Advertisement

ಕಣ-ಚಿತ್ರಣ: ಸಿಂʻಹಾಸನʼಕ್ಕಾಗಿ ಪ್ರೀತಂಗೌಡ-ಸ್ವರೂಪ್‌ ಕಾದಾಟ

09:15 PM Apr 30, 2023 | Team Udayavani |

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸೊಸೆ, ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರಿಂದ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ ಈ ಕ್ಷೇತ್ರದಲ್ಲೀಗ ಹಾಲಿ ಶಾಸಕ ಪ್ರೀತಂ ಗೌಡ, ಜೆಡಿಎಸ್‌ನಿಂದ ಸ್ವರೂಪ್‌ ಕಣದಲ್ಲಿದ್ದು, ತೀರಾ ಜಿದ್ದಾಜಿದ್ದಿ ಏರ್ಪಟ್ಟಿದೆ.

Advertisement

ಜನತಾಪರಿವಾರದ ಭದ್ರ ನೆಲೆಯಾಗಿರುವ ಹಾಸನ ಕ್ಷೇತ್ರದಲ್ಲಿ 1983ರಿಂದೀಚೆಗೆ ನಡೆದ 9 ಚುನಾವಣೆಗಳಲ್ಲಿ 3 ಬಾರಿ ಮಾತ್ರ ಈ ಕ್ಷೇತ್ರ  ಜೆಡಿಎಸ್‌ನಿಂದ ಕೈ ತಪ್ಪಿದೆ. 1989ರಲ್ಲಿ ಕಾಂಗ್ರೆಸ್‌, 1999 ಮತ್ತು 2018ರಲ್ಲಿ ಬಿಜೆಪಿ ಗೆದ್ದಿದೆ. 6 ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ.

ಕಳೆದ ಬಾರಿ ಬಿಜೆಪಿಯ ಪಾಲಾಗಿರುವ  ಕ್ಷೇತ್ರವನ್ನು ಈ ಬಾರಿ ಮತ್ತೆ ಜೆಡಿಎಸ್‌ ತೆಕ್ಕೆಗೆ ತೆಗೆದುಕೊಳ್ಳಲೇಬೇಕು ಎಂದು  ದಳಪತಿಗಳು  ತೊಡೆತಟ್ಟಿ ಹೋರಾಟಕ್ಕಿಳಿದಿದ್ದಾರೆ. ಈ ಹೋರಾಟ ಈಗ ಪಕ್ಷಕ್ಕಿಂತ ದೇವೇಗೌಡರ ಕುಟುಂಬ ಮತ್ತು ಹಾಲಿ ಬಿಜೆಪಿ ಶಾಸಕ ಪ್ರೀತಂಗೌಡ ನಡುವಿನ  ವ್ಯಕ್ತಿ ಪ್ರತಿಷೆzಯಾಗಿ ಮಾರ್ಪಟ್ಟಿದೆ.

ಭವಾನಿ ರೇವಣ್ಣ ಅವರು ಅಭ್ಯರ್ಥಿಯಾದರೆ ಕ್ಷೇತ್ರದ ಹೊರಗಿನವರು, ಗೌಡರ ಕುಟುಂಬ ರಾಜಕಾರಣದ ಅಸ್ತ್ರ ಬಳಸಲೂ ಸಜ್ಜಾಗಿದ್ದ ಪ್ರೀತಂಗೌಡ ಅವರೆದುರು ಎಚ್‌.ಪಿ.ಸ್ವರೂಪ್‌ ಅವರನ್ನು ಜೆಡಿಎಸ್‌ ಸ್ಪರ್ಧೆಗಿಳಿಸಿದ್ದರಿಂದ ಕ್ಷೇತ್ರದ ಚಿತ್ರಣ ಬದಲಾಗಿದೆ. ಸದ್ಯ ಸ್ವರೂಪ್‌ ಪರವಾಗಿ ಇಡೀ ರೇವಣ್ಣ ಕುಟುಂಬವೇ ನಿಂತಿದ್ದು ಕಣ ತೀರಾ ಕುತೂಹಲ ಸೃಷ್ಟಿಸಿದೆ.

ಕಳೆದ ಮೂರುವರೆ ವರ್ಷಗಳ ಅಭಿವೃದ್ಧಿ ಕಾರ್ಯಗಳ ಮುಂದಿಟ್ಟು ಮತದಾರರ ಮತ ಸೆಳೆಯಲು ಪ್ರೀತಂಗೌಡ ಪ್ರಯತ್ನ ನಡೆಸಿದ್ದರೆ  ಗೌಡರ ಕುಟುಂಬ ಅಧಿಕಾರದಲ್ಲಿದ್ದಾಗ ಹಾಸನ ನಗರಕ್ಕೆ ಕೊಟ್ಟಿರುವ ಅಭಿವೃದ್ಧಿ ಯೋಜನೆಗಳ ಕೊಡುಗೆ ಮುಂದಿಟ್ಟುಕೊಂಡು ಜೆಡಿಎಸ್‌ ಪ್ರಚಾರ ನಡೆಸುತ್ತಿದೆ.

