ಹಾವೇರಿ: ವರಕವಿ ಸರ್ವಜ್ಞನ ನಾಡು ಹಿರೇಕೆರೂರ ಕ್ಷೇತ್ರದಲ್ಲಿ ಚುನಾವಣ ಪ್ರಚಾರ ಕಾವೇರುತ್ತಿದ್ದು, 2019ರ ಉಪಚುನಾವಣೆಯಲ್ಲಿ “ಜೋಡೆತ್ತು”ಗಳಂತೆ ಕ್ಷೇತ್ರದಾದ್ಯಂತ ಸಂಚರಿಸಿದ್ದ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ್ ನಡುವೆಯೇ ಈ ಬಾರಿ ಮತ್ತೆ ಜಿದ್ದಾಜಿದ್ದಿನ ಕಾಳಗ ಏರ್ಪಟ್ಟಿದೆ. ಹಳೆ ಎದುರಾಳಿಗಳೇ ಪಕ್ಷ ಬದಲಿಸಿಕೊಂಡು ಅಖಾಡಕ್ಕೆ ಇಳಿದಿರುವುದು ಚುನಾವಣ ರಣಕಣ ರಂಗೇರುವಂತೆ ಮಾಡಿದೆ.
ಕ್ಷೇತ್ರದಲ್ಲಿ ಕಳೆದ ಚುನಾವಣೆಗಳಂತೆ ಈ ಬಾರಿಯೂ ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಒಂದು ಬಾರಿ ಜೆಡಿಎಸ್‌ಗೆ ಗೆಲುವು ಸಿಕ್ಕಿದ್ದರೂ ಅದು ವ್ಯಕ್ತಿ ವರ್ಚಸ್ಸಿನಿಂದ ಎಂಬುದು ಮತದಾರರ ಅಭಿಪ್ರಾಯ. ಹೀಗಾಗಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. 2019ರ ಉಪಚುನಾವಣೆಯಲ್ಲಿ ಗೆದ್ದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಕೊನೆಯ ಚುನಾವಣೆ ಎಂದು ಹೇಳಿ ಬಿಜೆಪಿಯಿಂದ ಕಣಕ್ಕಿ ಳಿದಿದ್ದಾರೆ. 2019ರ ಉಪಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ಅವರಿಗೆ ಬೆಂಬಲವಾಗಿ ನಿಂತು ಅವರ ಗೆಲುವಿಗೆ ಶ್ರಮಿಸಿದ್ದ ಯು.ಬಿ.ಬಣಕಾರ್ ಕಾಂಗ್ರೆಸ್ ಸೇರಿ ಮತ್ತೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಜೆಡಿಎಸ್‌ನಿಂದ ಜಯಾನಂದ ಜಾವಣ್ಣನವರ ಸ್ಪರ್ಧಿಸಿದ್ದಾರೆ. ಚುನಾವಣ ಕಣದಲ್ಲಿ ಬಿ.ಸಿ.ಪಾಟೀಲ್ ಹಾಗೂ ಯು.ಬಿ. ಬಣಕಾರ್ ಪರಸ್ಪರ ಎದುರಾಳಿಗಳಾಗುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ 4 ಬಾರಿ ಸೆಣಸಾಡಿದ್ದು, ಬಿ.ಸಿ.ಪಾಟೀಲ್ 3 ಬಾರಿ ಮತ್ತು ಯು.ಬಿ.ಬಣಕಾರ್ ಒಮ್ಮೆ ಗೆಲುವಿನ ನಗೆ ಬೀರಿದ್ದಾರೆ. 5ನೇ ಬಾರಿಯ ಸ್ಪರ್ಧೆಗೆ ಅಖಾಡ ಸಿದ್ಧವಾಗಿದೆ. ಹೀಗಾಗಿ ಹಿರೇಕೆರೂರು ಕ್ಷೇತ್ರ ಹೈವೋಲ್ಟೆಜ್ ಕ್ಷೇತ್ರವಾಗಿ ಪರಿಣಮಿಸಿದೆ.
ಜಾತಿ ಲೆಕ್ಕಾಚಾರ ಹೇಗಿದೆ?: ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೇ ಹಿರೇಕೆರೂರು ಕ್ಷೇತ್ರ ಅತೀ ಕಡಿಮೆ ಮತದಾರರನ್ನು ಹೊಂದಿದೆ. ಇಲ್ಲಿ ಸಾದರ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದೆ. ಕುರುಬ, ಮುಸ್ಲಿಂ ಮತ್ತು ದಲಿತ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದು, ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಸಾದರ ಲಿಂಗಾಯತ ಸಮಾಜದವರೇ ಆಗಿದ್ದಾರೆ.
ಪ್ಲಸ್-ಮೈನಸ್ ಏನು?: ಬಿ.ಸಿ.ಪಾಟೀಲ್ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದು, ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಆಡಳಿತಾರೂಢ ಪಕ್ಷದ ಪ್ರಭಾವ ಪ್ಲಸ್ ಆದರೆ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಕೊರತೆ ಮೈನಸ್ ಆಗಬಹುದು ಎಂಬ ಲೆಕ್ಕಾಚಾರ ನಡೆದಿದೆ. ಯು.ಬಿ.ಬಣಕಾರ್ ಅವರಿಗೆ ಹಿಂದಿನ ಸೋಲಿ ಅನುಕಂಪ ಮತ್ತು ಕ್ಷೇತ್ರದ ಜನರ ಜತೆಗಿನ ಒಡನಾಟ ಪ್ಲಸ್ ಆಗಬಹುದು, ಆದರೆ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಮೈನಸ್ ಆಗಬಹುದು ಎನ್ನಲಾಗಿದೆ.
~ ವೀರೇಶ ಮಡ್ಲೂರ