Advertisement

ಕಂಬಳಕ್ಕೆ ಯುವ ಸಮುದಾಯದ ಆಸಕ್ತಿ ಅಗತ್ಯ

01:59 PM Dec 03, 2017 | Team Udayavani |

ಪಡುಪಣಂಬೂರು: ಕರಾವಳಿ ಜಿಲ್ಲೆಯ ಜಾನಪದ ಮತ್ತು ಸಂಸ್ಕೃತಿಯ ಪ್ರತೀಕವಾದ ಕಂಬಳ ಕ್ರೀಡೆಗೆ ಯುವ ಸಮುದಾಯವು ಆಸಕ್ತಿ ವಹಿಸಿರುವುದರಿಂದ ಪರಂಪರೆಯ ಕ್ರೀಡೆಯು ಭವಿಷ್ಯದಲ್ಲಿಯೂ ಮುಂದುವರಿಯುವಲ್ಲಿ ಸಂಶಯವೇ ಇಲ್ಲ. ದೂರದ ಮುಂಬಯಿ ಹಾಗೂ ವಿದೇಶದಲ್ಲಿರುವವರೂ ಸಹ ಕಂಬಳದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ ಎಂದು ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯಕ್‌ ಹೇಳಿದರು. ಪಡುಪಣಂಬೂರು ಗ್ರಾಮದ ಮೂಲ್ಕಿ ಅರಮನೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ಅರಸು ಕಂಬಳದ ಕರೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಶ್ರಮದಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಸಮಿತಿಯ ಕಾರ್ಯಾಧ್ಯಕ್ಷ ವಿನೋದ್‌ ಎಸ್‌. ಸಾಲ್ಯಾನ್‌ ಬೆಳ್ಳಾಯರು ಮಾತನಾಡಿ, ಕಳೆದ ವರ್ಷ ಕಂಬಳದ ಬದಲಿಗೆ ಸ್ಥಳೀಯರ ಸಹಕಾರದಲ್ಲಿ ಕೆಸರುಗದ್ದೆ ಕ್ರೀಡೋತ್ಸವ ನಡೆಸಲಾಗಿತ್ತು. ಈ ಬಾರಿ ಕಂಬಳದ ಬಗ್ಗೆ ಯಾವುದೇ ಅಡ್ಡಿ ಇಲ್ಲದಿರುವುದರಿಂದ ಎಲ್ಲಾ ರೀತಿಯಲ್ಲೂ ವ್ಯವಸ್ಥೆ ಮಾಡಲಾಗಿದೆ ಕಳೆದ ಕೆಲವು ದಿನಗಳಿಂದ ಸ್ಥಳೀಯರ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶ್ರಮದಾನ ಮೆಚ್ಚುವಂತದ್ದು ಎಂದರು. ತೋಕೂರು ತಪೋವನದ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡರು.

ಮೂಲ್ಕಿ ಅರಮನೆಯ ಗೌತಮ್‌ ಜೈನ್‌, ಕಂಬಳ ಸಮಿತಿಯ ಸದಸ್ಯ ವಾಸುದೇವ ಶೆಣೈ, ಪಡುಪಣಂಬೂರು ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್‌ ಆಚಾರ್ಯ, ಐಟಿಐನ ಪ್ರಮೋದ್‌ಕುಮಾರ್‌ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು. ತೋಕೂರು ಐಟಿಐ ವಿದ್ಯಾರ್ಥಿಗಳಿಂದ ಮೂಲ್ಕಿ ಸೀಮೆಯ ಅರಸು ಕಂಬಳದ ಕರೆಯಲ್ಲಿ ಶ್ರಮದಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next