Advertisement
ಪ್ರತೀ ಕಂಬಳ ಋತುವಿನ ಅಂತ್ಯದಲ್ಲಿ ಪ್ರತೀ ವಿಭಾಗದಲ್ಲಿ ಅತೀ ಹೆಚ್ಚು ಪದಕ ಪಡೆದ ಕೋಣಗಳಿಗೆ ಸರಣಿ ಶ್ರೇಷ್ಠ ಅಥವಾ ಚಾಂಪಿಯನ್ ಪ್ರಶಸ್ತಿ ನೀಡಲಾಗುತ್ತದೆ. ಈ ಋತುವಿನ 15ನೇ ಕಂಬಳಕ್ಕೆ ಸಿದ್ಧತೆ ಮುಗಿದಿದ್ದು, ಪ್ರಶಸ್ತಿಯ ಲೆಕ್ಕಾಚಾರ ನಡೆದಿದೆ.
ಜಿಲ್ಲಾ ಕಂಬಳ ಸಮಿತಿಯಡಿ ಬರುವ ಕಂಬಳಗಳಲ್ಲಿ ಫೈನಲ್ ತಲುಪಿದ ಕೋಣಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಥಮ ಸ್ಥಾನಕ್ಕೆ 5 ಅಂಕ, ದ್ವಿತೀಯಕ್ಕೆ 3 ಅಂಕ ನೀಡಲಾಗುತ್ತದೆ. ಎಲ್ಲ ಕಂಬಳ ಮುಗಿದ ಬಳಿಕ ಅಂಕಗಳ ಆಧಾರದಲ್ಲಿ ಚಾಂಪಿಯನ್ ನಿರ್ಧರಿಸಲಾಗುತ್ತದೆ. ಸುಮಾರು 25 ವರ್ಷ ಗಳಿಂದ ಸರಣಿ ಶ್ರೇಷ್ಠ ಪರಂಪರೆ ಇದ್ದರೂ 2010ರ ಬಳಿಕ ಹಗ್ಗ ಹಿರಿಯ ವಿಭಾಗದಲ್ಲಿ ಮೇಲುಗೈ ಸಾಧಿಸಿರುವುದು ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟರ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟರ ಕೋಣಗಳು.
Related Articles
ನೇಗಿಲು ಹಿರಿಯ ಬಿಟ್ಟು ಉಳಿದೆಲ್ಲ ವಿಭಾಗಗಳಲ್ಲಿ ಈಗಾಗಲೇ ಪ್ರಶಸ್ತಿ ಬಹುತೇಕ ನಿರ್ಧಾರವಾಗಿದೆ. ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳು 5 ಪ್ರಥಮ ಮತ್ತು 4 ದ್ವಿತೀಯ ಪ್ರಶಸ್ತಿಗಳ ಸಹಿತ 37 ಅಂಕದೊಂದಿಗೆ ಅಗ್ರ ಸ್ಥಾನದಲ್ಲಿವೆ. ಕಳೆದ ಬಾರಿಯ ಚಾಂಪಿಯನ್ ಬೋಳದಗುತ್ತು ಸತೀಶ್ ಶೆಟ್ಟಿಯವರ ಕೋಣಗಳು 5 ಪ್ರಥಮ ಮತ್ತು 3 ದ್ವಿತೀಯ ಪ್ರಶಸ್ತಿಯೊಂದಿಗೆ 34 ಅಂಕ ಗಳಿಸಿದೆ. ಇವರ ಮಧ್ಯೆ ಕೇವಲ 3 ಅಂಕಗಳ ವ್ಯತ್ಯಾಸವಿದೆ.
Advertisement
ಕುತೂಹಲವೆಂದರೆ ಇರುವೈಲು ಪಾಣಿಲ ಕೋಣಗಳನ್ನು ಓಡಿಸುವವರು ಮಿಜಾರು ಶ್ರೀನಿವಾಸ ಗೌಡರಾದರೆ, ಬೋಳದ ಗುತ್ತುವಿನ ಓಟಗಾರ ಹಕ್ಕೇರಿ ಸುರೇಶ್ ಶೆಟ್ಟಿ.
