ಚೆನ್ನೈ: ಮೊನ್ನೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನ ತಂಡ ಅಫ್ಘಾನಿಸ್ಥಾನದ ವಿರುದ್ಧ ಸೋತು ಹೋಗಿತ್ತು. ಇಂಗ್ಲೆಂಡ್ ಅನಂತರ ಮತ್ತೂಂದು ಪ್ರಬಲ ತಂಡವನ್ನು ಮಣಿಸಿದ ಅಫ^ನ್ನರ ಸಂತಸ ಮೇರೆ ಮೀರಿತ್ತು. ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣಕಾರ ಇರ್ಫಾನ್ ಪಠಾಣ್ ಅಫ್ಘಾನ್ ಆಟಗಾರರೊಂದಿಗೆ ಸೇರಿ ನರ್ತಿಸಿದ್ದರು. ಇದರ ದೃಶ್ಯಾವಳಿ ವೈರಲ್ ಆಗಿತ್ತು. ಇರ್ಫಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲೂ ಇದನ್ನು ಪೋಸ್ಟ್ ಮಾಡಿದ್ದರು.
ಇರ್ಫಾನ್ ಖಾನ್ ಅವರ ಈ ನೃತ್ಯ ಪಾಕಿಸ್ಥಾನಿ ಕ್ರಿಕೆಟಿಗರಿಗೆ ಸಿಟ್ಟು ಬರಿಸಿದೆ. ಬೇರೆ ದೇಶದ ಗೆಲುವಿಗೆ ಒಬ್ಬ ವೀಕ್ಷಕ ವಿವರಣಕಾರ ಹೀಗೆ ನರ್ತಿಸುವುದು ಸರಿಯಲ್ಲ. ಇದರಿಂದ ಇಡೀ ಪಾಕ್ ಅಭಿಮಾನಿಗಳಿಗೆ ಬೇಸರವಾಗಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
“ಭಾರತ ತಂಡ ಆಸ್ಟ್ರೇಲಿಯದಲ್ಲಿ ಪಾಕಿಸ್ಥಾನವನ್ನು ಸೋಲಿಸಿತ್ತು. ಆಗ ಇರ್ಫಾನ್ ಮುಖದಲ್ಲಿ ಈ ರೀತಿಯ ಸಂಭ್ರಮ ಕಂಡಿರಲಿಲ್ಲ. ಅದೇ ಅಫ್ಘಾನಿಸ್ಥಾನ, ಪಾಕಿಸ್ಥಾನವನ್ನು ಸೋಲಿಸಿದಾಗ ಅವರು ವರ್ತಿಸಿದ ರೀತಿ ವಿಚಿತ್ರವಾಗಿದೆ. ಈ ಬಗ್ಗೆ ಕೂಟದ ನೇರಪ್ರಸಾರಕರು ಗಮನಿಸಬೇಕು, ತಟಸ್ಥ ವೀಕ್ಷಕ ವಿವರಣೆಕಾರರು ಹೀಗೆ ಮಾಡುವುದಿಲ್ಲ’ ಎಂದು ಕಮ್ರಾನ್ ಹೇಳಿದ್ದಾರೆ.
ಇರ್ಫಾನ್ ಸಮರ್ಥನೆ
ಆದರೆ ಇರ್ಫಾನ್ ಪಠಾಣ್ ಈ ವಿಚಾರವನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ. ಇನ್‌ಸ್ಟಾದಲ್ಲಿ ಬರೆದು ಕೊಂಡಿರುವ ಅವರು, “ನಾನು ಕೊಟ್ಟ ಮಾತನ್ನು ಉಳಿಸಿ ಕೊಂಡಿದ್ದೇನೆ. ರಶೀದ್ ಖಾನ್, ನಾವು ಮತ್ತೂಮ್ಮೆ ಗೆಲ್ಲುತ್ತೇವೆ ಎಂದಿದ್ದರು. ಆಗ ನಾನು ಮತ್ತೂಮ್ಮೆ ನರ್ತಿಸುತ್ತೇನೆ ಎಂದು ತಿಳಿಸಿದ್ದೆ’ ಎಂದಿದ್ದಾರೆ.
ಬಹುಶಃ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ಥಾನದ ಗೆಲುವಿನ ವೇಳೆ ಇರ್ಫಾನ್ ಮತ್ತು ರಶೀದ್ ನಡುವೆ ಹೀಗೊಂದು ಮಾತುಕತೆ ನಡೆದಿರುವ ಸಂಭವವಿದೆ. ಪಾಕ್ ವಿರುದ್ಧ ಗೆದ್ದ ಬಳಿಕ ತಮ್ಮ ಮಾತನ್ನು ಇರ್ಫಾನ್ ನಡೆಸಿಕೊಟ್ಟಿರಬೇಕು.