರೂ
ಮತ್ತೆ ಮತ್ತೆ ಚಿಗುರಿ
ಮೊಗ್ಗಾಗಿ ಹೂವರಳಿಸುವಂತೆ
ಕ್ಷಣಕ್ಕೊಮ್ಮೆ ದಿಗಿಲಿನಲೆಯೆಬ್ಬಿಸುವ
ಮನಸಿನಂಗಳಕೆ ತಣ್ಣನೆಯ ಗಾಳಿ ನೀನಾಗಿ ಬಾ’ (ಬಾ ಪ್ರೀತಿಯೇ ಬಾ)
ಅಂತಃಕರಣದ ದೀಪ ಜ್ವಲನದ ಬೆಳಕೆಂದರೇ, ಪ್ರೀತಿ. ಪ್ರೀತಿಯನ್ನು ಬಯಸುವ ಪರಿ ಹೇಳಲಾಗದ, ಹೇಳಿಯೂ ತೀರದ ಶುದ್ಧ ಸಲಿಲದಂತಹ ಕಲ್ಪನೆಯನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಹೀಗೆ.. ಪುಟ ತೆರೆದಾಗಲೆಲ್ಲಾ ಆಸೆ, ನಿರಾಸೆ, ಭಾವ ತಲ್ಲಣ, ಧೈರ್ಯ, ಹೆಣ್ಣೆದೆಯ ಕಿಚ್ಚು, ಭಾವ, ಪ್ರೀತಿ-ಪ್ರೇಮ-ಪ್ರಣಯಗಳು ‘ಕನಸು ಕನ್ನಡಿ’ಯಲ್ಲಿ ಎದೆಯನ್ನು ಕಾಡಿಸುತ್ತವೆ.
ಸರಸ್ವತಿಯವರು ಕಂಡು, ಅನುಭವಿಸಿ, ಅನುಭಾವಿಸಿದ ದರ್ಶನ ‘ಕನಸು ಕನ್ನಡಿ’ಯಲ್ಲಿ ಓದುಗನಿಗೆ ಆಗುತ್ತದೆ. ಸಹಜವಾಗಿ ಒಬ್ಬ ಮಹಿಳೆ ಬರೆದಿರುವ ಈ ಕೃತಿಯಲ್ಲಿ ಸ್ತ್ರೀವಾದಗಳು ಅಲ್ಲಲ್ಲಿ ಕಾಣಿಸಿದರೂ, ಅದು ಸಿಡಿದೇಳುವ ಧೋರಣೆಯಲ್ಲಿ ಕಾಣಿಸುವುದಿಲ್ಲ. ಭಿನ್ನವಾಗಿ, ಸಹನೆಯಿಂದಲೇ ಕಿಚ್ಚಿನ ಜಿಹ್ವೆಯನ್ನು ಹೊರಗೆ ಹಾಕುವ ಪ್ರಯತ್ನ ಮಾಡಿದ್ದಂತೂ ಸ್ಪಷ್ಟವಾಗಿ ಕಾಣಿಸುತ್ತದೆ.
ಒಟ್ಟಿನಲ್ಲಿ, ‘ಕನಸು ಕನ್ನಡಿ’ಯ ಓದು ನನಗೆ ಖುಷಿ ಕೊಟ್ಟಿದೆ. ಮತ್ತೊಮ್ಮೆ ಓದಬೇಕು ಅನ್ನಿಸುವಂತೆ ಮಾಡಿದೆ. ‘ಕನಸು ಕನ್ನಡಿ’ ನಿಮ್ಮೊಳಗನ್ನೂ ಪ್ರತಿ ಬಿಂಬಿಸುತ್ತದೆ.
ಓದಿ. ಓದು ನಿಮ್ಮದಾಗಲಿ.
-ಶ್ರೀರಾಜ್ ವಕ್ವಾಡಿ
ಓದಿ : ನನಗಾಗ 35, ನಾನು ಮಕ್ಕಳನ್ನು ಬಯಸುತ್ತಿದ್ದೆ, ಆತ ಇನ್ನೂ 20ರ ಹರೆಯದಲ್ಲಿದ್ದ : ಪ್ರಿಯಾಂಕ