Advertisement

ಕುಮ್ಮಟದುರ್ಗದಲ್ಲಿ ಇತಿಹಾಸ ಸಾರುವ ಸ್ಮಾರಕ, ವೀರಗಲ್ಲು ಶಿಲಾಶಾಸನಗಳು ನಾಪತ್ತೆ

04:17 PM May 02, 2022 | Team Udayavani |

ಗಂಗಾವತಿ :ಇತಿಹಾಸ ಪ್ರಸಿದ್ಧ ಜಬ್ಬಲಗುಡ್ಡದ ಕುಮ್ಮಟ ದುರ್ಗದ ಕೋಟೆ ಪ್ರದೇಶದಲ್ಲಿದ್ದ ಸ್ಮಾರಕಗಳನ್ನು, ವೀರಗಲ್ಲು, ಹಳೆಯ ಕಾಲದ ಮೂರ್ತಿ ಕಲ್ಲು ಹಾಗೂ ಇತಿಹಾಸ ಮಾಹಿತಿಯನ್ನುಳ್ಳ ಶಿಲಾಶಾಸನದ ಕಲ್ಲುಗಳು ದುಷ್ಕರ್ಮಿಗಳು ಕಳ್ಳತನ ಮಾಡಿ ಇಲ್ಲಿದ್ದ ಕೋಟೆಯ ಕೆಲಭಾಗವನ್ನು ಕೆಡವಿದ ಪ್ರಕರಣ ರವಿವಾರ ರಾತ್ರಿ ನಡೆದಿದೆ.

Advertisement

ಇತ್ತೀಚೆಗೆ ಕೊಪ್ಪಳದಲ್ಲಿ ಜರುಗಿದ ಜಿಲ್ಲಾ ಟಾಸ್ಕ್ ಪೋರ್ಸ್ ಕಮಿಟಿಯ ಸಭೆಯ ನಂತರ ಕುಮ್ಮಟದುರ್ಗದ ಸುತ್ತಲಿನ ಕೆಲ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಕೆಲವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪರಿಶೀಲಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸ್ಥಳೀಯರು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದರೆ ಕುಮ್ಮಟದುರ್ಗದ ಪುರಾತನ ಕೋಟೆ ಶಿಲಾಶಾಸನ ಕೆಲ ಮೂರ್ತಿಗಳಿಗೆ ಸ್ಮಾರಕಗಳಿಗೆ ಧಕ್ಕೆಯಾಗುತ್ತದೆ ಇಲ್ಲಿ ಶಾಶ್ವತವಾಗಿ ಕಲ್ಲುಗಣಿಗಾರಿಕೆ ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ವಿಶೇಷವಾಗಿ ಸರ್ವೇ ನಂ.51 ಪ್ರದೇಶದ ಹತ್ತು ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಲೀಸ್ ಪಡೆದ ಕೆಲವರು ಅವಕಾಶ ಕೇಳಿದ್ದರು. ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಮತ್ತು ಪುರಾತತ್ವ ಇಲಾಖೆಯ ಮೈಸೂರು ಹೊಸಪೇಟೆ ಹುಬ್ಬಳ್ಳಿ ಭಾಗದ ಕಚೇರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಳೆದ ವಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಮಾರಕಗಳು ಶಿಲಾಶಾಸನ ಮತ್ತು ಕೆಲ ಮೂರ್ತಿಗಳು ಕೋಟೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮೈಸೂರು ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ಇಲ್ಲಿಯ ಸ್ಮಾರಕಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.  ರವಿವಾರ ರಾತ್ರಿ ಇಲ್ಲಿಯ ಸ್ಮಾರಕ ಮತ್ತು ಶಿಲಾಶಾಸನಗಳು ಕೆಲ ಮೂರ್ತಿಗಳು ನಾಪತ್ತೆಯಾಗಿವೆ. ಕೋಟೆಯ ಕೆಲ ಭಾಗವನ್ನು ಜಖಂಗೊಳಿಸಿ ಕಲ್ಲುಗಳನ್ನು ಕೆಳಗಿಳಿಸಲಾಗಿದೆ .ಇದನ್ನು ವೀಕ್ಷಿಸಲು ಸ್ಥಳೀಯರು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ .

