ಬೆಂಗಳೂರು: ಕಮಲೇಶ್ ಚಂದ್ರ ಆಯೋಗದ ವರದಿಯನ್ನು ಸಂಪೂರ್ಣ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಪದಾಧಿಕಾರಿಗಳು ನಗರದ ಪುರಭವನದ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಸಾವಿರಕ್ಕೂ ಹೆಚ್ಚು ಅಂಚೆ ನೌಕರರು ಭಾಗವಹಿಸಿ, “ನೌಕರರನ್ನು ಸಮಾನವಾಗಿ ನೋಡಿ, ದೌರ್ಜನ್ಯ ನಿಲ್ಲಿಸಿ, ಸಾಮಾಜಿಕ ನ್ಯಾಯ ಕೊಡಿ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಂಘದ ಕರ್ನಾಟಕ ವಲಯ ಅಧ್ಯಕ್ಷ ಕೆ.ಪ್ರಹ್ಲಾದ್‌ರಾವ್ ಮಾತನಾಡಿ, ಕಮ ಲೇಶ್ ಚಂದ್ರ ವರದಿಯನ್ನು ಎರಡು ವರ್ಷ ಕಳೆದರೂ ಅನುಮೋದಿಸದೆ ಮಲತಾಯಿ ಧೋರಣೆ ತಾಳಲಾಗಿದೆ.
ಈಗಾಗಲೇ 14,500 ರೂ.ಇದ್ದ ಸಂಬಳ ವನ್ನು 12,000ಕ್ಕೆ ಇಳಿಸಲಾಗಿದೆ. ಇನ್ನು ಐದು ಗಂಟೆ ಕೆಲಸಕ್ಕೆ ನೇಮಿಸಿಕೊಂಡು ಎಂಟು ಗಂಟೆಗಿಂತಲೂ ಹೆಚ್ಚುವರಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ. ಹೆಚ್ಚುವರಿ ಕೆಲಸಕ್ಕೆ ಪ್ರತಿಫಲ ಸಿಗುತ್ತಿಲ್ಲ. ಇಲಾಖೆಯ ಆದಾಯದ ಶೇ.75ರಷ್ಟು ಪಾಲು ಗ್ರಾಮೀಣ ನೌಕರರ ದುಡಿತದಿಂದ ಬರುತ್ತಿದ್ದರೂ ತಾರತಮ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಗ್ರಾಮೀಣ ಅಂಚೆ ಸೇವಕರ ಹಿತ ಕಾಪಾಡಲು ಕಮಲೇಶ್ ಚಂದ್ರ ಆಯೋಗದ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಶೀಘ್ರವೇ ಜಾರಿಗೊಳಿಸಬೇಕು. ಈ ವರದಿ ಅನ್ವಯ ದೀರ್ಘಾವಧಿ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಹೆಚ್ಚುವರಿ ವೇತನ ಭತ್ಯೆ ಭರಿಸಬೇಕು. ಗ್ರಾಚ್ಯುಯಿಟಿ ಹಣವನ್ನು 5 ಲಕ್ಷಕ್ಕೆ ಏರಿಸಬೇಕು. ಜಿಡಿಎಸ್ ನೌಕರ ರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಲಯ ರಾಜ್ಯ ಕಾರ್ಯದರ್ಶಿ ಕೆ.ಎಸ್.ರುದ್ರೇಶ್ ಮಾತನಾಡಿ, ಅಂಚೆ ಇಲಾಖೆಯಲ್ಲಿ ಯಾವುದೇ ಸಾಮಾಜಿಕ ಭದ್ರತೆ ಇಲ್ಲ. ಗ್ರಾಮೀಣ ನೌಕರರನ್ನು ಜೀತ ಪದ್ಧತಿ ಗಿಂತ ಕೆಟ್ಟದಾಗಿ ದುಡಿಸಿಕೊಳ್ಳುತ್ತಿದ್ದಾರೆ. ಕೇಂದ್ರದಲ್ಲಿ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಗ್ರಾಮೀಣ ಅಂಚೆ ನೌಕರರ ಬಗ್ಗೆ ನಿರ್ಲಕ್ಷ ಧೋರಣೆ ತಾಳಿವೆ. ದೇಶದಲ್ಲಿ 2 ಲಕ್ಷ 63 ಸಾವಿರ ನೌಕರರಿದ್ದು, ಯಾವುದೇ ವೈದ್ಯಕೀಯ ಸವಲತ್ತುಗಳನ್ನು ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.