ಚೆನ್ನೈ : ತಾನಿನ್ನೂ ರಾಜಕೀಯ ಪಕ್ಷ ಆರಂಭಿಸಿಲ್ಲದಿರುವ ಕಾರಣ ತಮಿಳು ಸೂಪರ್ ಸ್ಟಾರ್ ಕಮಲ ಹಾಸನ್ ಅವರು ಅಭಿಮಾನಿಗಳಿಂದ ಬಂದ ವಂತಿಗೆಯನ್ನು ಮರಳಿಸಲು ಆರಂಭಿಸಿದ್ದಾರೆ.
ಅಭಿಮಾನಿಗಳು ಕಳುಹಿಸಿರುವ ವಂತಿಗೆ ಹಣವನ್ನು ಮರಳಿಸಲು ತಾನು ನಿರ್ಧರಿಸಿರುವುದಾಗಿ ಕಮಲ ಹಾಸನ್ ಅವರು ತನ್ನ ವಾರದ ಅಂಕಣದಲ್ಲಿ ಹೇಳಿದ್ದಾರೆ.
“ಯಾವುದೇ ಮೂಲ ಸೌಕರ್ಯವಿಲ್ಲದೆ ನಾನು ಅಭಿಮಾನಿಗಳ ವಂತಿಗೆ ಹಣವನ್ನು ನನ್ನಲ್ಲಿ ಇರಿಸಿಕೊಳ್ಳುವುದು ಕಾನೂನು ಪ್ರಕಾರ ಸರಿ ಅಲ್ಲ’ ಎಂದು ಕಮಲ ಹಾಸನ್ ಹೇಳಿದ್ದಾರೆ.
57ರ ಹರೆಯದ ಕಮಲ ಹಾಸನ್ ಅವರು ಕೆಲ ಸಮಯದ ಹಿಂದೆ ತನ್ನ ಅಭಿಮಾನಿ ಸಂಘಗಳು ದೀನರಿಗೆ ನೆರವಾಗಲು ಸುಮಾರು 30 ಕೋಟಿ ರೂ. ಮೊತ್ತವನ್ನು ಸಂಗ್ರಹಿಸಿ ಕೊಟ್ಟಿದ್ದರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದರು.
ಅಭಿಮಾನಿಗಳ ವಂತಿಗೆ ಹಣವನ್ನು ನಾನೀಗ ಮರಳಿಸುತ್ತಿರುವೆನಾದರೂ ರಾಜಕಾರಣವನ್ನು ಸೇರುವ ತನ್ನ ನಿರ್ಧಾರದಲ್ಲಿ ಯಾವುದೇ ದ್ವಂದ್ವ ಇಲ್ಲ ಎಂದು ಕಮಲ ಹಾಸನ್ ಸ್ಪಷ್ಟಪಡಿಸಿದ್ದಾರೆ.
ತನ್ನ ಹೊಸ ರಾಜಕೀಯ ಪಕ್ಷದ ಹೆಸರನ್ನಾಗಲೀ ಅದರ ಸ್ಥಾಪನಾ ದಿನಾಂಕವನ್ನಾಗಲೀ ಕಮಲ ಹಾಸನ್ ಈ ತನಕ ಬಹಿರಂಗಪಡಿಸಿಲ್ಲ.
ಹಿಂದೂ ಭಯೋತ್ಪಾದಕರ ಕುರಿತಾದ ತನ್ನ ಹೇಳಿಕೆಯಿಂದ ಜನರಲ್ಲಿ ಉಂಟಾಗಿರುವ ನೋವನ್ನು ಶಮನ ಮಾಡುವ ಯತ್ನವನ್ನು ಕಮಲ ಹಾಸನ್ ತಮ್ಮ ಈ ಮೊದಲಿನ ಅಂಕಣ ಲೇಖನದಲ್ಲಿ ಮಾಡಿರುವುದು ಗಮನಾರ್ಹವಾಗಿದೆ.