ಈ ಋತುವಿನ ಸಾಧಕರುನೇಗಿಲು ಹಿರಿಯ ವಿಭಾಗ ಹೊರತುಪಡಿಸಿ ಉಳಿದದ್ದರ ಪ್ರಶಸ್ತಿ ನಿರ್ಧಾರವಾಗಿದೆ. ಹಗ್ಗ ಹಿರಿಯದಲ್ಲಿ ಪದವು ಕಾನಡ್ಕದ ಕೋಣಗಳು, ಕಿರಿಯ ವಿಭಾಗದಲ್ಲಿ 14 ರಲ್ಲಿ 13 ಪ್ರಥಮ, 1 ದ್ವಿತೀಯ ಪಡೆದ ಮಿಜಾರು ಶಕ್ತಿ ಪ್ರಸಾದರ ಕೋಣಗಳು. ನೇಗಿಲು ಕಿರಿಯದಲ್ಲಿ ನ್ಯೂ ಪಡಿವಾಲ್ಸ್ ಕೋಣಗಳು, ಅಡ್ಡ ಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು, ಕನೆ ಹಲಗೆ ವಿಭಾಗದಲ್ಲಿ ಬೇಲಾಡಿ ಬಾವದ ಕೋಣಗಳು ಪ್ರಶಸ್ತಿ ಪಡೆಯಲಿವೆ. ಇರುವೈಲು – ಬೋಳದ
ಗುತ್ತು ಪ್ರತಿಷ್ಠೆಯ ಕಣ
ಇತ್ತೀಚೆಗೆ ಅತೀ ಜನಪ್ರಿಯತೆ ಪಡೆದಿ ರುವುದು ಬೋಳ ಮತ್ತು ಇರುವೈಲು ಕೋಣಗಳ ನೇಗಿಲು ಹಿರಿಯ ಸ್ಪರ್ಧೆ. ಕಳೆದೆರಡು ವರ್ಷಗಳಲ್ಲಂತೂ ಇವೇ ಫೈನಲ್ ತಲುಪುತ್ತಿದ್ದವು. ಈ ವರ್ಷವೂ ಇದೇ ಸ್ಥಿತಿಯಿದೆ. ಬೋಳದಗುತ್ತುವಿನ “ಕಾಲ’ ಮತ್ತು “ಧೋನಿ’ ಹಾಗೂ ಇರುವೈಲು ಪಾಣಿಲದ “ತಾಟೆ’ ಮತ್ತು “ಹೆರ್ಮುಂಡೆ’ ಜೋಡಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿವೆ. ವಿವಾದವಿಲ್ಲದೆ ಮುಗಿಯುತ್ತಿದೆ ಕಂಬಳ
ಮಂಗಳೂರು: ಕಾನೂನು ಸಮರಗಳ ಕಿರಿಕಿರಿ ಇಲ್ಲದೆ ಕಂಬಳ ಕ್ರೀಡೆ ಸಾಗಿಬಂದಿರುವ ಸಂತೃಪ್ತಿ ಕಂಬಳ ಪ್ರಿಯರಲ್ಲಿ ಮೂಡಿದೆ. ನ.30ರಂದು ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ಕಂಬಳದ ಮೂಲಕ ಈ ಋತು ಆರಂಭವಾಗಿತ್ತು. ನಿಗದಿಯಾಗಿದ್ದ ಕಂಬಳಗಳ ಪೈಕಿ ಕಟಪಾಡಿ, ತಲಪಾಡಿ, ತಿರುವೈಲು ಕಂಬಳಗಳು ನಡೆದಿಲ್ಲ.
ಈ ಋತುವಿನಲ್ಲಿ ಅತಿ ಹೆಚ್ಚು ಜತೆ ಕೋಣಗಳು ಭಾಗವಹಿಸಿದ ದಾಖಲೆಯನ್ನು ಬಾರಾಡಿ ಕಂಬಳ ಹೊಂದಿದೆ. ಅಲ್ಲಿ 197 ಜತೆ ಕೋಣಗಳು ಭಾಗವಹಿಸಿದ್ದವು. ಮೂಡುಬಿದಿರೆಯಲ್ಲಿ 167 ಜತೆ ಕೋಣಗಳು ಪಾಲ್ಗೊಂಡಿದ್ದವು. ಪೈವಳಿಕೆಯ 95 ಜತೆ ಕೋಣಗಳು ಈ ಬಾರಿಯ ಕಂಬಳದಲ್ಲಿ ಕಡಿಮೆ ದಾಖಲೆ. ಆದರೆ ಪೈವಳಿಕೆ ದೂರದ ಕಾಸರಗೋಡಿನಲ್ಲಿರುವುದರಿಂದ ಇದು ಉತ್ತಮ ಸಾಧನೆ ಎನ್ನುತ್ತಾರೆ ಸಮಿತಿಯವರು. -ಕೀರ್ತನ್ ಶೆಟ್ಟಿ ಬೋಳ