ಚೆನ್ನೈ: ಮೇ.5 ರಂದು ತೆರೆಕಂಡ ʼದಿ ಕೇರಳ ಸ್ಟೋರಿʼ ವಿವಾದದಿಂದಲೇ ಸುದ್ದಿಯಾಗಿ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಮೊದಲು ಬ್ಯಾನ್ ಬಿಸಿ ತಟ್ಟಿ, ಒಂದಷ್ಟು ರಾಜ್ಯದಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೂ ಅಡ್ಡಿ ಉಂಟಾದರೂ ಅಂತಿಮವಾಗಿ ಸಿನಿಮಾ ಇದೆಲ್ಲವನ್ನು ಮೀರಿ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾವನ್ನು ಹಲವು ರಾಜ್ಯದಲ್ಲಿ ಟ್ಯಾಕ್ಸ್ ಫ್ರೀಗೊಳಿಸಲಾಗಿದೆ. ಕೆಲಕಡೆ ವಿದ್ಯಾರ್ಥಿನಿಯರಿಗೆ ಸಿನಿಮಾವನ್ನು ಉಚಿತವಾಗಿ ತೋರಿಸಲಾಗುತ್ತಿದೆ.
ಸಿನಿಮಾ ರಿಲೀಸ್ ಆದಾಗಿನಿಂದ ಲೀಡ್ ರೋಲ್ ನಲ್ಲಿ ನಟಿಸಿರುವ ಅದಾ ಶರ್ಮಾ ಸೇರಿದಂತೆ ನಿರ್ದೇಶಕ ಸುದೀಪ್ತೋ ಸೇನ್ ಅವರು ಸುದ್ದಿಯಲ್ಲಿದ್ದಾರೆ. ಸಿನಿಮಾದ ಪರವಾಗಿ ಅನೇಕ ಸೆಲೆಬ್ರಿಟಿಗಳು ನಿಂತಿದ್ದಾರೆ. ಅಷ್ಟೇ ದೊಡ್ಡಮಟ್ಟದಲ್ಲಿ ಕೆಲ ಸೆಲೆಬ್ರಿಟಿಗಳು ಸೇರಿದಂತೆ ಗಣ್ಯರು ಸಿನಿಮಾದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದ್ದಾರೆ.
ಕಾಲಿವುಡ್ ದಿಗ್ಗಜ ನಟ, ರಾಜಕೀಯವಾಗಿಯೂ ಗುರುತಿಸಿಕೊಂಡಿರುವ ಕಮಲ್ ಹಾಸನ್ ಅವರು ʼದಿ ಕೇರಳ ಸ್ಟೋರಿʼ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
Related Articles
“ನಾನು ಇಂಥ ನಿರ್ದಿಷ್ಟ ಉದ್ದೇಶವನ್ನು ಇಟ್ಟುಕೊಂಡು ಬರುವ ಸಿನಿಮಾಗಳಿಗೆ ವಿರುದ್ದವಾಗಿದ್ದೇನೆ. ಸಿನಿಮಾದ ಪೋಸ್ಟರ್ ಕೊನೆಯಲ್ಲಿ ಇದು ʼಸತ್ಯ ಘಟನೆ ಆಧಾರಿತʼ ಸಿನಿಮಾ ಎಂದು ಬರೆದರೆ ಮಾತ್ರ ಸಾಕಾಗುವುದಿಲ್ಲ. ಅದು ನಿಜವಾಗಿಯೂ ಸತ್ಯವಾಗಿರಬೇಕು ಮತ್ತು ಈ ಇದು ನಿಜವಾಗಿಲ್ಲ” ಎಂದು ಸಿನಿಮಾದ ಬಗ್ಗೆ ಅವರು ʼಇಂಡಿಯಾ ಟುಡೇʼಗೆ ಹೇಳಿದ್ದಾರೆ.
ಕೇರಳದ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಆ ಬಳಿಕ ಐಸಿಸ್ ಉಗ್ರ ಸಂಘಟನೆಗೆ ಸೇರುವ ಕಥೆ ʼದಿ ಕೇರಳ ಸ್ಟೋರಿʼಯಲ್ಲಿ ಹೇಳಲಾಗಿದೆ. ಇಂಥ 32 ಸಾವಿರ ಕೇರಳದ ಮಹಿಳೆಯರು ಮತಾಂತರಗೊಂಡು ಉಗ್ರ ಸಂಘಟನೆಗೆ ಸೇರಿದ್ದರು ಎಂದು ಸಿನಿಮಾದ ಟೀಸರ್ ನಲ್ಲಿ ಚಿತ್ರತಂಡ ಹೇಳಿತ್ತು. ಈ ಕಾರಣದಿಂದ ಸಿನಿಮಾಕ್ಕೆ ಭಾರೀ ವಿರೋಧ ವ್ಯಕ್ತವಾದ ಬಳಿಕ, 32 ಸಾವಿರದ ಸಂಖ್ಯೆಯನ್ನು 3 ಎಂದು ಬದಲಾಯಿಸಲಾಗಿತ್ತು.