ಕನಕಗಿರಿ: ಸಮೀಪದ ಗೋಡಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶೇಖರ ನಾಯ್ಕ್ ಸಾಮಾಜಿಕ ಜಾಲತಾಣದಲ್ಲಿ ಪುಲ್ವಾಮಾ ದಾಳಿ ಕುರಿತು ಸಂದೇಶ ರವಾನಿಸಿದ ಕಾರಣ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.
ಈ ಕುರಿತು ಆದೇಶವನ್ನು ಹಿಂಪಡೆದು ಶಿಕ್ಷಕನನ್ನು ಮರಳಿ ಶಾಲೆಗೆ ಕಳುಹಿಸುವಂತೆ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶುಕ್ರವಾರ ಪ್ರತಿಭಟಿಸಿದರು.
ಕೆಲವು ದಿನಗಳಿಂದ ಮುಖ್ಯ ಶಿಕ್ಷಕ ಅಮಾನತುಗೊಂಡಿರುವುದು ದು:ಖದ ವಿಷಯವಾಗಿದೆ. ಶೇಖರ ನಾಯ್ಕ್ ಶಿಕ್ಷಕ ಬೇಕೆ ಬೇಕು ಎಂದು ವಿದ್ಯಾರ್ಥಿಗಳು ಕಂಬನಿ ಮೀಡಿಯುವ ಮೂಲಕ ಶಾಲೆಯ ಆವರಣದ ಮುಂಬಾಗದಲ್ಲಿ ತರಗತಿಗಳಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಇಲಾಖೆ ಅಧಿಕಾರಿಗಳು ಶೀಘ್ರವೇ ಶಿಕ್ಷಕನನ್ನು ಶಾಲೆಗೆ ಕಳುಹಿಸಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಹೊಂದಲು ಸಹಕರಿಸಬೇಕು ಎಂದು ಇಲಾಖೆಗೆ ಮನವಿ ಮಾಡಿಕೊಂಡರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಈರಯ್ಯ ಸ್ವಾಮಿ ಹೀರೆಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದರ ಮೂಲಕ ಗೋಡಿನಾಳ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡುವಲ್ಲಿ ಶೇಖರ್ ನಾಯ್ಕ್ ಶಿಕ್ಷಕರ ಪಾತ್ರ ಬಹುಮುಖ್ಯ. ಅಲ್ಲದೆ ತಿಂಗಳು ಮೊರಾರ್ಜಿ ಪರೀಕ್ಷೆಗಳಿದ್ದು ಮುಖ್ಯ ಶಿಕ್ಷಕ ಶೇಖರ ನಾಯ್ಕ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪರೀಕ್ಷೆಗಳನ್ನು ಬರೆಸುತ್ತಿದ್ದರು. ಮಕ್ಕಳ ಶಿಕ್ಷಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಒತ್ತು ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು ಎಂದು ಹೇಳಿದರು.
ಗ್ರಾಮಸ್ಥರಾದ ದುರುಗಪ್ಪ ಹುಗ್ಗಿ, ಹನುಮೇಶ, ಸತ್ಯಪ್ಪ ಮಾತನಾಡಿ, ಶಿಕ್ಷಣ ಇಲಾಖೆ ಕೂಡಲೇ ಸಮಸ್ಯೆಯನ್ನು ಅರಿತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಸ್ಥಳಕ್ಕೆ ಸಿಆರ್ ಪಿ ಸಂಗಮೇಶ, ಶಿಕ್ಷಣ ಸಂಯೋಜಕ ಆಂಜನೇಯ ಆಗಮಿಸಿ ಮಾತನಾಡಿ, ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿದೆ ಎಂದು ಹೇಳಿದರು.
ಪೋಲಿಸ್ ಪೇದೆ ಕೆ.ಕೃಷ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.