ಇದನ್ನೂ ಓದಿ : ಅಶಾಂತಿ ಸೃಷ್ಟಿಸುತ್ತಿರುವ ಮತಾಂಧರ ವಿರುದ್ಧ ಕ್ರಮಕ್ಕೆ ಒತ್ತಾಯ

ಕುಮ್ಮಟದುರ್ಗದ ಸುತ್ತಲಿನ ಪ್ರದೇಶ ನೂರಾರು ಎಕರೆ ಗುಡ್ಡಗಾಡು ಪ್ರದೇಶ ಹೊಂದಿದ್ದು ಈ ಪ್ರದೇಶದಲ್ಲಿ ಕುಮಾರರಾಮನ ಕಾಲದಲ್ಲಿ ನಿರ್ಮಿಸಿದ ಕೋಟೆ, ಕೊತ್ತಲ, ಶಿಲಾಶಾಸನಗಳು ಕೆಲ ದೇವರ ಮೂರ್ತಿಗಳು ಮತ್ತು ವೀರಗಲ್ಲುಗಳಿವೆ. ಆದ್ದರಿಂದ ಇಲ್ಲಿ ಯಾವುದೇ ಕಲ್ಲು ಗಣಿಗಾರಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಜತೆಗೆ ಕೇಂದ್ರ ಮತ್ತು ರಾಜ್ಯ ಪ್ರಾಚ್ಯವಸ್ತು ಪುರಾತತ್ವ ಇಲಾಖೆಯವರು ಇಲ್ಲಿರುವ ಸ್ಮಾರಕಗಳನ್ನು ಗುರುತಿಸಿ ಇವುಗಳ ಸಂರಕ್ಷಣೆಗೆ ಕ್ರಮ ವಹಿಸುವಂತೆ ಕಳೆದ 2 ದಶಕಗಳಿಂದ ಗಂಡುಗಲಿ ಕುಮಾರರಾಮನ ಅಭಿಮಾನಿಗಳು ಮತ್ತು ಇತಿಹಾಸ ತಜ್ಞರು ಜಿಲ್ಲಾಡಳಿತದ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಕುಮಾರರಾಮನ ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಪರಿವರ್ತಿಸಿ ಅಭಿವೃದ್ಧಿಗೊಳಿಸಲಾಗಿದೆ. ಇವುಗಳ ಮಧ್ಯೆ ಕುಮ್ಮಟ ದುರ್ಗದ ಸುತ್ತಲಿನ ಬೆಟ್ಟ ಗುಡ್ಡಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಚಟುವಟಿಕೆ ನಿರಂತರವಾಗಿದ್ದು ಬೇರೆ ಜಿಲ್ಲೆಯ ಕೆಲವರು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ರಾಜಕೀಯ ಒತ್ತಡ ತಂದು ಜಿಲ್ಲಾಮಟ್ಟದ ಟಾಸ್ಕ್ ಪೋರ್ಸ್ ಕಮಿಟಿಯಲ್ಲಿ ಒತ್ತಡ ಹಾಕುತ್ತಿದ್ದಾರೆ.

ಮಧ್ಯೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕುಮ್ಮಟದುರ್ಗದಲ್ಲಿರುವ ಸ್ಮಾರಕಗಳು ಕೋಟೆ ಕೊತ್ತಲು ಶಿಲಾಶಾಸನ ವೀರಗಲ್ಲುಗಳ ಬಗ್ಗೆ ರಾಜ್ಯ ಪುರಾತತ್ವ ಇಲಾಖೆ ಮತ್ತು ಕೇಂದ್ರ ಪ್ರಾಚ್ಯವಸ್ತು ಪುರಾತತ್ವ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲ ಎಂಬ ಮಾತು ಕೇಳಿಬರುತ್ತಿದ್ದು ಇತಿಹಾಸ ತಜ್ಞರು ಮತ್ತು ವಿದ್ವಾಂಸರು ಈ ಪ್ರದೇಶದ ಬಗ್ಗೆ ವಿಶೇಷವಾಗಿ ಅಧ್ಯಯನ ನಡೆಸಿ ಕುಮ್ಮಟದುರ್ಗದಲ್ಲಿ ಇರುವಂತಹ ಸ್ಮಾರಕಗಳು ಕೋಟೆ ಕೊತ್ತಲುಗಳನ್ನು ಸಂರಕ್ಷಣೆ ಮಾಡುವಂತೆ ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಅಭಿಮಾನಿ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ವೆಂಕಟೇಶ್ ಇಳಿಗೇರ್ ಮನವಿ ಮಾಡಿದ್ದಾರೆ .

Advertisement

– ಕೆ. ನಿಂಗಜ್ಜ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next