ಕಂಪ್ಲಿ : ಕಂಪ್ಲಿ ಮಾರ್ಗವಾಗಿ ಗಂಗಾವತಿ -ದರೋಜಿ ನೂತನ ಬ್ರಾಡ್‌ಗೆಜ್ ರೈಲ್ವೆ ಮಾರ್ಗ ಸಮೀಕ್ಷೆ ಮತ್ತು ಕಾಮಗಾರಿ ಆರಂಭಕ್ಕೆ ಆಗ್ರಹಿಸಿ ಏಪ್ರಿಲ್‌ನಲ್ಲಿ ದೆಹಲಿಗೆ ನಿಯೋಗ ತೆರಳಿ ರೈಲ್ವೆ ಸಚಿವ ಪಿಯೂಸ್ ಗೋಯಲ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾವತಿ ದರೋಜಿ ರೈಲ್ವೆ ಮಾರ್ಗ 35 ಕಿ.ಮೀ ಅಂತರದಲ್ಲಿದೆ. ಈ ನೂತನ ಬ್ರಾಡ್‌ಗೆàಜ್ ಮಾರ್ಗ ನಿರ್ಮಾಣ ಮಾಡುವುದರಿಂದ ಗಂಗಾವತಿ, ಕಂಪ್ಲಿ ದೇವಸಮುದ್ರ, ಮೆಟ್ರಿ, ದೇವಲಾಪುರ ಭಾಗಗಳ ರೈತರಿಗೂ ಸೇರಿದಂತೆ ಕಂಪ್ಲಿ ಸುತ್ತಮುತ್ತಲ ಇರುವ ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಜತೆಗೆ ಈ ಭಾಗದಲ್ಲಿ ಬೆಳೆಯುವ ಸೋನಾ ಮಸೂರಿ ತಳಿ ಭತ್ತವನ್ನು ದೇಶದ ವಿವಿಧ ಭಾಗಗಳಿಗೆ ರವಾನಿಸಲು ಅನುಕೂಲವಾಗುತ್ತದೆ. ಅಲ್ಲದೆ ವಿಶ್ವವಿಖ್ಯಾತ ಹಂಪಿ, ದರೋಜಿ ಕರಡಿ ಧಾಮ ಹಾಗೂ ಕನ್ನಡ ವಿವಿ ಪ್ರವಾಸಿಗರಿಗೆ ಉತ್ತಮ ಮಾರ್ಗವಾಗಲಿದೆ ಎಂದರು.
ರೈಲ್ ಕಮ್ ರೋಡ್ ಬ್ರಿಡ್ಜ್: ಕಂಪ್ಲಿ ಮತ್ತು ಗಂಗಾವತಿ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ತೀರಾ ಕೆಳಮಟ್ಟದಲ್ಲಿರುವುದರ ಜತೆಗೆ ಪ್ರತಿ ವರ್ಷದ ನದಿ ಪ್ರವಾಹದಿಂದ ಬಹುತೇಕ ಶಿಥಿಲವಾಗಿದೆ. ಪ್ರತಿ ಮಳೆಗಾಲದಲ್ಲಿ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಬಿಡುಗಡೆಯಾದಾಗ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನೂತನ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ರಚನೆ ಜತೆಗೆ ನೂತನ ರೈಲ್ ಕಮ್ ರೋಡ್ ಬ್ರಿಡ್ಜ್ ನಿರ್ಮಿಸಲು ಕೇಂದ್ರ ರಾಜ್ಯ ಸರ್ಕಾರಗಳು ಮುಂದಾಗಬೇಕೆಂದು ಆಗ್ರಹಿಸಿದರು.
ಗಂಗಾವತಿ-ಕಂಪ್ಲಿ ರೈಲ್ವೆ ಮಾರ್ಗಕ್ಕಾಗಿ ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್, ಗಂಗಾವತಿ ಶಾಸಕರಾದ ಪರಣ್ಣ ಮನವಳ್ಳಿ, ಕನಕಗಿರಿ ಶಾಸಕ ದಢೇಸೂಗೂರ್ ಬಸವರಾಜ್, ಸಂಡೂರು ಶಾಸಕರಾದ ತುಕಾರಾಂ, ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪ ಹಾಗೂ ಕೊಪ್ಪಳ ಸಂಸದರಾದ ಕಡರಿ ಸಂಗಣ್ಣ ಅವರು ಎರಡು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಏಪ್ರಿಲ್‌ನಲ್ಲಿ ಕ್ರಿಯಾ ಸಮಿತಿ ಜತೆಗೆ ಕಂಪ್ಲಿ ಭಾಗದಲ್ಲಿ ಈಗಾಗಲೇ ರಚನೆ ಮಾಡಿರುವ ರೈಲ್ವೆ ಹೋರಾಟ ಸಮಿತಿ ಪದಾ ಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ, ಅರವಿ ಬಸವನಗೌಡ ಹಾಗೂ ಪದಾಧಿಕಾರಿಗಳೊಂದಿಗೆ ನವದೆಹಲಿಗೆ ತೆರಳಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.