Advertisement

ಈ ಋತುವಿನ ಕಂಬಳ ವೇಳಾಪಟ್ಟಿ ನಿಗದಿ

04:40 AM Oct 09, 2019 | mahesh |

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನ ಕಂಬಳ ಕ್ರೀಡೆಗೆ ತಯಾರಿ ಪ್ರಾರಂಭವಾಗಿದೆ. ಈ ಬಾರಿ ಕಾನೂನಿನ ತೊಡಕು ಎದುರಾಗದೆ ಸುಸೂತ್ರವಾಗಿ ಆಯೋಜನೆಯಾಗುವ ಸಾಧ್ಯತೆಯಿದ್ದು, ಇದು ಕಂಬಳ ಆಯೋಜಕರು ಮತ್ತು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

Advertisement

ಅ.6ರಂದು ಮೂಡುಬಿದಿರೆಯಲ್ಲಿ ಜರಗಿದ್ದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಕಂಬಳದ ವೇಳಾಪಟ್ಟಿ ಸಿದ್ಧಗೊಂಡಿದ್ದು, ನ.23ಕ್ಕೆ ಈ ಋತುವಿನ ಮೊದಲ ಕಂಬಳ
ಆರಂಭವಾಗಲಿದೆ. ಒಟ್ಟು 20 ಕಂಬಳಗಳು ನಡೆಯಲಿವೆ. ಒಂದೆರಡರ ದಿನಾಂಕ ಬದಲಾವಣೆ ಆಗುವ ಸಾಧ್ಯತೆಯಿದ್ದು, ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಮೂಲಗಳು ತಿಳಿಸಿವೆ.

2014ರಿಂದಲೂ ಕಾನೂನು ಸಮರದಡಿಯಲ್ಲೇ ನಡೆಯುತ್ತಾ ಬಂದಿದ್ದ ಕಂಬಳವು 2016-17ನೇ ಸಾಲಿನಲ್ಲಿ ಸ್ಥಗಿತಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಬೃಹತ್‌ ಹೋರಾಟ ನಡೆದಿತ್ತು. ಬಳಿಕ ರಾಷ್ಟ್ರಪತಿಯವರ ಅಧ್ಯಾದೇಶ ಮತ್ತು ಮಸೂದೆ ತಿದ್ದುಪಡಿಯ ಮೂಲಕ 2017-18ನೇ ಸಾಲಿನಿಂದ ಕಂಬಳಗಳು ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಡೆಯುತ್ತಾ ಬಂದಿವೆ.

ಮುಂದುವರಿದ ಕಾನೂನು ಸಮರ
ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿ ಕಾನೂನು ಆಗಿ ಜಾರಿಗೊಂಡಿದ್ದರೂ ಕಂಬಳದ ವಿರುದ್ಧ ಕಾನೂನು ಸಮರ
ಮುಂದುವರಿದಿದೆ. ಇದರಿಂದಾಗಿ ಕಂಬಳ ಕ್ರೀಡೆ ಮೇಲೆ ಇರುವ ಆತಂಕ ಇನ್ನೂ ಪೂರ್ಣವಾಗಿ ನಿವಾರಣೆಯಾಗಿಲ್ಲ.

ಕಂಬಳಕ್ಕೆ ತಡೆ ಕೋರಿ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಸಂವಿಧಾನ ಪೀಠದಲ್ಲಿ ವಿಚಾರಣೆಗೆ ಬಾಕಿಯಿದೆ. 1960ರ ಪ್ರಾಣಿಹಿಂಸೆ ತಡೆ ಕಾಯ್ದೆ ಪ್ರಾಣಿಗಳಿಗೆ ಅನಾವಶ್ಯಕ ಹಿಂಸೆ, ತೊಂದರೆಯಿಂದ ರಕ್ಷಣೆ ನೀಡುತ್ತಿದ್ದು, ಕರ್ನಾಟಕ ಸರಕಾರದ ಹೊಸ ಕಾಯ್ದೆ ಇದಕ್ಕೆ ವಿರುದ್ಧವಾಗಿದೆ. ಹೊಸ ಕಾಯ್ದೆ ಸಂವಿಧಾನದ ಪರಿಚ್ಛೇದ 51ಎ (ಜಿ)ಯ ಉಲ್ಲಂಘನೆಯಾಗಿದೆ ಎಂದು ಪೆಟಾ ಹೊಸದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜಲ್ಲಿಕಟ್ಟು ಜತೆ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

Advertisement

ಪೆಟಾ ಆರೋಪಗಳ ಹಿನ್ನೆಲೆಯಲ್ಲಿ ಬೆತ್ತ ಹಿಡಿಯದೆ ಕೋಣಗಳನ್ನು ಓಡಿಸುವ ಪ್ರಯೋಗವೊಂದು ಹಿಂದಿನ ಋತುವಿನಲ್ಲಿ ಮಾಡಲಾಗಿದೆ. ಮೂಡುಬಿದಿರೆ, ಕಕ್ಯಪದವು ಮತ್ತು ಪೈವಳಿಕೆ ಕಂಬಳಗಳಲ್ಲಿ ಬೆತ್ತ ಬಳಕೆ ಮಾಡಿರಲಿಲ್ಲ.

ಈ ಋತುವಿನ ಕಂಬಳ ವೇಳಾಪಟ್ಟಿಯನ್ನು ಬಹುತೇಕ ಸಿದ್ಧಪಡಿಸಲಾಗಿದ್ದು, ಅಂತಿಮಗೊಳಿಸಿ ಸದ್ಯದಲ್ಲೇ ಪ್ರಕಟಿಸಲಾಗುವುದು. ಕಂಬಳ ಅಡೆತಡೆಯಿಲ್ಲದೆ ಮಂದುವರಿಯಲಿದೆ.
– ಪಿ.ಆರ್‌. ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next