ಕನಕಗಿರಿ: ಸಮೀಪದ ಚಿಕ್ಕಡಂಕನಕಲ್‌ಗ್ರಾಪಂನಲ್ಲಿ ಅಧ್ಯಕ್ಷೆ ಮಾರೆಮ್ಮ ಆದಾಪುರ ಅವರ ಮೈದುನನ ದರ್ಬಾರ್‌ಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನತೆ ಹಾಗೂ ಗ್ರಾಪಂ ಸದಸ್ಯರು ಬೇಸತ್ತು ಹೋಗಿದ್ದಾರೆ.
ಗ್ರಾಪಂ ಅಧ್ಯಕ್ಷೆಯ ಮೈದುನ, ಚಿರ್ಚನಗುಡ್ಡ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹನುಮಂತಪ್ಪ ಆದಾಪುರ ಗ್ರಾಪಂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಶಾಲೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೇ ಹಾಜರಿ ಹಾಕಿ ಗ್ರಾಪಂನಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಗ್ರಾಪಂ ಅಧ್ಯಕ್ಷರು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಇವರೇ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಕೆಲ ಸದಸ್ಯರು ಸಾಮಾನ್ಯ ಸಭೆಯಲ್ಲಿ ಹಲವಾರು ಬಾರಿ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಪಂ ಎದುರು ವಾರದ ಸಂತೆ ನಡೆಯುತ್ತದೆ. ಸಂತೆದಿನ ಜನಸಂದಣಿ ಹೆಚ್ಚಾಗಿರುತ್ತದೆ. ಆದ್ದರಿಂದ ಗ್ರಾಪಂ ಎದುರು ಯಾರೂ ಅಂಗಡಿ ತೆರೆಯದಂತೆ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಆದರೆ ಇತ್ತೀಚೆಗೆ ಗ್ರಾಪಂ ಮುಂದೆಯೇ ಒಂದು ಅಂಗಡಿಯನ್ನು ಇಡಲು ತಮ್ಮ ಸಂಬಂಧಿಕರಿಗೆ ಹನುಮಂತಪ್ಪ ಆದಾಪುರ ಸಹಕರಿಸಿರುವುದು ಗ್ರಾಮಸ್ಥರು ಗಮನಕ್ಕೆ ಬಂದಿದೆ. ಗ್ರಾಪಂ ಎದುರು ಅಂಗಡಿ ಪ್ರಾರಂಭಿಸುವುದಕ್ಕೆ ಗ್ರಾಮಸ್ಥರು ವಿರೋಧಿಸಿದ್ದಾರೆ. ಗ್ರಾಪಂ ಅಭಿವೃದಿœ ಅಧಿಕಾರಿ ಅಂಗಡಿಯನ್ನು ತೆರವುಗೊಳಿಸುವಂತೆ ಹೇಳಿದರೂ ಯಾರ ಮಾತನ್ನು ಕೇಳದೇ ಅಂಗಡಿಯನ್ನು ಪ್ರಾರಂಭಿಸಿದ್ದಾರೆ. ಗ್ರಾಪಂ ಎದುರು ಅಂಗಡಿ ಇಟ್ಟಿರುವುದಕ್ಕೆ ಗ್ರಾಪಂ ಸದಸ್ಯರು ವಿರೋಧಿಸಿದ್ದಾರೆ. ಆದರೆ ಅಧ್ಯಕ್ಷೆ ಮೈದುನ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ.
ಶಿಕ್ಷಣ ಇಲಾಖೆ ಮೌನ: ಚಿರ್ಚನಗುಡ್ಡ ತಾಂಡಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಗ್ರಾಪಂನಲ್ಲಿ ತಮ್ಮ ಅತ್ತಿಗೆ ಪರವಾಗಿ ಅಧಿಕಾರವನ್ನು ನಡೆಸುತ್ತಿದ್ದಾರೆ. ಪ್ರತಿ ತಿಂಗಳು ಶಿಕ್ಷಣ ಇಲಾಖೆಯಿಂದ ವೇತನವನ್ನು ಪಡೆಯುತ್ತಿದ್ದಾರೆ. ಮುಖ್ಯ ಶಿಕ್ಷಕನ ಕಾರ್ಯವೈಖರಿ ಬಗ್ಗೆ ಶಿಕ್ಷಣ ಇಲಾಖೆಗೆ ಗೊತ್ತಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚಿರ್ಚನಗುಡ್ಡ ತಾಂಡಾ ಶಾಲೆ ಮುಖ್ಯ ಶಿಕ್ಷಕ ಹನುಮಂತಪ್ಪ ಆದಾಪುರ ಗ್ರಾಪಂನಲ್ಲಿ ಅಧಿಕಾರ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ವರದಿ ತರಿಸಿಕೊಂಡು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
ಟಿ.ಎಂ.ಸಿದ್ಧಲಿಂಗಮೂರ್ತಿ, ಬಿಇಒ
ಅಂಗಡಿಯನ್ನು ತೆರವುಗೊಳಿಸುವಂತೆ ಈಗಾಗಲೇ ನೋಟಿಸ್ ನೀಡಲಾಗಿದೆ. ಮೂರು ದಿನಗಳೊಳಗಾಗಿ ತೆರವುಗೊಳಿಸದಿದ್ದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ಗ್ರಾಪಂನಿಂದ ತೆರವುಗೊಳಿಸಿದರೆ ಅದರ ವೆಚ್ಚವನ್ನು ಅವರೇ ಭರಿಸಲು ಸೂಚಿಸಿದ್ದೇನೆ.
-ರಾಮ ನಾಯಕ,
ಚಿಕ್ಕಡಂಕನಲ್ ಗ್ರಾಪಂ ಪಿಡಿಒ.
ಗ್ರಾಪಂ ಅಧ್ಯಕ್ಷರ ಮೈದುನ ಹನುಮಂತಪ್ಪ ಆದಾಪುರ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸದವರ ಹೆಸರಲ್ಲಿ ಹಣ ಎತ್ತುತ್ತಿದ್ದಾರೆ. ಅವರ ಅತ್ತಿಗೆ ಜೊತೆಯಲ್ಲಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು, ಗ್ರಾಪಂನ ಹಲವಾರು ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಇದನ್ನು ವಿರೋಧಿಸುವ ಗ್ರಾಪಂ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಪಂ ಸದಸ್ಯರು ಸುಮ್ಮನಿದ್ದಾರೆ.
∙ಹೆಸರು ಹೇಳಲಿಚ್ಛಿಸದ ಗ್ರಾಪಂ ಸದಸ್ಯ.
ಶರಣಪ್ಪ ಗೋಡಿನಾಳ