ಬೆಳಗಾವಿ: ಗಡಿ ಭಾಗದ ಅಥಣಿ ಬದಲಾಗಿದೆ. ಅಭಿವೃದ್ಧಿಯ ಗಾಳಿ ಬೀಸದೆ ಹೋದರೂ ರಾಜಕೀಯದ ಬದಲಾವಣೆಯ ಗಾಳಿ ಬಹಳ ಜೋರಾಗಿ ಬೀಸಿದೆ. ಅಷ್ಟೇ ಅಲ್ಲ ಈ ಗಾಳಿ ಕಾಂಗ್ರೆಸ್ ಹಾಗೂ ಬಿಜೆಪಿ ವಲಯದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸಹ ಉಂಟು ಮಾಡಿದೆ.
ರಾಜ್ಯದಲ್ಲಿ ಈ ಬಾರಿ ಅತೀ ಹೆಚ್ಚು ಸುದ್ದಿ ಮಾಡಿರುವ ಕ್ಷೇತ್ರ ಇದು. ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ತಮ್ಮ ದಶಕಗಳ ನಂಟನ್ನು ಬಿಟ್ಟು ಬಂದ ಸವದಿ ಪಕ್ಷ ನಿಷ್ಠೆಯನ್ನೇ ಬದಲಾಯಿಸಿ ಕಾಂಗ್ರೆಸ್ ಮನೆ ಸೇರಿಕೊಂಡರು. ಲಕ್ಷ್ಮಣ ಸವದಿ ಅವರ ಈ ಕಠಿನ ನಿರ್ಧಾರದ ಹಿಂದೆ ಸಾಕಷ್ಟು ಕಾರಣಗಳಿವೆ. ದಶಕಗಳಿಂದ ನಿಷ್ಠೆಯಿಂದಿದ್ದ ತಮಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂಬ ಅಸಮಾಧಾನ ಒಂದು ಕಡೆ ಯಾದರೆ, ಕ್ಷೇತ್ರದಲ್ಲಿ ತಮ್ಮ ರಾಜಕೀಯ ವೈರಿ ರಮೇಶ್ ಜಾರಕಿಹೊಳಿ ನೇರ ಹಸ್ತಕ್ಷೇಪ ಮತ್ತೂಂದು ಪ್ರಮುಖ ಕಾರಣ.
ರಮೇಶ್-ಸವದಿಗೆ ಪ್ರತಿಷ್ಠೆ: ಈಗ ಅಥಣಿ ಕ್ಷೇತ್ರವನ್ನು ಬಹಳ ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವ ಬಿಜೆಪಿ ನಾಯಕರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ವಹಿಸಿದ್ದಾರೆ. ವರಿಷ್ಠರ ಈ ಕ್ರಮ ರಮೇಶ್ ಜಾರಕಿಹೊಳಿ ಅವರ ಶಪಥಕ್ಕೆ ಆನೆ ಬಲ ನೀಡಿದ್ದರೆ, ಈ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ನಾನು ನಿಮ್ಮ ಮನೆ ಮಗ ಎಂಬುದನ್ನು ಸಾಧಿಸಿ ತೋರಿಸಬೇಕಾದ ಮಹತ್ತರ ಸವಾಲು ಲಕ್ಷ್ಮಣ ಸವದಿಗೆ ಎದುರಾಗಿದೆ.
ಹಾಗೆ ನೋಡಿದರೆ ಮಹೇಶ ಕುಮಟಳ್ಳಿ ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿ ಶಾಸಕರಾದಾಗಲೇ ಲಕ್ಷ್ಮಣ ಸವದಿ ಮುಂದಿನ ರಾಜಕೀಯ ಭವಿಷ್ಯ ಡೋಲಾಯ ಮಾನವಾಗಿತ್ತು. ಆದರೆ ಪಕ್ಷ ಸಹ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿತು. ಪರಿ ಷತ್ ಸ್ಥಾನ ವನ್ನೂ ನೀಡಿ ತು. ಆದರೆ ಡಿಸಿಎಂ ಹುದ್ದೆ ಬಹಳ ಕಾಲ ಉಳಿಯಲಿಲ್ಲ. ಈ ನೋವು ಸವದಿ ಅವರಲ್ಲಿ ಸದಾ ಉಳಿದುಕೊಂಡಿತು. ಸವದಿ ಡಿಸಿಎಂ ಸ್ಥಾನ ಕಳೆದುಕೊಂಡಿದ್ದೇ ತಡ ಮಹೇಶ ಕುಮಟಳ್ಳಿ ತಮ್ಮ ರಾಜಕೀಯ ಗುರು ರಮೇಶ್ ಜಾರಕಿಹೊಳಿಗೆ ಇನ್ನಷ್ಟು ಹತ್ತಿರವಾದರು. ಕ್ಷೇತ್ರದ ಬಿಜೆಪಿ ಟಿಕೆಟ್ ತಮಗೇ ಎಂಬುದನ್ನು ಮತ್ತಷ್ಟು ಖಾತ್ರಿ ಮಾಡಿಕೊಂಡರು.
