Advertisement

ಕಾಮಗಾರಿ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿದ ಪಟ್ಟಣ ಪಂಚಾಯತ್: ಕನಕಪ್ಪ ಆರೋಪ

09:14 AM Feb 15, 2024 | Team Udayavani |

ಕನಕಗಿರಿ: ಪಟ್ಟಣ ಪಂಚಾಯಿತಿ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಸರ್ಕಾರದ ಅನುದಾನ ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ ಎಂದು ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ ದೂರಿದರು.

Advertisement

ಇಲ್ಲಿನ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಎನ್.‌ಎ ಹಾಗೂ ಪ್ರಾಧಿಕಾರಗೊಳ್ಳದ ಭೂ ಮಾಲೀಕರ ಜಾಗದಲ್ಲಿಯೂ ಸಿಸಿ ರಸ್ತೆ, ಚರಂಡಿ ಇತರೆ ಕಾಮಗಾರಿ ಮಾಡಿ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಹಳೆಯ ಎಂಜಿನಿಯರ್ ನಿವಾಸದ ಪರಿಸರದಲ್ಲಿನ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ವರ್ಗಾವಣೆ ಮಾಡಲಾಗಿದೆ ಇಂಥ ಅನೇಕ ಅಕ್ರಮಗಳು ಪಂಚಾಯಿತಿಯಲ್ಲಿ ನಡೆದಿವೆ ಎಂದು ದೂರಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೊನಿ ಅಭಿವೃದ್ಧಿ ಹೆಸರಿನಲ್ಲಿಯೂ ಸಾಕಷ್ಟು ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ಕೊಳ್ಳೆ ಹೊಡೆದಿದ್ದಾರೆ, ಮೇಲಾಧಿಕಾರಿಗಳು ಒಂದು ದಿನ ಸಹ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಿದರು. ರಾಜಬೀದಿಯ ಡಾಂಬರೀಕರಣ ಕಾಮಗಾರಿಗೆ 2.2 ಕೋಟಿ ರೂಪಾಯಿ ಮಂಜೂರು ಆಗಿ ಕೆಲಸ ನಡೆಯುತ್ತಿದ್ದು ಅವೈಜ್ಞಾನಿಕವಾಗಿದೆ, ಕ್ರಿಯಾಯೋಜನೆ ಪ್ರಕಾರ ಕೆಲಸ ನಡೆಯುತ್ತಿಲ್ಲ, ತೇರು ಸಂಚರಿಸುವ ಜಾಗದಲ್ಲಿ ಪುಟಪಾತ್ ಏಕೆ ಬೇಕು ಎಂದು ಅವರು ಪ್ರಶ್ನಿಸಿದರು.

ಮೂಲೆ ಸೇರಿದ ವಾಹನಗಳು :
ಪಟ್ಟಣ ಪಂಚಾಯಿತಿಯ ಕೆಲಸಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಧೂಳು ತೆಗೆಯುವ ವಾಹನ, ಶೌಚಾಲಯ ಸ್ವಚ್ಛಗೊಳಿಸುವ ದುಬಾರಿ
ವಾಹನಗಳನ್ನು ಖರೀದಿ ಮಾಡಿದ್ದರೂ ಅವುಗಳೆಲ್ಲವು ಮೂಲೆ ಸೇರಿವೆ, ಸಾರ್ವಜನಿಕರ ಕೆಲಸಗಳಿಗೆ ಬಳಕೆ ಆಗುತ್ತಿಲ್ಲ ಎಂದು ಆಪಾದಿಸಿದರು. ವಾಹನಗಳ ಖರೀದಿಯಲ್ಲಿಯೂ ಅವ್ಯವಹಾರವಾಗಿದೆ ಎಂದು ದೂರಿದರು.

Advertisement

ಇದೇ ಸ್ಥಳದಲ್ಲಿ ಒಂದು ವರ್ಷದ ಹಿಂದೆ ನಡೆದ ಪೈಪ್ ಲೈನ್ ಕಾಮಗಾರಿಯನ್ನು ಡಾಂಬರೀಕರಣದ ಹೆಸರಿನಲ್ಲಿ ಈಗ ಕಿತ್ತಿ ಹಾಕಿ ಸರ್ಕಾರದ 25 ಲಕ್ಷ ರೂಪಾಯಿ ಅನುದಾನವನ್ನು ಹಾಳು ಮಾಡಲಾಗಿದೆ ಎಂದು ತಿಳಿಸಿದರು, ಹಾಳು ಮಾಡಿದ ಹಣವನ್ನು ಅಧಿಕಾರಿಗಳಿಂದ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಪಟ್ಟಣದ ಎಲ್ಲಾ ವಾರ್ಡ್ ಗಳಿಗೂ ಶುದ್ದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ, ಸಾರ್ವಜನಿಕರಿಗೆ ಫಾರ್ಮ್ -3 ಸುಲಭವಾಗಿ ಸಿಗುತ್ತಿಲ್ಲ, ಹಣ ನೀಡಿದರೆ ಮಾತ್ರ ಬೇಗನೆ ಸೌಲಭ್ಯ ನೀಡಲಾಗುತ್ತಿದೆ ಇದರಿಂದ ಬಡವರು ಆಡಳಿತದ ವಿರುದ್ದ ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸಾರ್ವಜನಿಕರ ಸಭೆ ಕರೆಯದೆ ವಾರ್ಷಿಕ ಬಜೆಟ್ ರೂಪಿಸಿದ್ದಾರೆ, ತಮಗೆ ಬೇಕಾದ ಕ್ರಿಯಾಯೋಜನೆ ರೂಪಿಸಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ಆರೋಗ್ಯ ನಿರೀಕ್ಷಕರನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನಾಗಿ ಮಾಡಲಾಗಿದ್ದು ಅಭಿವೃದ್ಧಿ ಕೆಲಸಗಳು ಶೂನ್ಯವಾಗಿವೆ,

ತೆರಿಗೆ ಹಣ ಹೆಚ್ಚಳವಾಗಿದ್ದರೂ ಹಳೆಯ ಗ್ರಾಮ ಪಂಚಾಯಿತಿ ವ್ಯವಸ್ಥೆಯ ರೀತಿಯಲ್ಲಿ ಆಡಳಿತ ನಡೆಯುತ್ತಿದೆ ಎಂದು ತಿಳಿಸಿದರು. ಮುಖ್ಯಾಧಿಕಾರಿ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Victory Rally: ರ‍್ಯಾಲಿ ವೇಳೆ ಸಾಮೂಹಿಕ ಗುಂಡಿನ ದಾಳಿ 1 ಮೃತ್ಯು, 21 ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next