Advertisement

ಜೆಡಿಎಸ್‌ನ ಎಚ್‌.ಪಿ.ಸ್ವರೂಪ್‌, ಬಿಜೆಪಿಯ ಪ್ರೀತಂಗೌಡ, ಕಾಂಗ್ರೆಸ್‌ನ ಬನವಾಸೆ ರಂಗಸ್ವಾಮಿ, ಎಎಪಿಯ ಅಗಿಲೆ ಯೋಗೀಶ್‌ ಸೇರಿ ಒಟ್ಟು 9 ಮಂದಿ ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದಾರೆ. ಆದರೆ ಜೆಡಿಎಸ್‌ – ಬಿಜೆಪಿ ನಡುವೆ ನೇರ ಹಣಾಹಣಿ ಕಾಣಿಸುತ್ತಿದೆ. ಕ್ಷೇತ್ರದಲ್ಲಿ ಒಟ್ಟು  2,22,939 ಮತದಾರರಿದ್ದಾರೆ. ಆ ಪೈಕಿ  ಪುರುಷರು – 1,12,659, ಮಹಿಳೆಯರು – 1.10,280.

ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹಾಗೂ ಬಹು ಸಂಖ್ಯೆಯಲ್ಲಿರುವ ಒಕ್ಕಲಿಗರ ಒಳ ಪಂಗಡಗಳಾದ ದಾಸಗೌಡ ಮತ್ತು ಮುಳ್ಳುಗೌಡ ( ಗಂಗಟಕಾರ ಗೌಡ)ರ ಮತ ಸೆಳೆಯಲು ನಾಲ್ಕು ಪಕ್ಷಗಳ ಅಭ್ಯರ್ಥಿಗಳೂ ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌, ಎಎಪಿ ಅಭ್ಯರ್ಥಿಗಳೆಲ್ಲರೂ ದಾಸಗೌಡ ಪಂಗಡದವರೇ. ಕ್ಷೇತ್ರದಲ್ಲಿ ದಾಸಗೌಡರ 65 ಸಾವಿರ, ಮುಳ್ಳುಗೌಡರ 50 ಸಾವಿರ ಮತಗಳಿವೆ ಎಂಬ ಲೆಕ್ಕಾಚಾರವಿದೆ.  ದಾಸಗೌಡರ ಮತಗಳು ನಾಲ್ವರು ಅಭ್ಯರ್ಥಿಗಳಿಗೂ ಹಂಚಿಕೊಳ್ಳುವರು, ಮುಳ್ಳುಗೌಡರು ಸಾಂಪ್ರದಾಯಿಕವಾಗಿ ಜೆಡಿಎಸ್‌ ಬೆಂಬಲಿಸುವರೆಂಬ  ನಂಬಿಕೆಯಿದೆ. ಈ ಬಾರಿ ಮುಸಲ್ಮಾನರು, ಕ್ರೈಸ್ತರ ಮತಗಳ ಮೇಲೆ ಜೆಡಿಎಸ್‌ ಕಣ್ಣಿಟ್ಟಿದೆ.

ಜಾತಿ ಲೆಕ್ಕಾಚಾರ 

ದಾಸ ಒಕ್ಕಲಿಗರು  –    65,000

ಮುಳ್ಳು ಒಕ್ಕಲಿಗರು –  50,000

ಲಿಂಗಾಯತರು  –      17,000

ಮುಸಲ್ಮಾನರು   –      29000

ಎಸ್‌ಸಿ, ಎಸ್‌ಟಿ –      30000

ಹಿಂದುಳಿದ ವರ್ಗ –    26,000

ಇತರೆ               –      22,000

2018ರ ಫ‌ಲಿತಾಂಶ

ಜೆ. ಪ್ರೀತಂ ಗೌಡ  (ಬಿಜೆಪಿ)

63348   ( ಶೇ.41.02)

ಎಚ್‌.ಎಸ್‌.ಪ್ರಕಾಶ್‌ (ಜೆಡಿಎಸ್‌

50342  (ಶೇ.32.60)

ಎಚ್‌.ಕೆ.ಮಹೇಶ್‌ ( ಕಾಂಗ್ರೆಸ್‌)

38101   ( ಶೇ. 24.67)

~ ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next