ಒಳಪೆಟ್ಟಿನ ಆತಂಕ ತಪ್ಪಿದ್ದಲ್ಲ: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಅಥಣಿ ಕ್ಷೇತ್ರದ ರಾಜಕೀಯ ಕಣ ಬಹಳ ಗೊಂದಲಮಯವಾಗಿದೆ. ಯಾರು ಯಾರಿಗೆ ಬೆಂಬಲಿ ಸಬೇಕು ಎಂಬ ಸಂದಿಗ್ಧ ಸ್ಥಿತಿ ಸ್ಥಳೀಯ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಲ್ಲಿದೆ. ಇದರ ಜತೆಗೆ ಕಾಂಗ್ರೆಸ್ ಟಿಕೆಟ್ ವಂಚಿತ ನಾಯಕರಲ್ಲಿ ಅಸಮಾಧಾನ ಒಳಗೊಳಗೇ ಕುದಿ ಯುತ್ತಿದೆ. ಕೊನೆಗೆ ಇದು ಯಾರಿಗೆ ವರ ಅಥವಾ ಶಾಪವಾಗುವುದೋ ಗೊತ್ತಿಲ್ಲ. ಒಳಪೆಟ್ಟಿನ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಸೇರುವಾಗ ಅಥಣಿ ಕ್ಷೇತ್ರದ ಜತೆಗೆ ಪಕ್ಕದ ಕನಿಷ್ಠ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ತಂದುಕೊಡುವುದಾಗಿ ವರಿಷ್ಠರಿಗೆ ವಾಗ್ಧಾನ ಮಾಡಿರುವ ಲಕ್ಷ್ಮಣ ಸವದಿ ಈ ಮಾತು ಉಳಿಸಿಕೊಳ್ಳಲು ಅನುಸರಿಸಲಿರುವ ತಂತ್ರಗಾರಿಕೆ ಮುಂದೆ ಜಿಲ್ಲಾ ರಾಜಕೀಯದಲ್ಲಿ ಮಹತ್ವದ ಪರಿಣಾಮ ಬೀರಲಿದೆ.
ಕುಮಟಳ್ಳಿಗೆ ಗುರುವಿನ ಬಲ
ಮಹೇಶ ಕುಮಟಳ್ಳಿಗೆ ಈ ಸರಕಾರದಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂಬ ಧೈರ್ಯವಿದೆ. ಇದರ ಜತೆಗೆ ತಮ್ಮ ಹಿಂದೆ ಗುರು ರಮೇಶ್ ಜಾರಕಿಹೊಳಿ ಶಕ್ತಿ ಇದೆ ಎಂದು ಬಲವಾಗಿ ನಂಬಿದ್ದಾರೆ. ಆಪರೇಶನ್ ಕಮಲಕ್ಕೆ ಒಳಗಾಗುವ ಮುನ್ನ 2018 ರ ಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡಿ ಬಿಜೆಪಿ ಲಕ್ಷ್ಮಣ ಸವದಿ ಅವರನ್ನು ಸೋಲಿಸಿದ್ದರು. ಆಗ ಸಹ ರಮೇಶ ಜಾರಕಿಹೊಳಿ ಈ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಹೆಚ್ಚು. ಪ್ರತೀ ಚುನಾ ವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಲೇ ಬಂದಿದ್ದಾರೆ. ಅನಂತರದ ಸ್ಥಾನದಲ್ಲಿ ಪರಿಶಿಷ್ಟರು, ಕುರುಬರು, ಮಾಳಿ ಮತ್ತು ಮುಸ್ಲಿಂ ಸಮುದಾಯವದರಿದ್ದಾರೆ.
~ ಕೇಶವ ಆದಿ